ಪ್ರಗತಿವಾಹಿನಿ ಸುದ್ದಿ, ಹಾವೇರಿ: “20 ವರ್ಷಗಳ ಹಿಂದೆ ಪ್ರಾರಂಭವಾದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು ಎಸ್ಸಿ ಎಸ್ಟಿ, ಒಬಿಸಿ, ಮೈನಾರಿಟಿ ಸಮುದಾಯದ ಮಕ್ಕಳಿಗೆ ಗುಣಾತ್ಮಕ ವಿದ್ಯೆ ನೀಡುವುದರೊಂದಿಗೆ ಖಾಸಗಿ ವಲಯದ ವಾತಾವರಣ ನಿರ್ಮಾಣ ಮಾಡಿ ಉನ್ನತ ಶಿಕ್ಷಣಕ್ಕೆ ಬುನಾದಿ ಹಾಕಲು ಪೂರಕವಾಗಿವೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಶಿಗ್ಗಾಂವಿಯ ಶಿವಪುರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
“”ಶಿಗ್ಗಾಂವಿಯಲ್ಲಿ ಒಟ್ಟು 8 ವಸತಿ ಶಾಲೆ ಮತ್ತು ಕಾಲೇಜುಗಳಿವೆ. ಕಳೆದ 10-15 ವರ್ಷಗಳಲ್ಲಿ ಅಭಿವೃದ್ಧಿ ಕಂಡು ಶಿಕ್ಷಣಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ. ಈ ಭಾಗದಲ್ಲಿ ಶಾಲೆಗಳಿಗೆ ಕಟ್ಟಡ ಇದ್ದು ಅವುಗಳಿಗೆ ಸೌಲಭ್ಯಗಳ ಬೇಡಿಕೆಯನ್ನು ಮನಗೊಂಡು ಅವುಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು” ಎಂದು ಅವರು ಹೇಳಿದರು.
“ಅಲ್ಲದೇ ಮನೆ ಬಿಟ್ಟು ಓದಲು ಬಂದ ಮಕ್ಕಳಿಗೆ ಮನೋಬಲ ಹೆಚ್ಚಿಸುವ ರೀತಿಯಲ್ಲಿ ಶಿಕ್ಷಣ ಕೊಡಬೇಕು” ಎಂದು ಸಿ ಅವರು ಆಡಳಿತ ವರ್ಗಕ್ಕೆ ಸೂಚಿಸಿದರು.
ಬಜೆಟ್ ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಹಣ:
“ನನ್ನ ಎರಡೂ ಬಜೆಟ್ ನಲ್ಲಿ ಶೇ.12ರಷ್ಟನ್ನು ಶಿಕ್ಷಣಕ್ಕೆ ಮೀಸಲಿಟ್ಟಿದ್ದೇನೆ. ಹಿಂದೆ ಯಾವುದೇ ಸರ್ಕಾರಗಳೂ ಇಷ್ಟು ಹಣವನ್ನು ಶಿಕ್ಷಣಕ್ಕೆ ಇಟ್ಟಿರಲಿಲ್ಲ. ಆರೋಗ್ಯಕ್ಕೆ ಶೇ.11 ಮೀಸಲಿಟ್ಟಿದ್ದೇನೆ. ಯಾವುದೇ ಜನಾಂಗ ಮುಂದೆ ಬರಬೇಕಾದರೆ ಶಿಕ್ಷಣ ಮತ್ತು ಆರೋಗ್ಯ ಮುಖ್ಯ ಎಂಬ ಅರಿವಿನಿಂದ ಈ ಕೆಲಸ ಮಾಡಿದ್ದೇನೆ. ಸ್ವಾಮಿ ವಿವೇಕಾನಂದರ ಸ್ಫೂರ್ತಿ ಮಕ್ಕಳಿಗೆ ಸಿಗಲಿ ಎಂದು ವಿವೇಕ ಯೋಜನೆಯಡಿ ಈ ವರ್ಷ 9500 ಹೊಸ ಶಾಲಾ ಕೊಠಡಿಗಳನ್ನು ಕಟ್ಟುತ್ತಿದ್ದೇವೆ. ಜತೆಗೆ ಶಾಲೆಗಳ ರಿಪೇರಿಗೂ ವಿಶೇಷ ಅನುದಾನ ಕೊಟ್ಟಿದ್ದೇನೆ” ಎಂದು ಸಿಎಂ ಹೇಳಿದರು.
ಹೊಸ ಹೈಸ್ಕೂಲ್, ಪಿಯುಸಿಗೆ ಅನುಮತಿ:
“ಈ ವರ್ಷ ಹೊಸ ಹೈಸ್ಕೂಲ್ ಹಾಗೂ ಪಿಯುಸಿ ಕಾಲೇಜುಗಳನ್ನು ಪ್ರಾರಂಭಿಸಲು ಅನುಮಮತಿ ನೀಡಲಾಗಿದೆ. ಉನ್ನತ ಶಿಕ್ಷಣಕ್ಕೆ 180 ಕೋಟಿ ವೆಚ್ಚದಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಪಾಳಲಿಟೆಕ್ನಿಕ್ ಕಾಲೇಜುಗಳನ್ನು ಎಂಜಿನಿಯರಿಂಗ್ ಗೆ ಉನ್ನತೀಕರಣ ಮಾಡಲೂ ಬಜೆಟ್ ನಲ್ಲಿ ಅನುದಾನ ಇರಿಸಲಾಗಿದೆ. ಈ ಮೂಲಕ ನನ್ನ ಕ್ಷೇತ್ರದಲ್ಲೂ ಎಂಜಿನಿಯರಿಂಗ್ ಕಾಲೇಜು ಆಗಬೇಕೆಂಬ ನನ್ನ ಕನಸು ನನಸಾಗುತ್ತಿದೆ” ಎಂದು ಬೊಮ್ಮಾಯಿ ಹೇಳಿದರು.
ಮಕ್ಕಳ ಜ್ಞಾನ ಹೆಚ್ಚಲಿ:
“ನನ್ನ ಕ್ಷೇತ್ರದಲ್ಲಿ ಎಂಜಿನಿಯರಿಂಗ್ ಆಗ್ತಿದೆ, ವೆಟರಿನರಿ ಕಾಲೇಜು, ಟೆಕ್ಸ್ ಟೈಲ್ ತರಬೇತಿ ಸಂಸ್ಥೆ, 2 ಐಟಿಐಗಳು ಇದೆ. ಸಾಮಾನ್ಯ ಶಿಕ್ಷಣದ ಜತೆಗೆ ತಾಂತ್ರಿಕ ಶಿಕ್ಷಣಕ್ಕೂ ಒತ್ತು ಕೊಟ್ಟು ನಾವು ಕೆಲಸ ಮಾಡ್ತಿದ್ದೇವೆ. ಮಕ್ಕಳ ಜ್ಞಾನ ಹೆಚ್ಚಿದರೆ ಸ್ವಂತ ಚಿಂತನೆ ಅಭಿವೃದ್ಧಿ ಆಗ್ತದೆ. ಸ್ವಂತ ಚಿಂತನೆ ಇದ್ದರೆ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಸಾಧ್ಯವಿದೆ. ಮಕ್ಕಳು ನಿತ್ಯವೂ ಏನಾದರೂ ಕಲಿಯಬೇಕು. ಇದಕ್ಕೆ ವಿನಯಾವಾಗಿ ವಿದ್ಯೆ ಕಲಿಯಬೇಕು. ಮತ್ತು ತಾರ್ತಿಕ ಚಿಂತನೆಯನ್ನು ಬೆಳೆಸಿಕೊಳ್ಳಿ” ಎಂದು ಸಿಎಂ ಬೊಮ್ಮಾಯಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ