*ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಆರೋಪ ಪ್ರಕರಣ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯೋರ್ವರನ್ನು ಬಂಧಿಸಿ ಕರೆದೊಯ್ಯುವ ವೇಳೆ ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಪ್ರತಿಕ್ರಿಯೆ ನೀಡಿದ್ದಾರೆ.
ಮಹಿಳೆಯ ವಿರುದ್ಧ 307 ಕೇಸ್ ಇತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲು ಪೊಲೀಸರು ಹೋಗಿದ್ದರು. ಮಹಿಳಾ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಾಗ ಮಹಿಳೆಯೇ ತನ್ನ ಬಟ್ಟೆಯನ್ನು ತಾನೇ ಬಿಚ್ಚಿ ವಿವಸ್ತ್ರಗೊಂಡಿದ್ದಾಳೆ. ಮಹಿಳಾ ಪೊಲೀಸರು ಆಕೆಯನ್ನು ತಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಮಹಿಳೆಯನ್ನು ಕರೆತಂದಿದ್ದ ಪೊಲೀಸ್ ವ್ಯಾನ್ ನಲ್ಲಿ ಈ ವೇಳೆ ಆಕೆಯ ತಾಯಿ ಹಾಗೂ ತಮ್ಮ ಇಬ್ಬರೂ ಇದ್ದರು. ಮಹಿಳೆಯ ತಮ್ಮನೇ ವಿಡಿಯೋ ಮಾಡಿ ವೈರಲ್ ಮಾಡಿದ್ದಾನೆ ಎಂದು ಎಸ್ ಪಿ ಅವರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ ಮಹಿಳೆಯನ್ನು ಜಡ್ಜ್ ಮುಂದೆ ಹಾಜರು ಪಡಿಸಿದಾಗ ಪೊಲೀಸರು ದೌರ್ಜನ್ಯ ನಡೆಸಿದ ಬಗ್ಗೆ ಏನೂ ಹೇಳಿಲ್ಲ. ಘಟನೆಯ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಅಕಸ್ಮಾತ್ ಪೊಲೀಸರದ್ದು ತಪ್ಪಿದ್ದರೂ ಕಾನೂನು ಪ್ರಕಾರ ಕ್ರಮವಾಗಲಿದೆ ಎಂದು ಹೇಳಿದರು.




