ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾಗಿದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆದಿದ್ದು, ಸರ್ಕಾರದ ಪರ ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದು, ಸಮವಸ್ತ್ರ ಸಂಹಿತೆ ಜಾರಿ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದೇಶ ಪ್ರತಿ ಪರಿಶೀಲಿಸಿದ ನ್ಯಾಯಮೂರ್ತಿಗಳು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಅವರ ವಾದವನ್ನು ಆಲಿಸಿದರು.
ಕೇರಳ ಹೈಕೋರ್ಟ್, ಮಲೇಷಿಯಾ ಸುಪ್ರೀಂ ಕೋರ್ಟ್, ರಾಷ್ಟ್ರಗೀತೆ ಕುರಿತ ಕೋರ್ಟ್ ತೀರ್ಪು ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದ ತೀರ್ಪುಗಳನ್ನು ಉಲ್ಲೇಖಿಸಿದ ವಕೀಲ ದೇವದತ್ ಕಾಮತ್, ಅಂತಿಮವಾಗಿ ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆ. ಸಾರ್ವಜನಿಕ ಸುವ್ಯವಸ್ಥೆ ನೆಪದಲ್ಲಿ ಧಾರ್ಮಿಕತೆಗೆ ಅಡ್ಡಿ ನೀದಬಾರದು. ಬೇರೆ ಬೇರೆ ಧರ್ಮಗಳಿಗೆ ಗೌರವ ನೀಡುವುದು ಜಾತ್ಯಾತೀತತೆ. ನಾಮ, ಕ್ರಾಸ್, ಹಿಜಾಬ್ ಧರಿಸುವುದು ಜಾತ್ಯಾತೀತತೆಗೆ ಪೂರಕ. ಧಾರ್ಮಿಕ ಅಸ್ಪೃಶ್ಯತೆಗೆ ಸರ್ಕಾರ ಅವಕಾಶ ನೀಡಬಾರದು ಎಂದು ವಾದ ಮಂಡಿಸದರು.
ಅಲ್ಲದೇ ನಿನ್ನೆ ಕಾಲೇಜೊಂದರಲ್ಲಿ ಹಿಜಾಬ್ ಧರಿಸಿದವರನ್ನು ಪ್ರತ್ಯೇಕವಾಗಿ ಕೂರಿಸಿರುವುದು ಸರಿಯಲ್ಲ ಎಂದು ಹೇಳುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಎ.ಜಿ.ಪ್ರಭುಲಿಂಗ ನಾವದಗಿ, ನನ್ನ ವಾದ ಮಂಡನೆ ಬಳಿಕ ನಿಮ ಇನ್ನಷ್ಟು ವಾದ ಮಂಡಿಸಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ. ಯಾವುದೇ ಕಾಲೇಜಿನಲ್ಲಿ ಅಂತಹ ಘಟನೆಯಾದ ಬಗ್ಗೆ ವರದಿಯಾಗಿಲ್ಲ. ಅರ್ಜಿದಾರರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಗರಂ ಆದರು.
ಎರಡು ಕಡೆ ವಕೀಲರ ವಾದ ಆಲಿಸಿದ ಹೈಕೋರ್ಟ್ ಏಕಸದಸ್ಯಪೀಠದ ನ್ಯಾ.ಕೃಷ್ಣ ದೀಕ್ಷಿತ್, ರಾಜ್ಯದಲ್ಲಿ ಶಾಂತಿ ಕದಡುವ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಮನವಿ ಮಾಡಿದರು. ಬಳಿಕ ಅರ್ಜಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ ಮುಂದೂಡಿ ಆದೇಶ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ