ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ – 49 ಕೊರೋನಾ ಪಾಸಿಟಿವ್ ಮೂಲಕ ಇಡೀ ರಾಜ್ಯಕ್ಕೇ ಸುದ್ದಿಯಾಗಿದ್ದ ಹಿರೇಬಾಗೇವಾಡಿ ಗ್ರಾಮ ಈಗ ಕೊರೋನಾ ಮುಕ್ತವಾಗಿದೆ.
ನಿಜಾಮುದ್ದೀನ್ ನಂಟಿನಿಂದಾಗಿ ಆರಂಭವಾದ ಕೊರೋನಾ ಪ್ರಕರಣ ಇಡೀ ಗ್ರಾಮವನ್ನೇ ನಡುಗಿಸಿತ್ತು. ಸಂಪೂರ್ಣ ಗ್ರಾಮ ಸೀಲ್ ಡೌನ್ ಆಗಿತ್ತು. ಗ್ರಾಮದ ಜನರು ಕಂಗೆಟ್ಟು ಹೋಗಿದ್ದರು. ತಮ್ಮೂರಿಗೆ ಕೆಟ್ಟ ಹೆಸರು ಬಂತೆಂದು ಬೇಸರಿಸಿದ್ದರು. ಆದರೆ ಈಗ ಗ್ರಾಮ ಕೊರೋನಾದಿಂದ ಮುಕ್ತವಾಗಿದೆ. ಸೀಲ್ ಡೌನ್ ತೆಗೆಯಲಾಗಿದೆ.
ಹಿರೇಬಾಗೇವಾಡಿ ಗ್ರಾಮಸ್ಥರು ಕಂಗೆಟ್ಟಾಗ ಬೆನ್ನಿಗೆ ನಿಂತವರು ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್. ಮನೆಮಗಳಾಗಿ ಇಡೀ ಗ್ರಾಮ ತಮ್ಮ ಕುಟುಂಬ ಎಂದು ಪರಿಗಣಿಸಿ, ತಮಗೇ ಸಂಕಷ್ಟ ಬಂದೊದಗಿದೆ ಎನ್ನುವಂತೆ ಲಕ್ಷ್ಮಿ ಹೆಬ್ಬಾಳಕರ್ ಟೊಂಕಕಟ್ಟಿ ನಿಂತರು. ಗ್ರಾಮದ ಪ್ರತಿ ಸಂಕಷ್ಟಕ್ಕೆ ಬೆನ್ನೆಲುಬಾಗಿ ನಿಂತರು.
ಹಿರೇಬಾಗೇವಾಡಿಗೆ ಕೊರೋನಾ ಸೋಂಕು ತಗುಲುತ್ತಿದ್ದಂತೆ ಗ್ರಾಮಕ್ಕೆ ತೆರಳಿ ಔಷಧ ಸಿಂಪರಣೆ, ಮಾಸ್ಕ್, ಸೇನಿಟೈಸರ್ ವಿತರಣೆ ಮೂಲಕ ತಮ್ಮ ಕಾರ್ಯ ಆರಂಭಿಸಿದ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಪರಿವಾರ, ಅಧಿಕಾರಿಗಳ ತಂಡದೊಂದಿಗೆ ತೆರಳಿ ಸಭೆಗಳನ್ನು ನಡೆಸಿ ಸಮಸ್ಯೆಗಳ ಕುರಿತು ಚರ್ಚಿಸಿದರು. ಅವುಗಳ ಪರಿಹಾರಕ್ಕೆ ಪ್ರಯತ್ನಿಸಿದರು.
ತಮ್ಮ ಲಕ್ಷ್ಮಿ ತಾಯಿ ಫೌಂಡೇಶನ್ ನಿಂದ ದಿನಸಿ, ತರಕಾರಿಗಳನ್ನು ವಿತರಿಸಿದರು. ತರಕಾರಿ ಬೆಳೆದವರಿಂದ ಖರೀದಿಸಿದರು. ಅದನ್ನು ಉಚಿತವಾಗಿ ವಿತರಿಸಿದರು. ನಂತರ ಜಿಲ್ಲಾಧಿಕಾರಿಗಳನ್ನೇ ಗ್ರಾಮಕ್ಕೆ ಕರೆದೊಯ್ದು ಸಭೆ ನಡೆಸಿದರು. ಸರಕಾರದಿಂದ ದಿನಸಿ ಕಿಟ್, ಹಾಲು, ತರಕಾರಿ ವಿತರಿಸಲು ಕ್ರಮ ತೆಗೆದುಕೊಂಡರು. ಗ್ರಾಮಸ್ಥರು ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಪದೇ ಪದೆ ಧೈರ್ಯ ತುಂಬಿದರು.
ಇದೀಗ ಸರಕಾರದಿಂದ ಗ್ರಾಮದ ಎಲ್ಲ ಜನರಿಗೂ ದಿನಸಿ ಕಿಟ್ ಬಂದಿದೆ. ಅದನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಲಕ್ಷ್ಮಿ ಹೆಬ್ಬಾಳಕರ್ ತಂಡ ಮಾಡುತ್ತಿದೆ.
ಶನಿವಾರ ಗ್ರಾಮದ ಸೀಲ್ ಡೌನ್ ತೆರವು ಮಾಡುತ್ತಿದ್ದಂತೆ ಮತ್ತೆ ಗ್ರಾಮಕ್ಕೆ ತೆರಳಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಗ್ರಾಮ ಕೊರೋನಾ ಮುಕ್ತವಾಗಿರುವುದಕ್ಕೆ ಖುಷಿಪಟ್ಟರು. ಗ್ರಾಮಸ್ಥರೊಂದಿಗೆ ಸೇರಿ ಸಂಭ್ರಮಿಸಿದರು. ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಕೂಡ ಎಚ್ಚರ ಕಳೆದುಕೊಳ್ಳದಂತೆ ವಿನಂತಿಸಿದರು.
ಎಲ್ಲ 49 ಜನರೂ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಗ್ರಾಮದ ಸುಮಾರು 1400 ಜನರ ಟೆಸ್ಟ್ ಮಾಡಲಾಗಿದೆ. ಗ್ರಾಮಕ್ಕೆ ಬಂದಿದ್ದ ಕಳಂಕ ತೊಗಲಿದೆ. ಎಲ್ಲರಲ್ಲಿ ಮಂದಹಾಸ ಮೂಡಿದೆ. ಎಲ್ಲರಿಗೂ ಖುಷಿಯಾಗಿದೆ ಎಂದು ಅವರು ಹೇಳಿದರು.
ತಮ್ಮ ಕೋರಿಕೆಯಂತೆ ಸರಕಾರಿ ಆಹಾರ ಸಾಮಗ್ರಿ ಕಿಟ್ ಗಳನ್ನು ಮಂಜೂರು ಮಾಡಿರುವುದಕ್ಕೆ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ