ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಉತ್ತರ ಕ್ಷೇತ್ರಕ್ಕೆ ವಸತಿ ಸಚಿವ ವಿ.ಸೋಮಣ್ಣ ಬಂಪರ್ ಕೊಡುಗೆ ಘೋಷಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ಬೆಳಗಾವಿ ಪ್ರವಾಸದಲ್ಲಿದ್ದ ಸೋಮಣ್ಣ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಹಲವು ಘೋಷಣೆಗಳನ್ನು ಮಾಡಿದರು.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ವಸತಿ ಸಚಿವರ ಮುಂದೆ ಹಲವು ಬೇಡಿಕೆಗಳನ್ನು ಮಂಡಿಸಿದ್ದರು. ಅದಕ್ಕೆ ಸೋಮಣ್ಣ ಅಸ್ತು ಎಂದರು.
ಬಸವನಕುಡಚಿಯಲ್ಲಿರುವ ದೇವರಾಜ ಅರಸು ಕೆಎಚ್ ಬಿ ಕಾಲನಿಯ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಮಂಜೂರು ಮಾಡುವುದಾಗಿ ವಸತಿ ಸಚಿವರು ತಿಳಿಸಿದರು.
ಪಾಟೀಲ ಮಾಳಾ ಮತ್ತು ಇತರ ಪ್ರವಾಹ ಪೀಡಿತ ಪ್ರದೇಶಗಳ ಮರು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ ಸೋಮಣ್ಣ, ಎಲ್ಲ ಅಗತ್ಯ ಕ್ರಮ ತಗೆದುಕೊಳ್ಳುವ ಭರವಸೆ ನೀಡಿದರು. ಹಲವು ಪ್ರದೇಶದಲ್ಲಿ ಸಮೀಕ್ಷೆ ಸಮರ್ಪಕವಾಗಿ ಆಗಿಲ್ಲ ಎನ್ನುವ ದೂರು ಇತ್ತು. ಅನೇಕರು ಮನೆಗಳನ್ನು ಕಳೆದುಕೊಂಡಿದ್ದರೂ ಸಮೀಕ್ಷೆಯ ವೇಳೆ ಸೇರ್ಪಡೆಯಾಗಿಲ್ಲ ಎನ್ನುವ ಆರೋಪವಿತ್ತು.
ಇದೀಗ ಸಚಿವರ ಸೂಚನೆಯಿಂದ ಸೂರು ಕಳೆದುಕೊಡವರಿಗೆ ಮರುಜೀವ ಬಂದಂತಾಗಿದೆ.
ಹಲವು ದಶಕಗಳಿಂದ ಬೇಡಿಕೆಯಿದ್ದ ರುಕ್ಮಿಣಿ ನಗರಕ್ಕೆ ಹೌಸಿಂಗ್ ಬೋರ್ಡ್ ನಿಂದ 5 ಸಾವಿರ ಮನೆಗಳನ್ನು ಒದಗಿಸುವುದಾಗಿ ಸಚಿವ ಸೋಮಣ್ಣ ಭರವಸೆ ನೀಡಿದ್ದಾರೆ. ಈ ಹಿಂದಿನ ಹಲವು ಶಾಸಕರು ಈ ಬಗ್ಗೆ ಪ್ರಯತ್ನಿಸಿದ್ದರು. ಅನಿಲ ಬೆನಕೆ ಕೂಡ ಶಾಸಕರಾದಾಗಿನಿಂದ ರುಕ್ಮಿಣಿ ನಗರದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಿದ್ದರು.
ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಳ್ಳಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ರಾಜೇಂದ್ರ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ