
ಪ್ರಗತಿವಾಹಿನಿ ಸುದ್ದಿ: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ಠಾಣೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ನಾವುಂಡ ಬಡಾಕೆರೆಯ ಸವದ್ ಯಾನೆ ಅಚ್ಚು, ಗುಲ್ವಾಡಿ ಗಾಂಧಿಕಟ್ಟೆಯ ಸೈಫುಲ್ಲಾ, ಮೊಹಮ್ಮದ್ ನಾಸಿರ್, ಅಬ್ದುಲ್ ಸತ್ತಾರ್, ಅಬ್ದುಲ್ ಅಝೀಜ್, ಕುಂದಾಪುರದ ಅಸ್ಮಾ ಬಂಧಿತ ಆರೋಪಿಗಳು.
ದೂರು ದಾರ ಸಂದೀಪ್ ಕುಮಾರ್ ಎಂಬಾತ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಸಂದೀಪ್ ಕುಮಾರ್ ಮೂರು ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಿದ್ದಾಗ ಆರೋಪಿ ಸವದ್ ನ ಪರಿಚಯವಾಗಿತ್ತು. ಆತ ಉಳಿದ ಆರೋಪಿಗಳ ಪರಿಚಯ ಮಾಡಿಕೊಟ್ಟಿದ್ದ. ಅಲ್ಲದೇ ಅಸ್ಮಾ ಎಂಬ ಮಹಿಳೆಯನ್ನೂ ಪರಿಚಯಿಸಿದ್ದ. ಹೀಗೆ ಪರಿಚಯವಾದ ಆಸ್ಮಾಳ ಫೋನ್ ನಂಬರ್ ನ್ನು ಕೂಡ ಸಂದೀಪ್ ಪಡೆದಿದ್ದ. ಹೀಗೆ ಆರಂಭವಾದ ಪರಿಚಯ ಸ್ನೇಹಕ್ಕೆ ತಿರುಗಿದೆ. ಸೆ.2ರಂದು ಸಂಜೆ ಮಹಿಳೆ ಅಸ್ಮಾ, ಸಂದೀಪ್ ಗೆ ಕರೆ ಮಾಡಿ ಕುಂದಾಪುರಕ್ಕೆ ಬರುವಂತೆ ಹೇಳಿದ್ದಳು.
ಸಂದೀಪ್ ಕುಂದಾಪುರಕ್ಕೆ ಬಂದಿದ್ದಾಗ ಕೋಟೆಶ್ವರದಲ್ಲಿನ ಬಾಡಿಗೆ ಮನೆಗೆ ಕರೆದೊಯ್ದಿದ್ದಳು. ಸಂದೀಪ್, ಅಸ್ಮಾ ಮನೆಯಲ್ಲಿದ್ದಾಗ ಉಳಿದ ಆರೋಪಿಗಳು ನುಗ್ಗಿದ್ದು, ಸಂದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಸ್ಮಾ, ಸವದ್ ಸೇರಿದಂತೆ ಆರು ಆರೋಪಿಗಳು ರಾಡ್ ನಿಂದ ಸಂದೀಪ್ ಮೇಲೆ ಹಲ್ಲೆ ನಡೆಸಿ 40 ಸಾವಿರ ಹಣವನ್ನು ಡ್ರಾ ಮಾಡಿಸಿಕೊಂಡಿದ್ದಾರೆ. ಆತನ ಕೈಲಿದ್ದ 6 ಸಾವಿರ ಹಣವನ್ನೂ ಕಿತ್ತುಕೊಂಡಿದ್ದಾರೆ. ಮನಬಂದಂತೆ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಮನೆಯಿಂದ ಹೊರ ಕಳುಹಿಸಿದ್ದಾರೆ. ಸಂತ್ರಸ್ತ ವ್ಯಕ್ತಿ ಬುಧವಾರ ಕುಂದಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದ. ಕಾರ್ಯಾಚರಣೆ ನಡೆಸಿದ ಪೊಲೀಸರು ಹನಿಟ್ರ್ಯಾಪ್ ಕೇಸ್ ನ 6 ಆರೋಪಿಗಳನ್ನು ಬಂಧಿಸಿದ್ದಾರೆ.