ಪ್ರಗತಿವಾಹಿನಿ ಸುದ್ದಿ, ಮಂಗಳೂರು :
ಯುವತಿಯೊಂದಿಗೆ ನಗ್ನವಾಗಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದ ಪ್ರಕರಣಕ್ಕೆ ಇದೀಗ ವಿಚಿತ್ರ ತಿರುವು ಸಿಕ್ಕಿದೆ.
ಅದು ಆತ ಹರಿಬಿಟ್ಟ ವೀಡಿಯೋ ಅಲ್ಲ, ಆತನನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದವರೇ ಬ್ಲ್ಯಾಕ್ ಮೇಲ್ ಮಾಡಲು ಹರಿಬಿಟ್ಟಿದ್ದಾರೆ ಎನ್ನುವ ಅಂಶ ಈಗ ಹೊರಬಿದ್ದಿದೆ.
ಬಂಟ್ವಾಳದ ಟಿಪ್ಪು ನಗರ ನಿವಾಸಿ ಮೋನು ಯಾನೆ ಅಬ್ದುಲ್ ರಹಿಮಾನ್ (55) ಯುವತಿಯೊಂದಿಗೆ ಸರಸ ಸಲ್ಲಾಪ ನಡೆಸುವ ವೀಡಿಯೋ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಸಂಬಂಧ ಬಂದ ದೂರನ್ನು ಆಧರಿಸಿ, ಅಬ್ದುಲ್ ರಹಿಮಾನ್ ಸ್ವತಃ ವೀಡಿಯೋ ಹರಿಬಿಟ್ಟಿದ್ದಾನೆ ಎಂದು ಆತನನ್ನು ಬಂಧಿಸಲಾಗಿತ್ತು.
ಆದರೆ, ಪೊಲೀಸರ ವಿಚಾರಣೆ ವೇಳೆ ಇದು ಹನಿಟ್ರ್ಯಾಪ್ ಮೂಲಕ ಅಶ್ಲೀಲ ವಿಡಿಯೋ ಮಾಡಿ ಹಣಕ್ಕಾಗಿ ಬೆದರಿಕೆ ಒಡ್ಡುವ ಜಾಲ ಎಂಬುದು ಬಹಿರಂಗಗೊಂಡಿದೆ. ಅಬ್ದುಲ್ ರಹಿಮಾನ್ ಸ್ವತಃ ಹನಿಟ್ರ್ಯಾಪ್ ಗೆ ಒಳಗಾದವರು.
7-8 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅಬ್ದುಲ್ ರಹಿಮಾನ್ ಗೆ ಹುಡುಗಿಯೊಬ್ಬಳ ಪರಿಚಯವಾಗಿತ್ತು. ಪರಿಚಯವಾದ ಕೆಲವು ದಿನಗಳ ನಂತರ ಆ ಹುಡುಗಿಯನ್ನು ಮಂಗಳೂರಿನ ಲಾಡ್ಜ್ ಒಂದರಲ್ಲಿ ರಹಿಮಾನ್ ಭೇಟಿಯಾಗಿದ್ದು, ಆ ಸಮಯ ಅವರಿಬ್ಬರ ನಡುವೆ ದೈಹಿಕ ಸಂಪರ್ಕ ನಡೆದಿದೆ.
ಆ ಸಮಯದಲ್ಲಿ ಹುಡುಗಿಯು ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ. ಈ ಘಟನೆ ನಡೆದ ಕೆಲವು ದಿನಗಳ ನಂತರ ರಹಿಮಾನ್ ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಈ ವಿಡಿಯೋವನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ರಹಿಮಾನ್ ಹುಡುಗಿಯಲ್ಲಿ ವಿಚಾರಿಸಿದಾಗ, ಆಕೆ ತನ್ನ ಮೊಬೈಲ್ ರಿಪೇರಿಗೆ ಕೊಟ್ಟ ಸಮಯ ಬೇರೆಯವರಿಗೆ ದೊರಕಿದೆ ಎಂದಿದ್ದಾಳೆ.
ಆ ವ್ಯಕ್ತಿಯು ವಿಡಿಯೋ ಇಟ್ಟುಕೊಂಡು ರಹಿಮಾನ್ ಗೆ ನಿರಂತರವಾಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ರಹಿಮಾನ್ ಹಣ ಕೊಡಲು ಒಪ್ಪದಿದ್ದಾಗ ಆತನನ್ನು ಅಪಹರಿಸಿ ಹಣ ಕಿತ್ತುಕೊಳ್ಳಲಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ವಿಡಿಯೋ ಹರಿಬಿಡಲಾಗಿತ್ತು. ನಂತರ ಅಬ್ದುಲ್ ರಹೀಮ್ ನನ್ನೇ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.
ಇದೀಗ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ 10ಕ್ಕೂ ಹೆಚ್ಚು ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.