ಪ್ರಗತಿವಾಹಿನಿ ಸುದ್ದಿ; ವಿಜಯಪುರ: ರಾಜ್ಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಣ, ವಿದ್ಯಾಭ್ಯಾಸದ ಬಗ್ಗೆ ಗಮನಕೊಡುವುದನ್ನು ಬಿಟ್ಟು ಹಿಜಾಬ್, ಕೇಸರಿ ಶಾಲು, ನೀಲಿ ಶಾಲು, ಸಿಂಧೂರ ಹೀಗೆ ಅನಗತ್ಯ ವಿವಾದ, ಸಂಘರ್ಷಗಳ ಬಗ್ಗೆ ಆಸಕ್ತಿವಹಿಸುತ್ತಿರುವುದು ದುರಂತ. ಹಲವು ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಮುಂದುವರೆದಿರುವಾಗಲೇ ಇದೀಗ ವಿದ್ಯಾರ್ಥಿಯೋರ್ವ ಸಿಂಧೂರವಿಟ್ಟು ಆಗಮಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ವಿಜಯಪುರದ ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಹಣೆಗೆ ಕುಂಕುಮವಿಟ್ಟು ಬಂದ ವಿದ್ಯಾರ್ಥಿಯೋರ್ವನಿಗೆ ತರಗತಿ ಪ್ರವೇಶಕ್ಕೆ ನಿರಾಕರಿಸಿಸಲಾಗಿದೆ. ವಿದ್ಯಾರ್ಥಿ ಗಂಗಾಧರ ಬಡಿಗೇರ ಹಣೆಗೆ ಸಿಂಧೂರವಿಟ್ಟು ಬಂದಿದ್ದನ್ನು ಗಮನಿಸಿದ ಕಾಲೇಜು ದೈಹಿಕ ಉಪನ್ಯಾಸಕ ಸಂಗಮೇಶ ಗೌಡ ತರಗತಿ ಪ್ರವೇಶಕ್ಕೆ ಅವಕಾಶಕೊಟ್ಟಿಲ್ಲ. ಈ ವೇಳೆ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ.
ನಾವು ಕಾಲೇಜಿಗೆ ಕೇಸರಿ ಶಾಲಾಗಲಿ, ಹಿಜಾಬ್ ಆಗಲಿ ಧರಿಸಿ ಬಂದಿಲ್ಲ, ಕುಂಕುಮವಿಟ್ಟು ಬಂದಿದ್ದೇವೆ ಅದಕ್ಕೂ ಯಾಕೆ ಅನುಮತಿ ನೀಡುತ್ತಿಲ್ಲ ಎಂದು ವಿದ್ಯಾರ್ಥಿ ಪ್ರಶ್ನಿಸಿದ್ದಾರೆ. ಈ ವೇಳೆ ಇತರ ಉಪನ್ಯಾಸಕರು ವಿದ್ಯಾರ್ಥಿ ಮನವೊಲಿಕೆಗೆ ಮುಂದಾಗಿದ್ದಾರೆ. ಆದರೂ ಒಪ್ಪದ ವಿದ್ಯಾರ್ಥಿ ಗಂಗಾಧರ್ ನನ್ನು ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಬೇರೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.
ಹಿಜಾಬ್ ಅರ್ಜಿ ವಿಚಾರಣೆ ಮತ್ತೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ