ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಾಹಿತಿ ಗಣೇಶ್ ಹೆಗಡೆ ಮನೆ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ಮನೆಯ ಬಹುತೇಕ ಭಾಗ ಹಾನಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ ಈ ಘಟನೆ ನಡೆದಿದ್ದು, ಸಾಹಿತಿ ಗಣೇಶ್ ಹೆಗಡೆ ಅವರ ಕವಿಕುಟಿರ ಮನೆಯ ಮೇಲೆ ಗುಡ್ಡ ಕುಸಿದಿದೆ. ಇನ್ನೊಂದೆಡೆ ಭಾರಿ ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿದ್ದು, ಮನೆಯ ತುಂಬಾ ರಾಡಿ ಮಣ್ಣು ತುಂಬಿಕೊಂಡಿದೆ. ಮನೆಯ ಒಳಗೆ ಸುಮಾರು 4,500 ಪುಸ್ತಕಗಳು ಇದ್ದು, ಹಲವು ಪುಸ್ತಕಗಳು ಮಣ್ಣುಪಾಲಾಗಿವೆ.
ಮನೆಯಲ್ಲಿದ್ದ ಪುಸ್ತಕಗಳನ್ನು ಹೊರತರಲು ಗಣೇಶ್ ಹೆಗಡೆ ಪರದಾಡುತ್ತಿದ್ದು, ಮನೆಯಮೇಲೆ ಮತ್ತೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಮನೆಯಲ್ಲಿ ತುಂಬಿರುವರಾಡಿ ಮಣ್ಣನ್ನು ಹೊರತೆಗುವ ಕಾರ್ಯನಡೆಯುತ್ತಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಾಹಿತಿ ಗಣೇಶ್ ಹೆಗಡೆ, ಮನೆ ಮೇಲೆ ಗುಡ್ಡ ಕುಸಿದು, ಮಣ್ಣು ತುಂಬಿಕೊಂಡಿದೆ. ಪುಸ್ತಕಗಳು ಹಾಳಾಗುತ್ತಿವೆ. ಮನೆಯ ಒಳಗೆ ಸುಮಾರು 4,500 ಪುಸ್ತಕಗಳಿವೆ. ನಾನೇ ಬರೆದಿರುವ 14 ಕಾದಂಬರಿಗಳು ಇವೆ. ಗುಡ್ಡ ಕುಸಿದು ಮನೆ ಹಾನಿಯಾಗಿದ್ದಕ್ಕಿಂತ ಪುಸ್ತಕಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದು:ಖವಾಗುತ್ತಿದೆ. ಮನೆ ಒಳಗಡೆ ಹೋಗಿ ಪುಸ್ತಕಗಳನ್ನು ಹೊರತರಲು ಹೋದರೆ ಮತ್ತೆ ಎಲ್ಲಿ ಗುಡ್ಡ ಕುಸಿದು ಬೀಳುವುದೋ ಎಂಬ ಭಯದಲ್ಲಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ