ದೇವಸ್ಥಾನದ ಸುತ್ತಮುತ್ತ ಹಿಂದೂಯೇತರರಿಗೆ ಗುತ್ತಿಗೆ ಕೊಡಬಾರದು ಎಂದು ಧಾರ್ಮಿಕ ದತ್ತಿ ಕಾಯ್ದೆಯ ಪುಸ್ತಕದ 91ನೇ ಪುಟದಲ್ಲಿದೆ. ದೇವಸ್ಥಾನದ ಸುತ್ತ ಯಾವುದೇ ಜಾಗದಲ್ಲಿ ಅಂಗಡಿ ಕೊಡಬಾರದು ಎಂದಿದೆ
-ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪವೆಲ್
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ವಿರೋಧಿಸಿ ಬಂದ್ ಗೆ ಕರೆ ನೀಡಿದ್ದ ಮುಸ್ಲೀಂ ವ್ಯಾಪಾರಿಗಳಿಗೆ ಇದೀಗ ಜಾತ್ರೆಗಳಲ್ಲಿ ನಿಷೇಧದ ಬಿಸಿ ತಟ್ಟಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಮಾತ್ರವಲ್ಲ ಬೆಂಗಳೂರಿನ ನೆಲಮಂಗಲ ಸೇರಿದಂತೆ ರಾಜ್ಯಾದ್ಯಂತ ಇದೀಗ ಹಿಂದೂ ದೇವರ ಜಾತ್ರೆಗಳಲ್ಲಿ ಮುಸ್ಲೀಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಜಾತ್ರೆಗಳಲ್ಲಿ ಮುಸ್ಲೀಂ ವರ್ತಕರಿಗೆ ಅವಕಾಶವಿಲ್ಲ ಎಂಬ ಬ್ಯಾನರ್ ಗಳನ್ನು ಕಾಪು ಮಾರಿಗುಡಿ ಜಾತ್ರೆ ಯಲ್ಲಿ ಹಾಕಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಜಾತ್ರೆಯಲ್ಲಿ ಮುಸ್ಲೀಮ್ ವ್ಯಾಪಾರಿಗಳಿಗೆ ನಿಷೇಧಕ್ಕೆ ಹಿಂದೂ ಪರ ಸಂಘಟನೆಗಳು ಬೆಂಬಲ ನೀಡಿವೆ.
ಉಡುಪಿಯ ಕಾಪುವಿನ ಮಾರಿ ಗುಡಿ ದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಜಾತ್ರೆಯಲ್ಲಿ ಹಿಂದೂಯೇತರ ವ್ಯಾಪಾರಿಗಳು ಅಂಗಡಿ ಹಾಕಲು ಅವಕಾಶವಿಲ್ಲ. ಮುಸ್ಲೀಂಮರಿಗೆ ವ್ಯಾಪಾರಕ್ಕೆ ಜಾತ್ರೆಯಲ್ಲಿ ಅವಕಾಶಕೊಡಬಾರದು ಎಂದು ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಲು ಹಿಂದೂ ಸಂಘಟನೆ ಕಾರ್ಯಕರ್ತರು ಮುಂದಾಗಿದ್ದಾರೆ.
ಇನ್ನು ದಕ್ಷಿಣ ಕನ್ನಡದ ಮಂಗಳಾದೇವಿ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಕಾಟಿಪಳ್ಳ ಗಣೇಶಪುರ ಮಹಾಗಣಪತಿ ದೇವಸ್ಥಾನ ಜಾತ್ರ ಮಹೋತ್ಸವದಲ್ಲಿಯೂ ಹಿಂದುಯೇತರ ವ್ಯಾಪಾರಸ್ಥರಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ.
ಶಿವಮೊಗ್ಗ ಹಾಗೂ ನೆಲಮಂಗಲದ ಜಾತ್ರೆಯಲ್ಲಿಯೂ ಇಂತದ್ದೇ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಮುಸ್ಲೀಂ ವರ್ತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಹಿಜಾಬ್ ವಿವಾದ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಮತ್ತೊಂದು ಧಾರ್ಮಿಕ ಸಂಘರ್ಷ ಆರಂಭವಾಗಿದ್ದು, ಎಲ್ಲಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕು.
ದೇವಸ್ಥಾನದ ಸುತ್ತಮುತ್ತ ಹಿಂದೂಯೇತರರಿಗೆ ಗುತ್ತಿಗೆ ಕೊಡಬಾರದು ಎಂದು ಧಾರ್ಮಿಕ ದತ್ತಿ ಕಾಯ್ದೆಯ ಪುಸ್ತಕದ 91ನೇ ಪುಟದಲ್ಲಿದೆ. ದೇವಸ್ಥಾನದ ಸುತ್ತ ಯಾವುದೇ ಜಾಗದಲ್ಲಿ ಅಂಗಡಿ ಕೊಡಬಾರದು ಎಂದಿದೆ ಎಂದು ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪವೆಲ್ ಹೇಳಿದ್ದಾರೆ.
ಗುಡುಗು ಸಹಿತ ಭಾರಿ ಮಳೆ; ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ