Kannada NewsLatest

ಎಸ್ ಟಿಪಿ ವಿವಾದ: 2 ದಿನ ಗಡುವು ನೀಡಿದ ಲಕ್ಷ್ಮಿ ಹೆಬ್ಬಾಳಕರ್

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಇಲ್ಲಿಯ ಹಲಗಾ ರೈತರ ಜಮೀನಿನಲ್ಲಿ ಸ್ಥಾಪಿಸಬೇಕೆಂದಿರುವ ಮಲಿನ ನೀರು ಶುದ್ಧೀಕರಣ ಘಟಕದ ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಬಳಿ ನಿಯೋಗ ಒಯ್ಯುವಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಆಗ್ರಹಿಸಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತಕ್ಕೆ 2 ದಿನ ಗಡುವು ನೀಡಿದ್ದಾರೆ. 

Home add -Advt

 

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಅಭಿವೃದ್ಧಿಗೆ ವಿರೋಧಿಯಲ್ಲ. ಆದರೆ, ರೈತರ ಮನವೊಲಿಸದೆ ಯಾವುದೇ ಕಾರಣದಿಂದ ಯೋಜನೆ ಜಾರಿಗೆ ಅವಕಾಶ ನೀಡುವುದಿಲ್ಲ. ತಕ್ಷಣ ಕಾಮಗಾರಿ ನಿಲ್ಲಿಸಿ ರೈತರ ಮನವೊಲಿಸದಿದ್ದಲ್ಲಿ ನಾನೇ ಸ್ವತಃ ರೈತರೊಂದಿಗೆ ಜಾಗಕ್ಕೆ ತೆರಳಿ ಕೆಲಸ ನಿಲ್ಲಿಸುತ್ತೇನೆ ಎಂದು ಎಚ್ಚರಿಸಿದರು.

2008ರಲ್ಲಿ ಸುವರ್ಣ ಸೌಧ ನಿರ್ಮಾಣಕ್ಕೆ ವಶಪಡಿಸಿಕೊಂಡ ಬರಡು ಜಮೀನಿಗೆ ಎಕರೆಗೆ ತಲಾ 13 ಲಕ್ಷ ರೂ. ನೀಡಲಾಗಿದೆ. ಅಲ್ಲೇ ಸಮೀಪದ ಫಲವತ್ತಾದ ಈ ಜಮೀನಿಗೆ 2009ರಲ್ಲಿ ತಲಾ 3 ಲಕ್ಷ ರೂ. ನಿಗದಿಪಡಿಸಲಾಗಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಎಲ್ಲ ಅಭಿವೃದ್ಧಿ ಯೋಜನೆಗಳಿಗೆ ಗ್ರಾಮೀಣ ಕ್ಷೇತ್ರದ ಜಮೀನನ್ನೇ ಪಡೆಯಲಾಗುತ್ತಿದೆ. ಆದರೆ ಕ್ಷೇತ್ರಕ್ಕೆ ಸೌಲಭ್ಯ ಮಾತ್ರ ಕೊಡುತ್ತಿಲ್ಲ ಎಂದು ಕಿಡಿಕಾರಿದರು. 

ಹೃದಯವೇ ಇಲ್ಲದ ಜಿಲ್ಲಾಡಳಿತ

ಬೆಳೆ ಇರುವ ಜಮೀನಿನ ಮೇಲೆ ಜೆಸಿಬಿ ಹತ್ತಿಸಿ ನಾಶಪಡಿಸಿದ್ದಾರೆ. ಇರುವ ಮೆಣಸಿನಕಾಯಿ ಕೊಯ್ದುಕೊಳ್ಳುತ್ತೇವೆ ಎಂದು ರೈತರು, ರೈತ ಮಹಿಳೆಯರು ಹೋದರೆ ಪೊಲೀಸ್ ಬಲದೊಂದಿಗೆ ಹೊರಹಾಕಿದ್ದಾರೆ. ಈ ಜನರಿಗೆ ಕುಡಿಯಲು ನೀರು ಕೇಳಿದರೆ ಕೊಡುತ್ತಿಲ್ಲ. ಇವರ ಜಮೀನು ಕಿತ್ತುಕೊಳ್ಳಲಾಗುತ್ತಿದೆ. ಇದೊಂದು ಹೃದಯವೇ ಇಲ್ಲದ ಜಿಲ್ಲಾಡಳಿತ ಎಂದು ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದರು. 

ಸುವರ್ಣ ವಿಧಾನಸೌಧದಿಂದ 1 ಕಿಮೀ ಪ್ರದೇಶವನ್ನು ಗ್ರೀನ್ ಬೆಲ್ಟ್ ಎಂದು ಘೋಷಿಸಲಾಗಿದೆ. ಆದರೆ ಕೇವಲ ಅರ್ಧ ಕಿಮೀ ಪ್ರದೇಶದಲ್ಲಿ ಎಸ್ ಟಿಪಿ ಸ್ಥಾಪಿಸಲಾಗುತ್ತಿದೆ. ಉತ್ತರ ಕರ್ನಾಟಕದ ಜನರ ಆಶೋತ್ತರಗಳನ್ನು ಈಡೇರಿಸಲೆಂದು ಕಟ್ಟಿರುವ ಸುವರ್ಣ ವಿಧಾನಸೌಧ ಪಕ್ಕದಲ್ಲೇ ಇರುವ ಹಲಗಾ ಜನರಿಗೆ ನೆಮ್ಮದಿಯ ಬದುಕು ನೀಡಲು ವಿಫಲವಾಗಿದೆ ಎಂದು ಅವರು ಹೇಳಿದರು.

ದುಡಿದು ತಿನ್ನುವ ರೈತರನ್ನು ಬೀದಿಗೆ ತಳ್ಳಬೇಡಿ. ಅವರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ. ಅವರ ಜಮೀನಿಗೆ ಒಂದು ಪೈಸೆಯನ್ನೂ ನೀಡದೆ, ಅವರ ಬೆಳೆಗೂ ಪರಿಹಾರ ನೀಡದೆ ಅವರ ಜಮೀನನ್ನು ಕಾನೂನು ಬಾಹಿರವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಲ್ಲೇ ಹತ್ತಿರದಲ್ಲಿ ಬರಡಾದ 50 ಎಕರೆ ಜಮೀನಿದೆ. ಅದನ್ನು ಕೊಡಲು ಸಿದ್ದ ಎಂದರೂ ಇದೇ ಫಲವತ್ತಾದ ಜಮೀನು ಪಡೆಯಲಾಗಿದೆ ಎಂದು ಹೆಬ್ಬಾಳಕರ್ ವಿವರಿಸಿದರು.

“ನೀವು ಜವಾಬ್ದಾರಿ ಸ್ಥಾನದಲ್ಲಿದ್ದೀರಿ. ನೀವೇ ಮುಂದೆ ನಿಂತು ರೈತರ ಅನ್ಯಾಯ ಸರಿಪಡಿಸಿ. ಮುಖ್ಯಮಂತ್ರಿ ಬಳಿ ನಿಯೋಗ ಒಯ್ಯಿರಿ. ನಾನೂ ಬರುತ್ತೇನೆ.  ಇದರಲ್ಲಿ ವಯಕ್ತಿಕ ಪ್ರತಿಷ್ಠೆ ಬಿಟ್ಟುಬಿಡೋಣ. 155 ರೈತರ ಜೀವನದೊಂದಿಗೆ ಚಲ್ಲಾಟ ಬೇಡ” ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಬಳಿ ವಿನಂತಿಸಿದರು.

ಅಗತ್ಯವಾದರೆ ಕಾನೂನು ಹೋರಾಟಕ್ಕೂ ರೈತರು ಸಿದ್ದರಿದ್ದಾರೆ. ನಾನು ಯಾವುದೇ ರೈತರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಅವರ ಒಂದಿಂಚು ಭೂಮಿಗೂ ಬೆಲೆ ಕೊಡಲೇಬೇಕು. ಏನಾದರೂ ಅನಾಹುತವಾದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ. ಸರಕಾರ ಸೂಕ್ತ ಭರವಸೆ ನೀಡಿದರೆ ನಾನೇ ರೈತರ ಮನವೊಲಿಸುತ್ತೇನೆ ಎಂದೂ ಅವರು ತಿಳಿಸಿದರು. 

ನೂರಾರು ರೈತರು ಪತ್ರಿಕಾಗೋಷ್ಠಿಯಲ್ಲಿದ್ದರು.

 

Related Articles

Back to top button