ಪ್ರಗತಿವಾಹಿನಿ; ಮೈಸೂರು: ಹಿರಿಯ ವಾಗ್ಮಿ, ಹರಟೆ ಕಾರ್ಯಕ್ರಮದ ರೂವಾರಿ ಹಿರೇಮಗಳೂರು ಕಣ್ಣನ್ ಆಡಿರುವ ಮಾತು ವಿವಾದಕ್ಕೆ ಕಾರಣವಾಗಿದೆ. ಮೈಸೂರಿನಲ್ಲಿ ರಂಗಾಯಣ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಹಿಜಾಬ್ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಹಿರೇಮಗಳೂರು ಕಣ್ಣನ್ ಮುಸ್ಲಿಂ ಮಹಿಳೆಯರ ಬಗ್ಗೆ ಆಡಿದ್ದ ಮಾತು ವಿವಾದಕ್ಕೆ ತುಪ್ಪ ಸುರಿದಂತಾಗಿದೆ.
ಕಣ್ಣನ್ ಅವರು ಮಾತನಾಡುತ್ತಾ ‘ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಶಾಲಾ– ಕಾಲೇಜುಗಳಿಂದ ಹಿಜಾಬ್ ಹೊರಟುಹೋಗಿದೆ. ಇನ್ಮುಂದೆ ಶಾಲೆಗೆ ಹ್ಯಾಗೆ ಬರಬೇಕು ಎಂದು ಹೇಳಬೇಕು; ಮುಖ ಮುಚ್ಕೊಂಡು ಬರಬೇಡ, ….. ಮುಚ್ಕೊಂಡು ಬಾ. ಏನು ಭಯಾ ರೀ ಮಾತಾಡೋಕೆ? ಡಾಕ್ಟ್ರ ಹತ್ರ ಹೋದ್ರೆ ಎಲ್ಲ ಬಿಚ್ಚಿ ತೋರಿಸ್ತೀರಿ. ಮಾತಾಡಕೆ ಯಾಕೆ ಹೆದರಬೇಕು ಎಂದು ಕೇಳಿದ್ದಾರೆ. ಇವರ ಮಾತಿಗೆ ಚಿಂತಕರು, ವಿಮರ್ಶಕರು, ಲೇಖಕರು ಆಕ್ರೋಶ ಹೊರಹಾಕಿದ್ದಾರೆ.
ಹಿರೇಮಗಳೂರು ಕಣ್ಣನ್ ಅವರ ಮಾತಿಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಪ್ರಾರಂಭದಿಂದಲೂ ಜಾತ್ಯತೀತ ನಿಲುವನ್ನು ಪ್ರತಿಪಾದಿಸಿಕೊಂಡು, ಅನುಸರಿಸಿಕೊಂಡು ಬಂದಿರುವಾತ. ನಿತ್ಯ ಜೀವನದಲ್ಲಿ ಹಾಸ್ಯಪ್ರಜ್ಞೆಯೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುವ ಪ್ರವೃತ್ತಿಯುಳ್ಳವನು. ನಾನು ಯಾವಾಗಲೂ ಜಾತಿ, ಧರ್ಮ, ಮತ, ಪಂಥಗಳ ಆಚೆಗೆ ಆಲೋಚಿಸಿ ಬದುಕುತ್ತಿರುವವನು. ಹಾಸ್ಯದ ಧಾಟಿಯಲ್ಲಿ ನಾನಾಡುವ ಮಾತುಗಳಲ್ಲಿ ಯಾವುದೇ ದುರುದ್ದೇಶವಿರುವುದಿಲ್ಲ. ಅದು ಕೇವಲ ಹಾಸ್ಯ ಪ್ರಜ್ಞೆಯಿಂದ ಬಂದ ಮಾತಾಗಿದ್ದು. ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ. ಹಾಸ್ಯದ ಗೆರೆ ಮೀರಿದ್ದೇನೆ ಎಂದು ಯಾರಿಗಾದರೂ ಅನ್ನಿಸಿದ್ದಲ್ಲಿ, ಅನ್ಯಥಾ ಭಾವಿಸದಿರಲು ಕೋರುತ್ತೇನೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಹಿಜಾಬ್ ಧರಿಸಿ ಬಂದ್ರೆ SSLC ಪರೀಕ್ಷೆಗಿಲ್ಲ ಅವಕಾಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ