
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಯೋಧ್ಯೆ ಪ್ರಕರಣದ ತೀರ್ಪು ಶ್ರೀರಾಮ ಮಂದಿರದ ಪರವಾಗಿ ಬಂದರೆ ಪಾದಯಾತ್ರೆಯ ಮೂಲಕ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನವನ್ನು ಪಡೆದು ಅಯೋಧ್ಯೆಗೆ ತಲುಪುತ್ತೇನೆ ಎಂದು ಶಪಥ ಮಾಡಿರುವ ವಿಶ್ವಹಿಂದೂ ಪರಿಷತ್ತಿನ ಶ್ರೀ ನರ್ಮದಾನಂದ ಸ್ವಾಮೀಜಿಗಳು ಬೆಳಗಾವಿ ತಲುಪಿದ್ದಾರೆ.
ಇಂದು ಸಂಜೆ ಕಪಿಲೇಶ್ವರ ಮಂದಿರದಲ್ಲಿ ಅವರ ಪ್ರವಚನ ನಡೆಯಲಿದೆ.

ಶ್ರೀರಾಮ ಜನ್ಮಭೂಮಿಯ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗಬೇಕೆಂದು ನಿರ್ಣಯವಾದ ನಂತರ, ಸ್ವಾಮೀಜಿಗಳು ಮಧ್ಯಪ್ರದೇಶದ ಉಜ್ಜಯಿನಿಯಿಂದ ಪಾದಯಾತ್ರೆ ಮುಖಾಂತರ ಯಾತ್ರೆಯನ್ನು ಪ್ರಾರಂಭಿಸಿ, 5 ಜ್ಯೋತಿರ್ಲಿಂಗಗಳ ದರ್ಶನವನ್ನು ಪಡೆದು ಶನಿವಾರ ಬೆಳಗಾವಿ ಜಿಲ್ಲೆಯ ಕಿತ್ತೂರಿನ ಹೊಸ ಕಾದರವಳ್ಳಿಯ(ಇಟಗಿ ಕ್ರಾಸ್) ಸುಕ್ಷೇತ್ರ ಶ್ರೀವೀರಭದ್ರೇಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದರು.
ಅಲ್ಲಿಂದ ಹಿರೇಬಾಗೇವಾಡಿ ಸುಕ್ಷೇತ್ರವಾದ ಪಡಿ ಬಸವೇಶ್ವರ ದೇವಸ್ಥಾನದಲ್ಲಿ ರವಿವಾರ ವಾಸ್ತವ್ಯ ಹೂಡಿ, ಅಲ್ಲಿಂದ ಸೋಮವಾರ ಉತ್ತರ ಕಾಶಿ ಎಂದೇ ಪ್ರಸಿದ್ಧವಾದ ಬೆಳಗಾವಿಯ ಸುಕ್ಷೇತ್ರ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇಲ್ಲಿಂದ ಯಮಕನಮರಡಿ, ನಿಪ್ಪಾಣಿ, ಮುಖಾಂತರ ಮಹಾರಾಷ್ಟ್ರ ಪ್ರವೇಶಿಸುವರು.

ನರ್ಮದಾನಂದ ಸ್ವಾಮೀಜಿಗಳ ಪಾದಯಾತ್ರೆಯ ಜವಾಬ್ದಾರಿಯನ್ನು “ವಿಶ್ವ ಹಿಂದು ಪರಿಷತ್, ಬಜರಂಗದಳ” ಕಾರ್ಯಕರ್ತರು ಹೊತ್ತಿದ್ದಾರೆ. ದಾರಿ ಮಧ್ಯದಲ್ಲಿ ವಾಸ್ತವ್ಯದ ವ್ಯವಸ್ಥೆ, ಪೂಜೆ, ಸತ್ಸಂಗ ವ್ಯವಸ್ಥೆ, ಮತ್ತು ಸ್ವಾಮೀಜಿಗಳ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿ, ಅಡಚಣೆ, ಆಗದ ರೀತಿ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ಜಿಲ್ಲಾಧ್ಯಕ್ಷ ಶ್ರೀಕಾಂತ ಕದಮ ಮತ್ತು ಜಿಲ್ಲಾ ಕಾರ್ಯದರ್ಶಿ ವಿಜಯ ಜಾಧವ ತಿಳಿಸಿದ್ದಾರೆ.
ಬೆಳಗಾವಿ ನಗರಾಧ್ಯಕ್ಷ ಬಸವರಾಜ ಭಾಗೋಜಿ, ಬಸವರಾಜ ಹಳಿಂಗಳಿ, ಹೇಮಂತ ಹವಳ, ಆನಂದ್ ಕರಲಿಂಗನ್ನವರ, ಬಸವರಾಜ ಗಾಣಗಿ, ಸತೀಶ ಮಾಳವದೆ ಮತ್ತು ವಿಶ್ವ ಹಿಂದು ಪರಿಷತ್ ಬಜರಂಗದಳದ ಎಲ್ಲಾ ಕಾರ್ಯಕರ್ತರು, ಪ್ರಮುಖರು ಸತ್ಸಂಗದಲ್ಲಿ ಭಾಗಿಯಾಗುತ್ತಿದ್ದಾರೆ.
ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಸ್ವಾಮಿಗಳನ್ನು ಸ್ವಾಗತಿಸಿ, ಗೌರವಿಸಿದರು.
ಹೊಸ ಕಾದರೊಳ್ಳಿ (ಇಟಗಿ ಕ್ರಾಸ್), ಹೊಳಿಹೊಸುರ, ಎಂಕೆ ಹುಬ್ಬಳ್ಳಿ ಮತ್ತು ಹಿರೇಬಾಗೇವಾಡಿಯ ನಾಗರಿಕರು ಭವ್ಯ ಸ್ವಾಗತವನ್ನು ಕೋರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ