ಪ್ರಗತಿವಾಹಿನಿ ಸುದ್ದಿ; ಕಾರವಾರ: ಪ್ಯಾಕೇಜ್ ಗುತ್ತಿಗೆಯ ವಿರುದ್ಧ ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದಿಂದ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ಧಾರವಾಡ ಪೀಠ ಮಾನ್ಯ ಮಾಡಿದ್ದು, ನಗರೋತ್ಥಾನ ಕಾಮಗಾರಿಗಳನ್ನ ಪ್ಯಾಕೇಜ್ ಟೆಂಡರ್ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ.
ಇಲ್ಲಿನ ನಗರಸಭೆಯು ನಗರೋತ್ಥಾನ ಹಂತ- 4ರಲ್ಲಿ 18 ಕೋಟಿ ರೂ.ಗಳ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಲು ಟೆಂಟರ್ ಕರೆದಿತ್ತು. ಇದರಲ್ಲಿ ರಸ್ತೆ, ಚರಂಡಿ ಸೇರಿದಂತೆ ಇನ್ನಿತರೆ ಸಣ್ಣಪುಟ್ಟ ಕಾಮಗಾರಿಗಳು ಸೇರಿವೆ. ಈ ಬಗ್ಗೆ ಗುತ್ತಿಗೆದಾರರ ಸಂಘದಿಂದ ಹೈಕೋರ್ಟ್ ವಕೀಲರಾದ ಶರಣು ಅವರನ್ನು ಸಂಪರ್ಕಿಸಿ, ಎ.ಸಿ.ಚಾಕಲಬ್ಬಿ ಅಸೋಶಿಯೇಟ್ ಧಾರವಾಡದ ಮೂಲಕ ಹೈಕೋರ್ಟ್ ಧಾರವಾಡ ಪೀಠಕ್ಕೆ ಪ್ಯಾಕೇಜ್ ರದ್ಧತಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಲಾಗಿತ್ತು. ಕೋರ್ಟ್ ಎಲ್ಲಾ ಪೂರಕ ದಾಖಲೆಗಳನ್ನು ಪರಿಗಣಿಸಿ ನಗರೋತ್ಥಾನ ಕಾಮಗಾರಿಗಳನ್ನು ಪ್ಯಾಕೇಜ್ ಮಾಡುವುದಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಈ ಆದೇಶ ಗುತ್ತಿಗೆದಾರರಲ್ಲಿ ಸಂತಸ ಮೂಡಿಸಿದ್ದು, ಶುಕ್ರವಾರ ಕಾರವಾರ ನಗರಸಭೆಯ ಗಾಂಧಿ ಪಾರ್ಕ್ನಲ್ಲಿ ಮಹಾತ್ಮಗಾಂಧಿ ಗಾಂಧಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚುವ ಮೂಲಕ ಕೋರ್ಟ್ ಆದೇಶವನ್ನು ಸಂಭ್ರಮದಿಂದ ಸ್ವಾಗತಿಸಿಕೊಂಡರು.
ಈ ವೇಳೆ ಮಾತನಾಡಿದ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ, ಕಾರವಾರ ಗುತ್ತಿಗೆದಾರರಿಗೆ ಮೊದಲ ಹೆಜ್ಜೆಯಲ್ಲಿಯೇ ಜಯ ಸಿಕ್ಕಿದೆ. ಹೈಕೋರ್ಟ್ ಧಾರವಾಡ ಪೀಠವು ಗುತ್ತಿಗೆದಾರರ ಕುಂದು- ಕೊರತೆ ಹಾಗೂ ಪೂರಕ ದಾಖಲೆಗಳನ್ನೆಲ್ಲ ಕೂಲಂಕುಷವಾಗಿ ಪರಿಶೀಲಿಸಿ, ನಗರೋತ್ಥಾನ ಕಾಮಗಾರಿಗಳನ್ನು ಪ್ಯಾಕೇಜ್ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಇಡೀ ಜಿಲ್ಲೆಯ ಗುತ್ತಿಗೆದಾರರಿಗೆ ನ್ಯಾಯ ಸಿಕ್ಕಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸ್ಥಳೀಯ ಶಾಸಕರು ಬಹಳಷ್ಟು ಕಾಮಗಾರಿಗಳನ್ನ ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲು ಇಲಾಖೆಗಳಿಗೆ ಲಿಖಿತವಾಗಿ ಶಿಫಾರಸ್ಸು ನೀಡುತ್ತಿದ್ದರು. ಕಾರವಾರ- ಅಂಕೋಲಾ ಕ್ಷೇತ್ರದ ಸುಮಾರು 62 ಕೋಟಿ ವೆಚ್ಚದ ಕಾಮಗಾರಿಗಳನ್ನ ಕೆಆರ್‌ಐಡಿಎಲ್, ಕೆಆರ್‌ಆರ್‌ಡಿಎಲ್‌ಗೆ ನೀಡಲು ಸರ್ಕಾರದಿಂದಲೇ ನಿರ್ದೇಶನ ಮಾಡಿಸಿಕೊಟ್ಟಿದ್ದರು. ಆದರೆ, ಮೇ 11ರಂದು ಸರ್ಕಾರ, ಒಂದು ಕೋಟಿ ರೂ.ಗಳಿಗಿಂತ ಅಧಿಕ ವೆಚ್ಚದ ಕಾಮಗಾರಿಗಳನ್ನ ಪ್ಯಾಕೇಜ್ ಮಾಡದಂತೆ ಆದೇಶಿಸಿತ್ತು. ಜುಲೈನಲ್ಲಿ ಹೈಕೋರ್ಟ್ ಕೂಡ ಈ ಆದೇಶವನ್ನು ಎತ್ತಿ ಹಿಡಿದಿತ್ತು. ಸರ್ಕಾರ ಹಾಗೂ ಹೈಕೋರ್ಟ್ನ ಎರಡೂ ಆದೇಶಗಳನ್ನು ಲಗತ್ತಿಸಿ, ನಗರಸಭೆ, ನಗರಾಭಿವೃದ್ಧಿ ಕೋಶದಿಂದ ಯಾವುದೇ ಕಾಮಗಾರಿಗಳನ್ನು ಪ್ಯಾಕೇಜ್ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅರಿಕೆ ಮಾಡಿಕೊಂಡಿದ್ದೆವು. ಆ.20ರಂದು ಅಧಿಕಾರಿಗಳ ಸಭೆ ನಡೆದಾಗಲೂ ಮನವಿ ಮಾಡಿಕೊಂಡಿದ್ದೆವು. ಆದರೂ ಇದ್ಯಾವುದನ್ನೂ ಪರಿಗಣಿಸದೇ ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು ಎಂದು ತಿಳಿಸಿದರು.
ಸರ್ಕಾರದ ಆದೇಶವಿದ್ದರೂ ಧಿಕ್ಕರಿಸಿ ಹೀಗೆ ಮಾಡುತ್ತಿರುವುದರಿಂದ ಗುತ್ತಿಗೆದಾರರಿಗೆ ಬಹಳ ಅನ್ಯಾಯವಾಗುತ್ತಿತ್ತು. ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾದಾಗ ನ್ಯಾಯಾಲಯದ ಬಾಗಿಲು ತಟ್ಟುವ ಅನಿವಾರ್ಯತೆ ಎದುರಾಗಿತ್ತು.
ಸೂಕ್ತ ದಾಖಲೆಗಳೊಂದಿಗೆ ಧಾರವಾಡ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದ್ದೆವು. ನಮಗೆ ಮೊದಲ ಹಂತದಲ್ಲೇ ಜಯ ಸಿಕ್ಕಿದ್ದು, ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದರು.
ಈ ವೇಳೆ ಗುತ್ತಿಗೆದಾರರಾದ ಸಂತೋಷ್ ಸೈಲ್, ದೀಪಕ್ ನಾಯ್ಕ, ರಾಜೇಶ್ ಶೇಟ್, ಅನೀಲಕುಮಾರ್ ಮಾಳ್ಸೇಕರ್, ಪ್ರಸಾದ್ ಕಾಣೇಕರ್, ಸುಮಿತ್ ಅಸ್ನೋಟಿಕರ್, ಆನಂದ್ ನಾಯ್ಕ, ಉದಯ ವಿ.ನಾಯ್ಕ, ವಿಜಯ್, ಸತೀಶ್ ವಿ.ನಾಯ್ಕ, ಲಕ್ಷö್ಮಣ ಗುನಗಿ, ನಿತಿನ್ ಕೊಳಮಕರ್, ಪ್ರಮೋದ್ ಸಾಗೇಕರ್, ಸುನಿಲ್ ಸೈಲ್, ರವೀಂದ್ರ ಕೇರ್ಕರ್, ಪರಮಾನಂದ ನಾಯ್ಕ, ರಾಮ ಜೋಶಿ, ರೂಪೇಶ್ ನಾಯ್ಕ, ಸಮೀರ್ ನಾಯ್ಕ ಮುಂತಾದವರಿದ್ದರು.
ಮಣಿಯದಿದ್ದರೆ ಮತ್ತೆ ಹೋರಾಟ…
ಜನಪ್ರತಿನಿಧಿಗಳು ಈಗಲಾದರೂ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯ ಮಾಡಬಾರದು. ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಒಂದು ಪಾಠವೆಂದು ತಿಳಿಯಬೇಕು. ಕ್ಷೇತ್ರದಲ್ಲಿ 60 ಕೋಟಿ ರೂ.ಗಳ ಕಾಮಗಾರಿಗಳನ್ನ ಕಳೆದ ಡಿಸೆಂಬರ್ ನಂತರ ಕೆಆರ್‌ಐಡಿಎಲ್‌ಗೆ ನೀಡಲಾಗಿದೆ. ಆದರೆ ಇನ್ನೂ ಕಾಮಗಾರಿ ಆರಂಭಿಸಲಿಲ್ಲ. ಈ ಕಾಮಗಾರಿಗಳ ಟೆಂಡರ್ ರದ್ದುಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟಕ್ಕೆ ಅಣಿಯಾಗುತ್ತೇವೆ. ಜನಪ್ರತಿನಿಧಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದು ಮಾಧವ ನಾಯಕ ಹೇಳಿದ್ದಾರೆ.
ರಾಹುಲ್ ಗಾಂಧಿ ಟಿ ಶರ್ಟ್ ಕುರಿತು ಬಿಜೆಪಿ ಟ್ವೀಟ್ ಗೆ ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ
https://pragati.taskdun.com/politics/rahul-gandhit-shirtcongress-reactedsharply-to-bjps-tweet/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ