Karnataka News

ಹೆದ್ದಾರಿಗಳು ದೇಶದ ಅಭಿವೃದ್ಧಿಗೆ ರಾಜಮಾರ್ಗಗಳು: ನಿತಿನ್ ಗಡ್ಕರಿ

ಬೆಳಗಾವಿಯಲ್ಲಿ ಎಥೆನಾಲ್ ಉತ್ಪಾದನೆ-ಬಳಕೆಗೆ ಸಲಹೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದೇಶದಾದ್ಯಂತ ಗ್ರೀನ್ ಕಾರಿಡಾರ್ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ದೇಶದ ಪ್ರಮುಖ ನಗರಗಳ ಮಧ್ಯೆ ಹೆದ್ದಾರಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸಿ ಸುಗಮ, ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಹೇಳಿದರು.
ಬೆಳಗಾವಿ ಜಿಲ್ಲೆಯ ೧೬೨೨ ಕೋಟಿ ವೆಚ್ಚದ ಹೊನಗಾ-ಝಾಡಶಹಾಪುರ ಚತುಷ್ಪಥ ರಿಂಗ್ ರಸ್ತೆ, ೯೪೧ ಕೋಟಿ ವೆಚ್ಚದ ಚಿಕ್ಕೋಡಿ ಬೈಪಾಸ್ ನಿಂದ-ಗೋಟೂರವರೆಗಿನ ಚತುಷ್ಪಥ ಹಾಗೂ ಶಿರಗುಪ್ಪಿಯಿಂದ ಅಂಕಲಿವರೆಗಿನ ೮೮೭ ಕೋಟಿ ವೆಚ್ಚದ ರಸ್ತೆ ಅಗಲೀಕರಣ ಸೇರಿದಂತೆ ಒಟ್ಟಾರೆ ೧೩ ಸಾವಿರ ಕೋಟಿ ಮೌಲ್ಯದ ೬೮೦ ಕಿ.ಮೀ. ಉದ್ದದ ೩೬ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಗುರುವಾರ(ಫೆ೨೨) ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರ ಸಮರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕಳೆದ ಅನೇಕ ವರ್ಷಗಳಿಂದ ಬೆಳಗಾವಿ ರಿಂಗ್ ರಸ್ತೆ ಸಮಸ್ಯೆ ಚರ್ಚೆಯಾಗಿತ್ತು. ಸುರೇಶ್ ಅಂಗಡಿ ಅವರು ಹಾಗೂ ಎಲ್ಲ ಶಾಸಕರು ಪ್ರಸ್ತಾಪಿಸಿದ್ದರು.
ಇದೀಗ ಬೆಳಗಾವಿ ರಿಂಗ್ ರಸ್ತೆಗೆ ಕಾಲ ಕೂಡಿ ಬಂದಿದೆ. ರಾಜ್ಯದಲ್ಲಿ ೮೨೦೦ ಕಿ.ಮೀ ರಾ.ಹೆ.ಇದೆ. ರಾಜ್ಯದಲ್ಲಿ ೩ ಲಕ್ಷ ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಕೈಗೊಳ್ಳುವ ಗುರಿ ಇತ್ತು. ಇಂದು ಬಹುತೇಕ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ರಸ್ತೆಗಳು ಅಭಿವೃದ್ಧಿಗೆ ಮಾರ್ಗಗಳಾಗಿವೆ. ಬೆಳಗಾವಿ ಬೈಪಾಸ್ ೩೪೦೦ ಕೋಟಿ ವೆಚ್ಚದ ಈ ಕಾಮಗಾರಿಯಿಂದ ಬೆಳಗಾವಿ-ಗೋವಾ ರಾಜ್ಯದ ನಡುವಿನ ಪ್ರಯಾಣದ ಅವಧಿಯನ್ನು ಕಡಿತಗೊಳಿಸಲಿದೆ.
ಬೆಳಗಾವಿ-ರಾಯಚೂರ ಮಹತ್ವದ ಕಾರಿಡಾರ್:
ಬೆಳಗಾವಿ-ಹುನಗುಂದ-ರಾಯಚೂರ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದ ೯೦೦೦ ಕೋಟಿ ವೆಚ್ಚದ ಕಾಮಗಾರಿಯು ಪೂರ್ಣಗೊಂಡ ಬಳಿಕ ಪ್ರಯಾಣದ ಅವಧಿಯು ಮೂರೂವರೆ ಗಂಟೆಗೆ ಇಳಿಯಲಿದೆ.
ಬೆಳಗಾವಿ-ಸಂಕೇಶ್ವರ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಅರಣ್ಯ ಇಲಾಖೆಯ ಅನುಮತಿ ಸಕಾಲದಲ್ಲಿ ದೊರಕದಿರುವುದರಿಂದ ಕಾಮಗಾರಿ ಕುಂಠಿತಗೊಂಡಿದೆ. ಆದ್ದರಿಂದ ರಾಜ್ಯ ಸರಕಾರವು ಅರಣ್ಯ ಇಲಾಖೆಯ ಅನುಮತಿ ದೊರಕಿಸಿಕೊಡುವುದರ ಜತೆಗೆ ಇತರೆ ಅಡ್ಡಿಗಳನ್ನು ನಿವಾರಿಸಿಕೊಟ್ಟರೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುಕೂಲವಾಗುತ್ತದೆ ಎಂದು ಗಡ್ಕರಿ ಹೇಳಿದರು.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೆದ್ದಾರಿ ಜಾಲವನ್ನು ಜೋಡಿಸುವ ಮೂಲಕ ಒಟ್ಟಾರೆ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವುದರ ಜತೆಗೆ ಅಭಿವೃದ್ಧಿಗೆ ಪೂರಕವಾದ ವಾತಾವರಣ ಲಭಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಆಶಯ ವ್ಯಕ್ತಪಡಿಸಿದರು.
ಬೆಂಗಳೂರು ರಿಂಗ್ ರಸ್ತೆ- ಜನವರಿ ೨೦೨೫ ರಲ್ಲಿ ಪೂರ್ಣ:
ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಗೊಳಿಸಲು ೧೭ ಸಾವಿರ ಕೋಟಿ ವೆಚ್ಚದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಾರಿಗೆ ಸಮಸ್ಯೆ ನಿವಾರಣೆ ಜತೆಗೆ ರಾಜ್ಯದ ಜನರಿಗೆ ಅನುಕೂಲವಾಗಲಿದೆ.ಜನವರಿ ೨೦೨೫ ರ ವೇಳೆಗೆ ಆರು ಪ್ಯಾಕೆಜ್ ಗಳ ರಿಂಗ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಚಿವ ಗಡ್ಕರಿ ತಿಳಿಸಿದರು.
ಕರ್ನಾಟಕದ ಬಂದರುಗಳು ಅಭಿವೃದ್ಧಿಗೊಂಡರೆ ರಾಜ್ಯದ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ರಾಜ್ಯದ ಒಟ್ಟಾರೆ ಪ್ರಗತಿಯಲ್ಲಿ ರಸ್ತೆಗಳ ಪಾತ್ರ ಪ್ರಮುಖವಾಗಲಿದೆ ಎಂದರು.
ಲೋಕೋಪಯೋಗಿ ಇಲಾಖೆ ಕಳಿಸಿದ ೧೭ ಪ್ರಮುಖ ಯೋಜನೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆದಷ್ಟು ಬೇಗನೇ ಇವುಗಳಿಗೆ ಅಗತ್ಯ ಮಂಜೂರಾತಿ ನೀಡಲಾಗುವುದು. ಸಿ.ಆರ್.ಎಫ್. ಅಡಿ ೨೦೦೦ ಕೋಟಿ ವೆಚ್ಚದ ಕಾಮಗಾರಿಗಳನ್ನು ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡಲಾಗಿದೆ ಎಂದು ಸಚಿವ ಗಡ್ಕರಿ ತಿಳಿಸಿದರು.
ಬೆಳಗಾವಿಯಲ್ಲಿ ಎಥೆನಾಲ್ ಬಳಕೆಗೆ ಗಡ್ಕರಿ ಸಲಹೆ:
ಬೆಳಗಾವಿಯಲ್ಲಿ ಕಬ್ಬು ಬೆಳೆ ಜಾಸ್ತಿಯಾಗಿದೆ. ಎಥೆನಾಲ್ ಆರ್ಥಿಕತೆ ತೀವ್ರ ಬೆಳವಣಿಗೆ ಕಂಡಿದೆ. ಪೆಟ್ರೋಲ್ ಬದಲಾಗಿದೆ ಎಥೆನಾಲ್ ಬಳಕೆಗೆ ಪ್ರೋತ್ಸಾಹ ನೀಡಲು ಎಥೆನಾಲ್ ಪಂಪ್ ಸ್ಥಾಪನೆಗೆ ಅನುಮತಿ ನೀಡಲಾಗುತ್ತಿದೆ.
ಬೆಳಗಾವಿಯಲ್ಲಿ ಎಥೆನಾಲ್ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚು ಅವಕಾಶಗಳಿವೆ. ರೈತರ ಅಭಿವೃದ್ಧಿ ಮತ್ತು ಪರಿಸರ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯಾದ್ಯಂತ ಎಥೆನಾಲ್ ಬಳಕೆಗೆ ರಾಜ್ಯ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಗಡ್ಕರಿ ಸಲಹೆ ನೀಡಿದರು.
ಮುಂಬರುವ ದಿನಗಳಲ್ಲಿ ಜಗತ್ತಿಗೆ ಎಥೆನಾಲ್ ರಫ್ತುಗೊಳಿಸುವ ಗುರಿಯನ್ನು ಹೊಂದಲಾಗಿದೆ. ಭವಿಷ್ಯದಲ್ಲಿ ಎಥೆನಾಲ್ ಹಾಗೂ ಮಿಥೆನಾಲ್ ಆಧಾರಿತ ವಾಹನಗಳನ್ನು ರಸ್ತೆಗಿಳಿಸುವ ಮೂಲಕ ಪರಿಸರ ರಕ್ಷಣೆ ಜತೆಗೆ ರೈತರ ಆರ್ಥಿಕಾಭಿವೃದ್ಧಿಗೂ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಗಡ್ಕರಿ ಹೇಳಿದರು.
ಮುಂದಿನ ಎರಡು ಮೂರು ವರ್ಷಗಳಲ್ಲಿ ರಾಜ್ಯದ ರಸ್ತೆಗಳು ಸುಧಾರಣೆಯಾಗಬೇಕು. ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಮಗ್ರ ಅಭಿವೃದ್ಧಿಗೊಳಿಸುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕನಸಾಗಿದೆ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದರು.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು, ಕುಂಠಿತಗೊಂಡಿರುವ ೧೮ ಕಾಮಗಾರಿಗಳನ್ನು ತ್ವರಿತಗೊಳಿಸಲು ಅನುಕೂಲವಾಗುವಂತೆ ರಾಜ್ಯ ಸರಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಗಡ್ಕರಿ ಅವರು ಪಕ್ಷಾತೀತವಾಗಿ ಕೆಲಸ ಮಾಡುವ ಮೂಲಕ ರಾಜ್ಯದ ರಸ್ತೆ ಕಾಮಗಾರಿಗಳಿಗೆ ವೇಗ ಸಿಕ್ಕಿದೆ. ಅವರು ದೇಶದಾದ್ಯಂತ ಮಾಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಗಮನಿಸಿದರೆ ಅವರಿಗೆ “ರಸ್ತೆಗಳ ಮಹಾರಾಜ್” ಎಂದು ಕರೆಯಬಹುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಮೇಲ್ಸೇತುವೆ, ಗೋಕಾಕ ಫಾಲ್ಸ್ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸುವುದಾಗಿ ಅವರು ಈಗಾಗಲೇ ಭರವಸೆಯನ್ನು ನೀಡಿರುತ್ತಾರೆ. ರಾಜ್ಯದ ಎಲ್ಲ ಯೋಜನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂಬರುವ ದಿನಗಳಲ್ಲೂ ಕೂಡ ಇದೇ ರೀತಿ ಸಹಕಾರ ನೀಡುವ ಮೂಲಕ ಅಭಿವೃದ್ಧಿ ವೇಗಕ್ಕೆ ಕೈಜೋಡಿಸಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಕೇವಲ ಬೆಳಗಾವಿ ಜಿಲ್ಲೆಯೊಂದರಲ್ಲೇ ೪೨೩೭ ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಜತ್ ಜಾಂಬೋಟಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು; ರಾಜಹಂಸಗಡ ಕೋಟೆಯನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ಕೇಬಲ್ ಕಾರ್ ಸೌಕರ್ಯ ಕಲ್ಪಿಸಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮನವಿ ಮಾಡಿಕೊಂಡರು.
ಸಂಸದೆ ಮಂಗಲ ಅಂಗಡಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಮಂಜೂರು ಮಾಡಿದ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಬೆಳಗಾವಿ ರಿಂಗ್ ರಸ್ತೆ ಮಾಜಿ ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಅವರ ಕನಸಾಗಿತ್ತು. ಧಾರವಾಡ-ಸವದತ್ತಿ-ಯರಗಟ್ಟಿ-ಮುಧೋಳ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಮಂಗಲ ಅಂಗಡಿ ಮನವಿ ಮಾಡಿಕೊಂಡರು.
ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮಂಗಲ ಅಂಗಡಿ ಪಿ.ಸಿ.ಗದ್ದಿಗೌಡರ, ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ಶಾಸಕರಾದ ಅಭಯ್ ಪಾಟೀಲ, ವಿಠ್ಠಲ ಹಲಗೇಕರ, ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು.

Related Articles

Back to top button