ಕಸ ವಿಲೇವಾರಿಗೆ ಜಾಗ ನಿಗದಿಯಾಗದೇ ಟೆಂಡರ್ ನೀಡಲು ಹೇಗೆ ಸಾಧ್ಯ?: ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನೆ
ಪ್ರಗತಿವಾಹಿನಿ ಸುದ್ದಿ: “ಬೆಂಗಳೂರಿನ ಘನತ್ಯಾಜ್ಯ ವಿಲೇವಾರಿ ಕೇಂದ್ರಗಳನ್ನು ನಗರದ ಹೊರಭಾಗದಲ್ಲಿ ಸ್ಥಳಾಂತರ ಮಾಡಲು ಇನ್ನು ಜಾಗವೇ ನಿಗದಿಯಾಗಿಲ್ಲ. ಹೀಗಿರುವಾಗ 30 ವರ್ಷಗಳಿಗೆ ಬ್ಲಾಕ್ ಲಿಸ್ಟ್ ಆಗಿರುವ ಕಂಪನಿಗೆ ಗುತ್ತಿಗೆ ನೀಡಲು ಹೇಗೆ ಸಾಧ್ಯ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯಿಸಿದರು.
ಕಸ ವಿಲೇವಾರಿಗೆ ಸಂಬಂಧಿಸಿದಂತೆ ಬ್ಲಾಕ್ ಲಿಸ್ಟ್ ಆಗಿರುವ ಕಂಪನಿಗೆ 30 ವರ್ಷಗಳಿಗೆ 94 ಸಾವಿರ ಕೋಟಿಗೆ ಟೆಂಡರ್ ನೀಡುವ ವರದಿ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ಕಸದ ವಿಲೇವಾರಿ ಟೆಂಡರ್ ವಿಚಾರದಲ್ಲಿ ಕೇಂದ್ರದ ಮಂತ್ರಿಯೊಬ್ಬರು ನಾನು 15 ಸಾವಿರ ಕೋಟಿ ಲಂಚ ಪಡೆದಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಪತ್ರಿಕೆಗಳಲ್ಲೂ ಈ ಬಗ್ಗೆ ವರದಿ ಬಂದಿದೆ ಎಂದು ತಿಳಿಸಿದರು.
30 ವರ್ಷಕ್ಕೆ ಗುತ್ತಿಗೆ ನೀಡಲಾಗಿದೆಯೇ ಎಂಬ ಪ್ರಶ್ನೆಗೆ, “ನಾವು ಕಸ ವಿಲೇವಾರಿ ಮಾಡುವ ಜಾಗಗಳ ಹುಡುಕಾಟದಲ್ಲಿದ್ದೇವೆ. ಜಾಗ ನಿಗದಿ ಮಾಡಲು ನ್ಯಾಯ ಪಂಚಾಯ್ತಿ ಮಾಡುತ್ತಾ ಒದ್ದಾಡುತ್ತಿದ್ದೇನೆ. ನಾನು ಟೆಂಡರ್ ಕರೆಯದೇ ಬ್ಲಾಕ್ ಲಿಸ್ಟ್ ಆಗಿರುವ ಕಂಪನಿಗೆ ಗುತ್ತಿಗೆ ನೀಡಲು ಹೇಗೆ ಸಾಧ್ಯ? ಈ ವಿಚಾರ ಕೋರ್ಟ್ ನಲ್ಲಿದೆ. ಕಳೆದ ಮೂರು ದಿನಗಳಲ್ಲಿ ಮಂಡೂರಿನಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಇದಕ್ಕೆ ಪರ್ಯಾಯ ಜಾಗ ಹುಡುಕುತ್ತಿದ್ದು, ನೈಸ್ ರಸ್ತೆ ಬಳಿ ಜಾಗಕ್ಕೆ ನೈಸ್ ಸಂಸ್ಥೆ ಜತೆ ಮಾತನಾಡುತ್ತಿದ್ದೇನೆ.
ಇನ್ನೂ ಎರಡು ಮೂರು ಕಡೆ ಇರುವ ಕಸ ವಿಲೇವಾರಿ ಘಟಕಗಳನ್ನು ಬೆಂಗಳೂರಿನಿಂದ ಹೊರಗೆ ಸ್ಥಳಾಂತರ ಮಾಡಬೇಕಿದೆ. ಈ ಸಮಸ್ಯೆ ಹೇಗೆ ನಿಭಾಯಿಸಬೇಕು ಎಂದು ಕೆಲವು ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ, ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡಿ , ನಂತರ ಸದನದ ಮುಂದಿಟ್ಟು ನಂತರ ತೀರ್ಮಾನ ಮಾಡುತ್ತೇವೆ. ಇಷ್ಟು ದಿನ ಕಸದ ವಿಚಾರದಲ್ಲಿ ಟೆಂಡರ್ ಇಲ್ಲದೆ ದಂಧೆ ಮಾಡುತ್ತಿದ್ದವರಿಗೆ ನಮ್ಮ ಈ ಪ್ರಕ್ರಿಯೆ ನೋಡಿ ಹೊಟ್ಟೆ ಉರಿಯುತ್ತಿದೆ” ಎಂದು ತಿಳಿಸಿದರು.
ಬೆಂಗಳೂರಿನ ಯೋಜನೆಗಳ ಬಗ್ಗೆ ಸಿಎಂ ನೇತೃತ್ವದಲ್ಲಿ ಚರ್ಚೆ
ಬೆಂಗಳೂರಿಗೆ ಸಂಬಂಧಿಸಿದಂತೆ ಸಿಎಂ ನೇತೃತ್ವದಲ್ಲಿ ಸಭೆ ಬಗ್ಗೆ ಕೇಳಿದಾಗ, “ಬೆಂಗಳೂರು ನಗರದ ಅನೇಕ ಯೋಜನೆಗಳ ಬಗ್ಗೆ ಪ್ರಸ್ತಾಪ ಇಟ್ಟಿದ್ದು, ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಪ್ರಸ್ತಾಪಿಸುವ ಮುನ್ನ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಮಂತ್ರಿಗಳ ಜತೆ ಚರ್ಚೆ ಮಾಡಬೇಕಿದೆ. ಪೆರಿಫೆರಲ್ ರಿಂಗ್ ರಸ್ತೆ, ಘನತ್ಯಾಜ್ಯ ನಿರ್ವಹಣೆ ಯೋಜನೆ, ಮೇಲ್ಸೇತುವೆ, ತೆರಿಗೆ, ಹೊಸ ರಸ್ತೆಗಳ ನಿರ್ಮಾಣ ವಿಚಾರವಾಗಿ ಬ್ರ್ಯಾಂಡ್ ಬೆಂಗಳೂರು ಮೂಲಕ ನಮಗೆ ಬಂದಿರುವ ಸಲಹೆಗಳನ್ನು ಚರ್ಚೆ ಮಾಡಲಾಗುವುದು. ನಾನು ಏಕಾಏಕಿ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಎಲ್ಲರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕು” ಎಂದರು.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಬಗ್ಗೆ ಕೇಳಿದಾಗ, “ಎಲ್ಲಾ ಕಡೆ ಮಳೆಯಾಗುತ್ತಿಲ್ಲ. ಕೆಲವು ಕಡೆ ಮಾತ್ರವಾಗುತ್ತಿದೆ. ಸದ್ಯಕ್ಕೆ ತಮಿಳುನಾಡು ಜತೆಗಿನ ನೀರು ಹಂಚಿಕೆ ಪರಿಸ್ಥಿತಿ ಸುಧಾರಣೆಯಾಗುತ್ತಿದೆ” ಎಂದು ತಿಳಿಸಿದರು.
ಕನ್ನಡಿಗರ ಸ್ವಾಭಿಮಾನ ಎತ್ತಿ ಹಿಡಿಯಲು ನಮ್ಮ ಸರ್ಕಾರ ಬದ್ಧ
ಕರ್ನಾಟಕದ ಖಾಸಗಿ ಕಂಪನಿಗಳಲ್ಲೂ ಕನ್ನಡಿಗರಿಗೆ ಉದ್ಯೋಗಗಳ ಮೀಸಲಾತಿ ಕುರಿತ ಮಸೂದೆ ಬಗ್ಗೆ ಕೇಳಿದಾಗ, “ಕರ್ನಾಟಕದಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಖಾಸಗಿ ಮಳಿಗೆಗಳಲ್ಲಿ ಕನ್ನಡ ನಾಮಫಲಕ ವಿಚಾರ ಹಾಗೂ ನಮ್ಮ ಧ್ವಜ, ಭಾಷೆ, ಸಂಸ್ಕೃತಿ, ಕಡತಗಳಲ್ಲಿ ಕನ್ನಡ ಬಳಕೆ ಸೇರಿದಂತೆ ರಾಜ್ಯದಲ್ಲಿ ಮುಂದೆ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಇಂತಿಷ್ಟು ಉದ್ಯೋಗ ಮೀಸಲಿಡುವವರೆಗೂ ನಮ್ಮ ಸರ್ಕಾರ ಕೆಲಸ ಮಾಡುತ್ತದೆ. ಈ ಬಗ್ಗೆ ನಿಟ್ಟಿನಲ್ಲಿ ಮಸೂದೆ ತಂದಿದೆ” ಎಂದು ಉತ್ತರಿಸಿದರು.
ಕಿರಣ್ ಮಜುಂದಾರ್ ಹಾಗೂ ಮೋಹನ್ ದಾಸ್ ಪೈ ಅವರಂತಹ ಉದ್ಯಮಿಗಳು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ತಂತ್ರಜ್ಞಾನ ಉದ್ಯೋಗಗಳ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಈ ವಿಚಾರ ನಮಗೆ ಅರ್ಥವಾಗುತ್ತದೆ. ಇಂತಹ ವಿಚಾರದಲ್ಲಿ ನಾವು ವಿನಾಯಿತಿ ನೀಡುತ್ತೇವೆ. ಈ ಬಗ್ಗೆ ಅವರು ಸರ್ಕಾರದ ಗಮನಕ್ಕೆ ತರಬೇಕು. ಸದನ ನಡೆಯುತ್ತಿರುವ ಸಮಯದಲ್ಲಿ ಮಸೂದೆಯ ಇತರೆ ಮಾಹಿತಿಯನ್ನು ನಾನು ಸದನದ ಹೊರಗೆ ಬಹಿರಂಗ ಪಡಿಸಲು ಆಗುವುದಿಲ್ಲ. ಸದನದಲ್ಲಿ ಎಲ್ಲಾ ಅಂಶಗಳು ಚರ್ಚೆಯಾಗಲಿ” ಎಂದು ತಿಳಿಸಿದರು.
ಪಂಚೆಯುಟ್ಟ ರೈತನಿಗೆ ಜಿ.ಟಿ ಮಾಲ್ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂಬ ಪ್ರಶ್ನೆಗೆ, “ಈ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ. ಮಾಹಿತಿ ಪಡೆದು ನಂತರ ಕ್ರಮ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ