CrimeKannada NewsKarnataka NewsLatest

*ವಿಮಾನ ನಿಲ್ದಾಣದ ಮೇಲೆ ಹೌತಿ ಕ್ಷಿಪಣಿ ದಾಳಿ*: *ಹೈದರಾಬಾದ್ ಮೂಲದ ವ್ಯಕ್ತಿ ಸಾವು, ಪುತ್ರರಿಗೆ ಗಂಭೀರ ಗಾಯ*

ಪ್ರಗತಿವಾಹಿನಿ ಸುದ್ದಿ: ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಕ್ಷಿಪಣಿ ದಾಳಿ ಭಾರತೀಯ ಕುಟುಂಬವೊಂದಕ್ಕೆ ಆಘಾತ ಎದುರಾಗಿದೆ. ಹೈದರಾಬಾದ್‌ನ ಮೆಹದಿಪಟ್ನಂ ನಿವಾಸಿ ಮೊಹಮ್ಮದ್ ಯೂಸುಫ್ ಅಲಿ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರ ಇಬ್ಬರು ಪುತ್ರರು ಗಂಭೀರವಾಗಿ ಗಾಯಗೊಂಡಿದ್ದು, ಕುಟುಂಬದ ಇತರ ಸದಸ್ಯರೂ ಗಾಯಗೊಂಡಿದ್ದಾರೆ.

ಅಕ್ಟೋಬರ್ 10ರಂದು ನಡೆದ ಮೊದಲ ದಾಳಿಯಲ್ಲಿ ಯೂಸುಫ್ ಅಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಒಬ್ಬ ಪುತ್ರನಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಮತ್ತೊಬ್ಬ ಪುತ್ರನ ಕಾಲಿನ ಮೂರು ಬೆರಳುಗಳು ಕತ್ತರಿಸಿಹೋಗಿವೆ ಎಂದು ವರದಿಯಾಗಿದೆ. ಯೂಸುಫ್ ಅವರ ಪತ್ನಿ ಮತ್ತು ಪುತ್ರಿ ಸುರಕ್ಷಿತವಾಗಿದ್ದಾರೆ. ಅವರೊಂದಿಗೆ ಇದ್ದ ಚಿಕ್ಕಮ್ಮನ ತಲೆಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಈ ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಯೂಸುಫ್ ಅಲಿ ಮೃತಪಟ್ಟಿದ್ದು, ಅವರ ಇಬ್ಬರು ಪುತ್ರರು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ರಿಯಾದ್‌ನಲ್ಲಿರುವ ಯೂಸುಫ್ ಅವರ ಸಂಬಂಧಿಕರು ಹಾಗೂ ಭಾರತೀಯ ರಾಯಭಾರ ಕಚೇರಿಯ ಡೆಪ್ಯುಟಿ ಚೀಫ್ ಆಫ್ ಮಿಷನ್ ಅವರೊಂದಿಗೆ ಮಾತನಾಡಿರುವುದಾಗಿ ಹೇಳಿರುವ ಓವೈಸಿ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಅಗತ್ಯ ನೆರವು ನೀಡುವಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.

ಭಾರತೀಯ ರಾಯಭಾರ ಕಚೇರಿಯ ಮಾಹಿತಿಯ ಪ್ರಕಾರ, ಗಾಯಗೊಂಡಿರುವ ಮೂವರು ಭಾರತೀಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಿಬ್ಬರು ಸಾಮಾನ್ಯ ವಾರ್ಡ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಇನ್ನು, ರಿಯಾದ್ ವಿಮಾನ ನಿಲ್ದಾಣದ ಮೇಲೆ ಸತತ ಎರಡು ದಿನಗಳಲ್ಲಿ ದಾಳಿಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಅಕ್ಟೋಬರ್ 10ರಂದು ನಡೆದ ಮೊದಲ ದಾಳಿಯಲ್ಲಿ ಯೂಸುಫ್ ಅಲಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದು, 300ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳ ಪ್ರಜೆಗಳಿದ್ದಾರೆ ಎನ್ನಲಾಗಿದೆ.

ಭಾನುವಾರ ಮತ್ತೆ ನಡೆದ ದಾಳಿಯಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಈ ಎರಡೂ ದಾಳಿಗಳ ಹೊಣೆಯನ್ನು ಯೆಮೆನ್‌ನ ಹೌತಿ ಬಂಡುಕೋರರು ಹೊತ್ತುಕೊಂಡಿದ್ದಾರೆ. ಯೆಮೆನ್‌ನ ಸನಾದಲ್ಲಿರುವ ವಿಮಾನ ನಿಲ್ದಾಣದ ಮೇಲೆ ನಡೆದ ವೈಮಾನಿಕ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಮತ್ತು ವಾಯುಪ್ರದೇಶವನ್ನು ಬಳಸದಂತೆ ವಿಮಾನಯಾನ ಸಂಸ್ಥೆಗಳು ಹಾಗೂ ಪ್ರಯಾಣಿಕರಿಗೆ ಹೌತಿಗಳು ಎಚ್ಚರಿಕೆ ನೀಡಿದ್ದಾರೆ. ಸತತ ದಾಳಿಗಳ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳ ಭದ್ರತೆ ಮತ್ತು ಪ್ರಯಾಣಿಕರ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button