ಇನ್ನೆಷ್ಟು ನೀರು ಬೇಕು?… ನೀ ಮಾಡಿದ ಕರ್ಮ ತೊಳೆಯಲು?
ಪೂರ್ಣಿಮಾ ಹೆಗಡೆ
ಮಳೆ ಶುರುವಾಯಿತು, ಎಂಬಲ್ಲಿಗೆ ಶುರುವಾದ ಮಳೆಗಾಲ ಮಳೆ ಚೆನ್ನಾಗಿ ಬೀಳ್ತಾ ಇದೆ, ಮಳೆ ಜೋರಾಗಿದೆ, ವಿಪರೀತ ಮಳೆ, ಮಳೆ ಅನಾಹುತವನ್ನೇ ಸೃಷ್ಟಿ ಮಾಡಿದೆ, ಮಳೆ ಸರ್ವನಾಶ ಮಾಡಿ ಬಿಟ್ಟಿದೆ ಎನ್ನುವವರೆಗೆ ಹೋಗಿದೆ ಈ ಬಾರಿಯ ಮಳೆಗಾಲ.
ಸೃಷ್ಟಿಯ ಒಂದು ಭಾಗ ಮಾತ್ರ ಮಾನವ. ತಾನೇ ಸರ್ವಾಧಿಕಾರಿಯಂತೆ ಮೆರೆಯುವಾಗ ಯಾವದೇ ಪರಿವೆಯೇ ಇರುವದಿಲ್ಲ ಅವನಿಗೆ. ಅದೆಷ್ಟು ಅತ್ಯಾಚಾರ ಅನಾಚಾರಗಳನ್ನ ಹಗಲು ರಾತ್ರಿ ನಿರಂತರವಾಗಿ ಮಾಡುತ್ತಲೇ ಇದ್ದಾನೆ. ಕಡಿದು ಬೀಸಾಡಿರುವದೆಷ್ಟು?, ಬುಡಸಮೇತ ಕಿತ್ತು ಬೀಸಾಕಿರುವದೆಷ್ಟು?, ಬಗೆದು ಒಟ್ಟಾಕಿರುವುದೆಷ್ಟು?, ಅಗೆದು ಮಾರಾಟ ಮಾಡಿರುವದೆಷ್ಟು, ಕ್ರತಕತೆಯ ಸೃಷ್ಟಿಮಾಡಿ ಇಡೀ ಭೂಮಂಡಲವನ್ನ ಕೊಳಕು ರಾಡಿ ಎಬ್ಬಿಸಿದ್ದಾನೆ ಏನೂ ಅರಿವಿರದವನಂತೆ.
ದೇವನಿರ್ಮಿತ ಪ್ರತೀ ಜೀವಿಯೂ ಸೃಷ್ಟಿಯಲ್ಲೇ ಜೀವಿಸುತ್ತವೆ, ಸೃಷ್ಟಿಯನ್ನೇ ಅವಲಂಬಿಸಿವೆ ಯಾವೊಂದೂ ಕೂಡ ಸೃಷ್ಟಿಯನ್ನ ಹಾಳು ಗೆಡವಲಿಲ್ಲ. ತಮ್ಮ ಜೀವಿತಾವಧಿಯವರೆಗೆ ತಮ್ಮ ಪರಿಧಿಯಲ್ಲಿ ತಮ್ಮಷ್ಟಕ್ಕೆ ತಾವು ಜೀವಿಸುತ್ತವೆ. ಮಾನವನಿಗೇಕೆ ಈ ದುರ್ಬುಧ್ಧಿ.
ಮಳೆ ಹನಿಯಿಕ್ಕಿದಾಗ ಜೀವಜಲವನ್ನು ಕಾಣದೆ ಕಂಗಾಲಾಗಿದ್ದ ಭೂ ಜಲ ಚರಗಳು ತಣಿದಿದ್ದು ನಿಜ.ಮಳೆಯ ರಭಸ ಜೋರಾದಂತೆಲ್ಲ ಭಯ ಆವರಿಸಿಕೊಳ್ಳುತ್ತಾ ಹೋಯಿತು. ಕೊಚ್ಚಿ ಕೊಂಡೊಯ್ಯಲೆಂದೇ ಬಂದಂತಿತ್ತು ನೆರೆಯ ಅಬ್ಬರ. ಹೊಳೆ ಕೆರೆ, ಬೆಟ್ಟ ಗುಡ್ಡ, ಕಾಡು ಮೇಡು, ಊರು ಕೇರಿ, ಮನೆ ಮಠ, ನಾಡು ರೋಡು, ಚರಂಡಿ ಭಾವಿ ದೇವಸ್ಥಾನ, ಮಸೀದಿ, ಚರ್ಚ್ ಹೀಗೆ ಎಲ್ಲವೂ ಒಂದೇ ನೀರಿನಡಿಯಾಗಲು ಕ್ಷಣ ಮಾತ್ರವೂ ಹಿಡಿಯಲಿಲ್ಲ. ಕೊಚ್ಚಿಕೊಂಡು ಹೋಗುವ ರಭಸಕ್ಕೆ ಮನುಷ್ಯನೊಂದಿಗೆ ಇತರ ಜೀವಹಾನಿಯೂ ಹೆಚ್ಚಾಗಿದೆ. ಹಿಡಿ ಶಾಪ ಹಾಕಿರಬಹುದು ಅವೆಲ್ಲ ಮಾನವ ಜಾತಿಗೆ “ನೀ ಮಾಡಿದ ಕರ್ಮ” ಅಂತ.
ಈ ಬಾರಿ ಈ ರೀತಿ ಅಬ್ಬರಿಸಿದ ಮಳೆ ಇಡೀ ಬ್ರಹ್ಮಾಂಡವನ್ನೇ ಒಂದು ಆಪೋಶನಕ್ಕೆ ತೆಗೆದು ಕೊಳ್ಳಬಲ್ಲೆನೆಂಬ ಎಚ್ಚರಿಕೆಯನ್ನ ಕೊಟ್ಟು ಹೋಗಿದೆ.
ಆದರೂ ಮೇಲಿನ ಚಿತ್ರವನ್ನು ನೋಡಿದರೆ… ಸೋತು ಹಿಂದಿರುಗಿದಂತಿದೆ…
“ಮಾನವ ನೀ ಮಾಡಿದ ಕೊಳೆಯನ್ನು ಮಾತ್ರ ನಾ ತೊಳೆಯದಾದೆ… ಇನ್ನೆಷ್ಟು ನೀರು ಬೇಕು?… ನೀಮಾಡಿದ ಕರ್ಮ ತೊಳೆಯಲು?
———————————————
ಇದೇ ಲೇಖಕರ ಇತರ ಲೇಖನಗಳನ್ನೂ ಓದಿ-
ಕಾರ್ಮಿಕನೊಬ್ಬನ ಮನಕರಗುವ ಕಥೆ-ವ್ಯಥೆ -ಇಂದು ಕಾರ್ಮಿಕರ ದಿನ
ವಿವೇಚನೆಯನ್ನು ಕಳೆದುಕೊಂಡ ಹೆಣ್ಣು ಮಾಡಿದ್ದೇನು?
ಒಮ್ಮೆ ಅವಳನ್ನು ಗೌರವಿಸಿ, ಪ್ರೀತಿಸಿ ನೋಡಿದರೆ ಜೀವನ ಸುಂದರ…
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ