
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಸೇರಿದಂತೆ ಹೈಪ್ರೊಫೈಲ್ ಹನಿಟ್ರ್ಯಾಪ್ ಕೇಸ್ ಗೆ ಸಂಬಂಧಿಸಿದಂತೆ ಕಿಂಗ್ ಪಿನ್ ಆರೋಪಿಯನ್ನು ಬೆಂಗಳೂರಿನ ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
ಆರತಿ ದಯಾಳ್ ಬಂಧಿತ ಆರೋಪಿ. ಮಧ್ಯಪ್ರದೇಶದಲ್ಲಿ ನಡೆದಿದ್ದ ಹೈಪ್ರೊಫೈಲ್ ಹನಿಟ್ರ್ಯಾಕ್ ಕೇಸ್ ನ ಮಾಸ್ಟರ‍್ ಮೈಂಡ್ ಆಗಿರುವ ಈಕೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದಳು. ಹನಿಟ್ರ್ಯಾಪ್ ಬಳಿಕ ಕಳ್ಳತನದ ಹಾದಿ ಹಿಡಿದಿದ್ದಳು.
ಮಧ್ಯಪ್ರದೇಶದ ಇಂದೋರ್ ನ ಪುರಸಭೆ ಇಂಜಿನಿಯರ್ ಹರ್ಭಜನ್ ಎಂಬುವವರ ಬಳಿ ಆರತಿ ದಯಾಳ್ ಹಾಗೂ ಮೋನಿಯಾ ಎಂಬುವವರು 3 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಇಂಜಿನಿಯರ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿ ಆರತಿ ದಯಾಳ್ ಳ ಹನಿಟ್ರ್ಯಾಪ್ ಜಾಲ ಬಯಲಾಗಿತ್ತು.
ಆರತಿ ದಯಾಳ್ ಜೊತೆ ಶ್ವೇತಾ ಎಂಬ ಇನ್ನೋರ್ವಳು ಈ ದಂಧೆಯಲ್ಲಿದ್ದಳು. ಬಡ ಕಾಲೇಜು ವಿದ್ಯಾರ್ಥಿನಿಯರಿಗೆ ಐಶಾರಾಮಿ ಜೀವನದ ಆಸೆ ತೋರಿಸಿ ಬಳಿಕ ಅವರನ್ನು ಹನಿಟ್ರ್ಯಾಪ್ ಜಾಲಕ್ಕೆ ಕೆಡವಿ ರಾಜಕಾರಣಿಗಳು, ಉನ್ನತಾಧಿಕಾರಿಗಳಿಗೆ ಯುವತಿಯರನ್ನು ಪೂರೈಸುತ್ತಿದ್ದರಲ್ಲದೇ, 40 ವೇಶ್ಯೆಯರನ್ನು ಬಾಡಿಗೆ ಆಧಾರದಲ್ಲಿ ಇಟ್ಟುಕೊಳ್ಳುತ್ತಿದ್ದರು ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ.
ಹೈಪ್ರೊಫೈಲ್ ಹನಿಟ್ರ್ಯಾಪ್ ಕೇಸ್ ನಲ್ಲಿ 2019ರಲ್ಲಿ ಆರತಿ ದಯಾಳ್ ಬಂಧನಕ್ಕೀಡಾಗಿ, ಜೈಲು ಸೇರಿದ್ದಳು. ಬಳಿಕ 2020ರಲ್ಲಿ ಬಿಡುಗಡೆಗೊಂಡು ಹೊರ ಬಂದಿದ್ದಳು. ನಂತರ ತನ್ನ ಹೆಸರನ್ನು ಸೋನು, ಸಮಂತಾ, ಆರತಿ ಅಗರ್ವಾಲ್ ಎಂದು ಹೆಸರು ಬದಲಿಸಿಕೊಳ್ಳುತ್ತಾ, ಬೇರೆ ಬೇರೆ ಕಡೆಗಳಲ್ಲಿ ವಾಸಿಸುತ್ತಾ ತಲೆಮರೆಸಿಕೊಂಡಿದ್ದಳು. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಈಗ ಹನಿಟ್ರ್ಯಾಪ್ ಬಳಿಕ ಕಳ್ಳತನದ ಹಾದಿ ಹಿಡಿದಿದ್ದಳು.
ಬೆಂಗಳೂರು, ಚೆನ್ನೈ ಸೇರಿದಂತೆ ಹಲವೆಡೆ ದರೋಢೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎನ್ನಲಾಗಿದೆ. ಸ್ಪಾಗಳಲ್ಲಿ ಕೆಲಸಕ್ಕೆ ಸೇರುತ್ತಿದ್ದ ಈಕೆ ಹತ್ತು ದಿನಗಳಲ್ಲಿ ಸ್ಪಾದಲ್ಲಿದ್ದ ಇತರ ಯುವತಿಯರ ಪಿಜಿ, ಹಾಸ್ಟೇಲ್, ರೂಮ್ ಗಳಲ್ಲಿ ಅವರ ಜೊತೆಯೇ ಇದ್ದು ಅವರ ಹಣ, ಚಿನ್ನಾಭರಣಗಳನ್ನು ದೋಚಿ ಎಸ್ಕೇಪ್ ಆಗುತ್ತಿದ್ದಳು. ಇದೀಗ ಆರತಿ ದಯಾಳ್ ನನ್ನು ಬಂಧಿಸಿರುವ ಬೆಂಗಳೂರು ಪೊಲೀಸರು, ಆಕೆಯನ್ನು ಮಧ್ಯಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ