Karnataka News

*ಅಮ್ಮಿನಬಾವಿ ಪಂಚಗೃಹ ಹಿರೇಮಠದಲ್ಲಿ ಕಾಮಣ್ಣ-ರತಿದೇವಿ ಪೂಜೆ*

ಪ್ರಗತಿವಾಹಿನಿ ಸುದ್ದಿ: ಇಲ್ಲಿಗೆ ಹತ್ತಿರದ ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಹೋಳಿ ಹುಣ್ಣಿಮೆಯ ಅಂಗವಾಗಿ ಮಠದ ಮುಖಮಂಟಪದ ಪ್ರಾಂಗಣದಲ್ಲಿ ಕಾಮಣ್ಣ ಮತ್ತು ರತಿದೇವಿ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅವರಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಪದ್ಧತಿ ಪ್ರಾಚೀನ ಕಾಲಘಟ್ಟದಿಂದಲೂ ನಡೆದುಕೊಂಡು ಬಂದಿರುವುದು ವಿಶೇಷ ಆಚರಣೆಯಾಗಿ ಗಮನಸೆಳೆಯುತ್ತದೆ.

ಚೈತ್ರ ಮಾಸದಿಂದ ಫಾಲ್ಗುಣದ ತನಕ ವರ್ಷದುದ್ದಕ್ಕೂ ಈ ಮಠದಲ್ಲಿ ಎಲ್ಲಾ ಹಬ್ಬಗಳ ಆಚರಣೆಗೆ ತನ್ನದೇ ಆದ ಮಹತ್ವವಿದೆ. ಹಿಂದೂ ವರ್ಷಾಚರಣೆಯ ಕೊನೆಯ ಹಬ್ಬವಾಗಿರುವ ಈ ಹೋಳಿ ಹಬ್ಬದ ಸಂದರ್ಭದಲ್ಲಿ ಕಾಮಣ್ಣ ಮತ್ತು ರತಿದೇವಿ ಅವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಹೊಸ ಬಟ್ಟೆಗಳನ್ನು ತೊಡಿಸಿ ಪೂಜಿಸಿಸುವ ಮತ್ತು ಕಡಲೆಬೇಳೆ ಹೂರಣದ ಹೋಳಿಗೆಯ ಖಾದ್ಯ ಸಿದ್ಧಪಡಿಸಿ ನೈವೇದ್ಯ ಮಾಡುವ ವಿಶಿಷ್ಟ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಕಾಮದಹನ : ಹುಣ್ಣಿಮೆಯ ಮರುದಿನ (ಮಾ.15-ಶನಿವಾರ) ಪ್ರಾತಃಕಾಲದಲ್ಲಿ ಈ ಮೂರ್ತಿಗಳಿಗೆ ಅಗ್ನಿ ಸ್ಪರ್ಶ ಮಾಡದೇ ಕಾಮಣ್ಣ ಮತ್ತು ರತಿದೇವಿಯರ ಬಾಸಿಂಗಗಳನ್ನು ತೆಗೆದು ಕಟ್ಟಿಗೆಯಲ್ಲಿಟ್ಟು ಸಾಂಕೇತಿಕವಾಗಿ ಕಾಮದಹನ ಮಾಡುವ ರೂಢಿ ಇದೆ.

Home add -Advt

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ 91 ವರ್ಷದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು “ನಮ್ಮ ಮಠದಲ್ಲಿ ಕಾಮಣ್ಣ ಮತ್ತು ರತಿದೇವಿ ಅವರ ಮೂರ್ತಿ ಪ್ರತಿಷ್ಠಾಪನೆಯ ಜೊತೆಗೆ ಅವರನ್ನು ಶಾಸ್ತ್ರೋಕ್ತವಾಗಿ ಪೂಜಿಸುವ ಸಂಪ್ರದಾಯ ಬಹಳ ಪೂರ್ವದಿಂದಲೂ ನಡೆದುಕೊಂಡು ಬಂದಿದೆ. ಲಭ್ಯ ದಾಖಲೆಗಳ ಪ್ರಕಾರ ಮಠದ ಇತಿಹಾಸದ ಪ್ರಾಚೀನತೆ 10ನೆಯ ಶತಮಾನದ್ದು ಇರುವುದರಿಂದ ಕಾಮಣ್ಣ-ರತಿದೇವಿ ಅವರ ಮೂರ್ತಿ ಪ್ರತಿಷ್ಠಾಪನೆ ಮತ್ತು ಪೂಜಾ ಕೈಂಕರ್ಯ ಎಷ್ಟು ನೂರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟವಾಗುತ್ತದೆ. ಆದರೆ ವೀರಶೈವ-ಲಿಂಗಾಯತ ಮಠದಲ್ಲಿ ಇದು ಆಚರಣೆಯಲ್ಲಿರುವುದು ಬಹು ವಿಶೇಷ” ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, “ನಮ್ಮ ಮಠದ ಕಟ್ಟಡ ಮತ್ತು ಇಲ್ಲಿರುವ ವಿಭಿನ್ನ ಹಬ್ಬ-ಹುಣ್ಣಿಮೆಗಳ ಸಾಂಪ್ರದಾಯಕ ಧಾರ್ಮಿಕ ಆಚರಣೆಗಳ ಪದ್ಧತಿ ಬಹಳಷ್ಟು ವೈಶಿಷ್ಟ್ಯಪೂರ್ಣವಾದದ್ದು. ವೀರಶೈವ-ಲಿಂಗಾಯತ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ರಂಭಾಪುರಿ ಪೀಠದ ಶಾಖಾಮಠವಾಗಿರುವ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠವು ಬಸವಪೂರ್ವ ಯುಗದ ಮಠವಾಗಿರುವುದೂ ಸಹ ಇಲ್ಲಿಯ ಮತ್ತೊಂದು ವಿಶೇಷತೆ” ಎಂದರು.

Related Articles

Back to top button