Latest

ಹೋಳಿ ಮತ್ತು ಹೋಳಿಕೋತ್ಸವ

ಭಾರತದಲ್ಲಿ ಆಚರಿಸುವ ಎಲ್ಲಾ ಹಬ್ಬಗಳಲ್ಲಿ ಹೋಳಿ ವಿಲಕ್ಷಣವಾದ ಹಬ್ಬವಾಗಿದೆ. ಈ ಹಬ್ಬವನ್ನು ಜನರು ಬಹಳ ಸಂತೋಷದಿಂದ ಆಚರಿಸುತ್ತಾರೆ. ಹೋಳಿಯ ದಿನದಂದು ದೊಡ್ಡ ಉತ್ಸವವೇ ನಡೆದಿರುತ್ತದೆ. ಜನರು ಪರಸ್ಪರ ಬಣ್ಣವನ್ನು ಹಾಕುತ್ತಾರೆ. ರಾತ್ರಿಯಂದು ಹೋಳಿಕಾ ಸುಡುತ್ತಾರೆ. ಈ ಹಬದ ಹಿಂದಿನ ರಹಸ್ಯವೇನು? ನಾರದನು ರಾಜ ಯುಧಿಷ್ಠಿರನಿಗೆ ಹೋಳಿಯ ಬಗ್ಗೆ ಹೇಳಿದ ಕಥೆಯನ್ನು ಪಂಡಿತರು ’ಭವಿಷ್ಯ ಪುರಾಣ’ದಲ್ಲಿ ಈ ರೀತಿ ಹೇಳುತ್ತಾರೆ-
ನಾರದ: ಹೇ ನರಾಧಿಪ! ಫಾಲ್ಗುಣದ ಹುಣ್ಣಿಮೆಯಂದು ಎಲ್ಲಾ ಮನುಷ್ಯರಿಗೆ ಅಭಯ ದಾನವನ್ನು ನೀಡಬೇಕು. ಅದರಿಂದ ಜನರು ಭಯರಹಿತರಾಗಿ ನಗಬೇಕು ಮತ್ತು ಆಟವಾಡಬೇಕು. ಕೋಲುಗಳನ್ನು ಹಿಡಿದು ಬಾಲಕರು ಶೂರವೀರರಂತೆ ಹಳ್ಳಿಯಿಂದ ಹೊರಗೆ ಹೋಗಿ ಹೋಳಿಗಾಗಿ ಕಟ್ಟಿಗೆಗಳು ಮತ್ತು ಉರುವಲುಗಳನ್ನು ಸಂಗ್ರಹಿಸಬೇಕು. ಆ ಹೋಳಿಕಾ-ದಹನದಲ್ಲಿ ಖುಷಿ, ನಗು ಮತ್ತು ಮಂತ್ರೋಚ್ಚಾರಣೆಯಿಂದ ಪಾಪಾತ್ಮ ರಾಕ್ಷಸಿಯು ಭಸ್ಮವಾಗುತ್ತಾಳೆ. ಈ ವ್ರತವನ್ನು ಹಿರಣ್ಯಕಶ್ಯಪನ ಸಹೋದರಿ, ಪ್ರಹ್ಲಾದನ ಅತ್ತೆಯಾದ ’ಹೋಳಿಕಾ’ಳ ಹೆಸರಿನಿಂದ ಇಂದಿನವರೆಗೂ ಆಚರಿಸಲಾಗುತ್ತದೆ. ಅವಳು ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಅಗ್ನಿಯಲ್ಲಿ ಪ್ರವೇಶಿಸಿದ್ದಳು. ಹೇ ರಾಜನ್, ಹೋಳಿಕಾ-ದಹನ ಇತ್ಯಾದಿಗಳಿಂದ ಸಂಪೂರ್ಣ ಅನಿಷ್ಟಗಳು ನಾಶವಾಗುತ್ತವೆ… ’
ಈ ಮೇಲಿನ ಕಥೆಯ ಸಾರವನ್ನು ಓದಿದ ಮೇಲೆ ಇದರ ಶಬ್ದಾರ್ಥವನ್ನು ತೆಗೆದುಕೊಳ್ಳದೇ ಭಾವಾರ್ಥ ಮತ್ತು ಲಕ್ಷಣಾರ್ಥವನ್ನು ತೆಗೆದುಕೊಳ್ಳುವುದು ಸೂಕ್ತವೆಂದು ಬುಧ್ಧಿವಂತರು ಭಾವಿಸುತ್ತಾರೆ. ಏಕೆಂದರೆ ಕೇವಲ ಕಟ್ಟಿಗೆಗಳು ಮತ್ತು ಉರುವಲುಗಳನ್ನು ಸುಡುವುದರಿಂದ ಎಂದಿಗೂ ಅನಿಷ್ಟಗಳು ನಾಶವಾಗುವುದಿಲ್ಲ. ವಾಸ್ತವಿಕವಾಗಿ ನಮಗೆ ದು:ಖವನ್ನು ನೀಡುವಂತಹ ಹವ್ಯಾಸಗಳು, ಕಠೋರತೆ, ಒಣಜಂಭ, ಕ್ರೂರತೆ, ವಿಕಾರಗಳು, ಕೆಟ್ಟ ಅಭ್ಯಾಸಗಳು, ನಾಸ್ತಿಕತೆ ಮತ್ತು ಅಭಿಮಾನಗಳ ಪ್ರತೀಕವಾದ ಹೋಳಿಕಾಳನ್ನು ಪರಮಾತ್ಮನೆಂಬ ದಿವ್ಯಅಗ್ನಿಯ ಸ್ಮೃತಿಯಲ್ಲಿ ಸುಟ್ಟುಹಾಕುವುದೇ ಅಥವಾ ಯೋಗಾಗ್ನಿಯಲ್ಲಿ ಭಸ್ಮಮಾಡುವುದೇ ’ಹೋಳಿಕಾ-ದಹನ.’

ಇಲ್ಲಿ ಕಟ್ಟಿಗೆ ಮತ್ತು ಉರುವಲುಗಳು ನಮ್ಮ ದುರ್ಬಲತೆಗಳ ಪ್ರತೀಕವಾಗಿವೆ, ಅಗ್ನಿಯು ಯೋಗಾಗ್ನಿಯ ಪ್ರತೀಕವಾಗಿದೆ. ಯೋಗಾಗ್ನಿಯಿಂದಲೇ ಮನುಷ್ಯನ ಮನಸ್ಸಿನಲ್ಲಿ ಹರ್ಷ ಮತ್ತು ಆಹ್ಲಾದವುಂಟಾಗುವುದು. ಆದ್ದರಿಂದ ಹೋಳಿಯನ್ನು ಸಂತೋಷದ ಹಬ್ಬವೆಂದು ಹೇಳಲಾಗುತ್ತದೆ. ’ಅಭಯದಾನ’ ನೀಡುವ ಅರ್ಥವಾಗಿದೆ ’ನಾವು ಹಿಂಸೆ, ಕ್ರೋಧ, ದ್ವೇಷ ಇತ್ಯಾದಿ ದುರ್ಗುಣಗಳಿಂದ ವರ್ತಿಸಬಾರದು ಅಥವಾ ಕುಕರ್ಮವನ್ನು ಮಾಡಬಾರದು. ನಮ್ಮಿಂದ ಯಾರಿಗೂ ಭಯವಾಗಬಾರದು.’

ಕಟ್ಟಿಗೆಗಳು ಮತ್ತು ಉರುವಲುಗಳನ್ನು ಸುಡುವುದರಿಂದ ’ಪಾಪಾತ್ಮ ರಾಕ್ಷಸಿ’ಯ ನಾಶ ಹೇಗಾಗುತ್ತದೆ ಎಂಬ ವಿಚಾರ ಮಾಡಬೇಕಾಗಿದೆ. ’ಪಾಪಾತ್ಮ ರಾಕ್ಷಸಿ’ ನಮ್ಮ ಮನಸ್ಸಿನಲ್ಲಿ ಕುಳಿತಿರುವಂತಹ ಅಸುರಿ ಮನೋವೃತ್ತಿಗಳು ಮತ್ತು ಪಾಪಜನಕ ಕರ್ಮಗಳ ಪ್ರತೀಕವಾಗಿದೆ. ಆದ್ದರಿಂದ ನಾವು ಜ್ಞಾನ-ರಂಗನ್ನು ಪರಸ್ಪರ ಹಾಕಿಕೊಂಡು ಮನಸ್ಸಿನ ಕೆಟ್ಟ ಭಾವನೆಗಳನ್ನು ಮತ್ತು ಕೆಟ್ಟ ಸಂಸ್ಕಾರಗಳನ್ನು ಭಸ್ಮಮಾಡಿಕೊಳ್ಳುವುದೇ ಹೋಳಿ ಮತ್ತು ಹೋಳಿಕೋತ್ಸವದ ವಾಸ್ತವಿಕ ರಹಸ್ಯವಾಗಿದೆ. ಆದರೆ ಇದರ ಬದಲಾಗಿ ಇಂದು ಜನರು ಕೋಲಾಹಲ ಮಾಡುತ್ತಾ ರೌಡಿಸಂ ಮಾಡುತ್ತಾರೆ. ಇಂದು ಸತ್ಯಾರ್ಥದಲ್ಲಿ ಯಾರೂ ಹೋಳಿಯನ್ನು ಆಚರಿಸುತ್ತಿಲ್ಲ.
ಇನ್ನೊಂದು ಕಥೆ
’ಬ್ರಹ್ಮ ಪುರಾಣ’ದಲ್ಲಿ ಈ ರೀತಿ ಬರೆಯಲಾಗಿದೆ ’ಫಾಲ್ಗುಣದ ಹುಣ್ಣಿಮೆಯ ದಿನ ಚಿತ್ತವನ್ನು ಏಕಾಗ್ರಗೊಳಿಸಿ ಉಯ್ಯಾಲೆಯಲ್ಲಿ ತೂಗುತ್ತಿರುವ ಶ್ರೀಗೋವಿಂದ ಪುರುಷೋತ್ತಮನ ದರ್ಶನ ಮಾಡುವವರು ಖಂಡಿತವಾಗಿಯೂ ವೈಕುಂಠಕ್ಕೆ ಹೋಗುತ್ತಾರೆ.’ ಈ ಹೋಳಿಕೋತ್ಸವವು ಹೋಳಿಯ ಮುಂದಿನ ದಿನ ಆಗುತ್ತದೆ. ಆ ದಿನ ಬಣ್ಣದ ಹೋಕುಳಿಯೇ ನಡೆಯುತ್ತದೆ. ಫಾಲ್ಗುಣ ಹುಣ್ಣಿಮೆಯ ದಿನದಂದು ಮನುವಿನ ಜನ್ಮವಾದ ಕಾರಣ ಇದನ್ನು ’ಮನುತಿಥಿ’ ಎಂದು ಕರೆಯುತ್ತಾರೆ. ಆದ್ದರಿಂದ ಅವನ ನೆನಪಿನಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಸಂವತ್ಸರದ ಆರಂಭ ಮತ್ತು ವಸಂತಾಗಮನದ ನಿಮಿತ್ಯವಾಗಿ ಅಗ್ನಿಸ್ವರೂಪ ಪರಮಾತ್ಮನ ಪೂಜೆಗಾಗಿ ಹೋಳಿಕಾ ದಹನವನ್ನು ಮಾಡಲಾಗುತ್ತದೆ. ಇದು ಸಂವತ್ಸರದ ಆರಂಭದ ಸೂಚಕವಾಗಿದೆ.
ಇಲ್ಲಿಯೂ ಸಹ ಅಕ್ಷರಾರ್ಥಕ್ಕಿಂತ ಭಾವಾರ್ಥವೇ ಪ್ರಧಾನವಾಗಿದೆ. ವರ್ಷದಲ್ಲಿ ಒಂದು ದಿನ ಉಯ್ಯಾಲೆಯಲ್ಲಿ ತೂಗುವ ಕೃಷ್ಣನನ್ನು ನೋಡಿ ಯಾರೂ ವೈಕುಂಠಕ್ಕೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಇದರ ಅರ್ಥವಾಗಿದೆ ೧. ಶ್ರೀಕೃಷ್ಣನನ್ನು ನಮ್ಮ ಮನಸ್ಸಿನ ನೇತ್ರಗಳ ಮುಂದೆ ಲಕ್ಷ್ಯವನ್ನಾಗಿ ಇಟ್ಟುಕೊಳ್ಳಬೇಕು. ೨. ಮನಸ್ಸಿನಲ್ಲಿ ಸದಾ ಖುಷಿಯನ್ನು ಕಾಪಾಡಿಕೊಳ್ಳಬೇಕು. ೩. ಚಿತ್ತವನ್ನು ಪರಮಾತ್ಮನಲ್ಲಿ ಏಕಾಗ್ರಗೊಳಿಸಿಕೊಳ್ಳಬೇಕು. ಆಗ ಮಾತ್ರ ನಾವು ವೈಕುಂಠಕ್ಕೆ ಹೋಗುತ್ತೇವೆ. ಏಕೆಂದರೆ ೧. ಪುರುಷೋತ್ತಮ ಶ್ರೀನಾರಾಯಣನನ್ನು ಲಕ್ಷ್ಯವಾಗಿ ಇಟ್ಟುಕೊಳ್ಳುವುದರಿಂದ ನಮ್ಮಲ್ಲಿ ದಿವ್ಯ ಗುಣಗಳು ಬರುವವು. ೨. ಮನಸ್ಸಿನಲ್ಲಿ ಸದಾ ಹರುಷವಿದ್ದಾಗ ಸಾಕ್ಷಿ, ಅನಾಸಕ್ತ ಮತ್ತು ಆತ್ಮನಿಷ್ಠರಾಗಿ ವ್ಯವಹರಿಸಬಹುದು, ಒಳ್ಳೆಯ ಕರ್ಮಗಳನ್ನೇ ಮಾಡಬಹುದು. ೩. ಚಿತ್ತವನ್ನು ಪರಮಾತ್ಮನಲ್ಲಿ ಏಕಾಗ್ರಗೊಳಿಸುವುದರಿಂದ ನಮ್ಮ ಹಿಂದಿನ ಪಾಪಕರ್ಮಗಳು ಭಸ್ಮವಾಗುವುವು ಮತ್ತು ಸಂಸ್ಕಾರಗಳು ಶುದ್ಧವಾಗುವವು. ಈ ಜ್ಞಾನದ ವಿಚಾರಗಳನ್ನು ಅರಿತುಕೊಳ್ಳದೇ ಮನುಷ್ಯರು ಸ್ಥೂಲ ಉಯ್ಯಾಲೆಯಲ್ಲಿ ತೂಗುತ್ತಿರುವ ಕೃಷ್ಣನನ್ನು ನೋಡಲು ಹೋಗುತ್ತಾರೆ.
ಮನುವಿನ ಜನ್ಮ ಮತ್ತು ಹೊಸ ವರ್ಷದ ಆರಂಭದ ದಿನ ಹೋಳಿಯಾಡುವ ಅರ್ಥ ಈ ರೀತಿಯಾಗಿದೆ ’ನಾವು ನಮ್ಮ ಹಿಂದಿನ ಘಟನೆಗಳನ್ನು ಮರೆತು, ಮಾನಸಿಕವಾಗಿ ’ಹೊಸಜನ್ಮ’ ಪಡೆದುಕೊಂಡು, ಹೊಸ ಸಂಸ್ಕಾರಗಳನ್ನು ರೂಪಿಸಿಕೊಂಡು, ನಮ್ಮ ಜೀವನದ ಹೊಸ ಅಧ್ಯಾಯವನ್ನು ತೆರೆಯಬೇಕು.
ಹಳೆಯ ಹಬ್ಬ
ಈ ಹಬ್ಬವು ಬಹಳ ಪ್ರಾಚೀನ ಕಾಲದಿಂದ ಬಂದಿದೆ ಎಂಬುದು ಭಾರತೀಯರ ಮಾನ್ಯತೆ. ಈ ಸಂದರ್ಭದಲ್ಲಿ ಜನರು ವೇದಗಳ ’ರಕ್ಷೋಹಗಂ ಬಲಗಹಂ’ ಇತ್ಯಾದಿ ರಾಕ್ಷಸ ವಿನಾಶಕ ಮಂತ್ರಗಳಿಂದ ಹೋಳಿಕಾ ದಹನ ಮಾಡುತ್ತಿದ್ದರು. ಜನರ ಈ ಮಾನ್ಯತೆಯ ರಹಸ್ಯವಾಗಿದೆ ’ನಾವು ರಾಕ್ಷಸಿ ಆಹಾರ, ಆಚಾರ, ವ್ಯವಹಾರ ಇತ್ಯಾದಿಗಳಿಂದ ದೂರವಿರಬೇಕು.’ ಬಣ್ಣ ಆಡುವುದು ಎಂದರೆ ’ಆತ್ಮವನ್ನು ಜ್ಞಾನರಂಗಿನಲ್ಲಿ ಅಥವಾ ಸತ್ಸಂಗದ ರಂಗಿನಲ್ಲಿ ಮುಳುಗಿಸುವುದು.’ ಹೋಳಿಕಾ ದಹನವು ’ಪಾಪಿ ತಾನು ಮಾಡಿರುವ ಪಾಪದ ತಾಪದಿಂದ ಸುಟ್ಟು ಹೋಗುತ್ತಾನೆ’ ಎಂಬುದನ್ನು ನೆನಪಿಗೆ ತರುತ್ತದೆ. ಆದ್ದರಿಂದ ನಾವು ಪಾಪಗಳನ್ನು ಮಾಡಬಾರದು.
ಹೋಳಿಗೆ ಸಂಬಂಧಿಸಿದ ಈ ಎಲ್ಲಾ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ನಾವು ಹೋಳಿ(ಆಗಿದ್ದು ಆಗಿ ಹೋಯಿತು) ಎಂದು ತಿಳಿದು ಮುಂದೆ ಶುಭಕಾರ್ಯಗಳಲ್ಲಿ ಪ್ರವೃತ್ತರಾಗಲು ಸಾಧ್ಯವಿದೆ.

-ಬ್ರಹ್ಮಾಕುಮಾರಿ ಲೀಲಾಜಿ,
ಸಂಚಾಲಕರು, ಬ್ರಹ್ಮಾಕುಮಾರೀಸ್, ದಾವಣಗೆರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button