Karnataka News

*ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮೆರುಗು*

2.5 ಲಕ್ಷ ಪ್ರಯಾಣಿಕರ ನಿರೀಕ್ಷೆಯೊಂದಿಗೆ ವಿಮಾನ ನಿಲ್ದಾಣ ವಿಸ್ತರಣೆ

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತರಾಷ್ಟ್ರೀಯ ಮೆರುಗು ನೀಡಲಾಗುವುದು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ಭಾನುವಾರ, ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಹೊಸ ಕಟ್ಟಡ ಕಾಮಗಾರಿ ಪ್ರಗತಿ ವೀಕ್ಷಣೆ ನಡೆಸಿ, ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು 2.5 ಲಕ್ಷ ಪ್ರಯಾಣಿಕರ ನಿರೀಕ್ಷೆ ಇರಿಸಿಕೊಂಡು 270 ಕೋಟಿ ವೆಚ್ಚದಲ್ಲಿ ಬೃಹತ್ ಆಗಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

Home add -Advt

ಈಗ ವಾರ್ಷಿಕ 50 ಸಾವಿರ ಪ್ರಯಾಣಿಕರಿಗೆ ತಕ್ಕದಾಗಿ ಟರ್ಮಿನಲ್ ಇದೆ. ಇದನ್ನು 2.5 ಲಕ್ಷ ಪ್ರಯಾಣಿಕರಿಗೆ ತಕ್ಕಂತೆ, ಅಗತ್ಯ ಸೌಲಭ್ಯಗಳೊಂದಿಗೆ ವಿಸ್ತರಿಸಲಾಗುತ್ತಿದೆ ಎಂದರು.

ಕಾಮಗಾರಿ ಶೀಘ್ರ ಟೆಂಡರ್: ಬಹು ದೊಡ್ಡ ಪ್ರಮಾಣದಲ್ಲಿ ಹೊಸ ಟರ್ಮಿನಲ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದು, ಈಗಾಗಲೇ ಕಾಮಗಾರಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.

10 ಏರ್ ಬಸ್ ನಿಲುಗಡೆಗೆ ವಿಸ್ತರಣೆ: ಸದ್ಯಕ್ಕೆ 4 ವಿಮಾನಗಳು ನಿಲ್ಲುವ ಸ್ಥಳವಿದ್ದು, ಅದನ್ನೀಗ ಸುಮಾರು 10 ಏರ್ ಬಸ್, ಬೋಯಿಂಗ್ ನಿಲ್ಲಿಸುವಷ್ಟು ಪ್ರದೇಶಕ್ಕೆ ವಿಸ್ತರಿಸಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ಈ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳೊಂದಿಗೆ ಚರ್ಚೆ ಸಹ ನಡೆಸಿದರು.

ಪ್ರಧಾನಿ ಮೋದಿ ಚಾಲನೆ ನೀಡಿದ್ದರು: 2024ರ ಮಾರ್ಚ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು 273 ಕೋಟಿ ರು. ವೆಚ್ಚದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕಾಮಗಾರಿ ವೇಗವಾಗಿ ಸಾಗುತ್ತಿದೆ ಎಂದರು.

ಉತ್ತರ ಕರ್ನಾಟಕ ಅಭಿವೃದ್ಧಿ ಪಥಕ್ಕೆ ವೇಗ: ಹೊಸ ಟರ್ಮಿನಲ್ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮೆರುಗು ನೀಡಲಿದೆ. ನಮ್ಮ ವಾಣಿಜ್ಯನಗರಿ ವಿಮಾನ ನಿಲ್ದಾಣಕ್ಕೆ ಮತ್ತಷ್ಟು ಮೇಲ್ದರ್ಜೆಯ ಸೌಲಭ್ಯಗಳು ಒದಗಲಿವೆ. ಇದರಿಂದ ಇಡೀ ಉತ್ತರ ಕರ್ನಾಟಕ ಭಾಗದ ಅಭಿವೃದ್ದಿ ಪಥ ವೇಗದಲ್ಲಿರುತ್ತದೆ ಎಂದು ಹೇಳಿದರು.

ಪ್ರಧಾನಿಗೆ ಅಭಿನಂದನೆ: ಈ ಮಹತ್ತರ ಕಾಮಗಾರಿಗೆ ಸಮ್ಮತಿ ನೀಡಿ ಕೈಗೆತ್ತಿಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ನಾಗರೀಕ ವಿಮಾನಯಾನ ಸಚಿವ JM_Scindia ಅವರಿಗೆ ಅಭಿನಂದನೆ ಸಲ್ಲಿಸಿದರು ಧಾರವಾಡ ಸಂಸದರೂ ಆಗಿರುವ ಸಚಿವ ಪ್ರಲ್ಹಾದ ಜೋಶಿ.

ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಹು-ಧಾ ಪಾಲಿಕೆ ಮಹಾಪೌರ ರಾಮಣ್ಣ ಬಡಿಗೇರ ಹಾಗೂ ವಿಮಾನ ನಿಲ್ದಾಣದ ಆಡಳಿತ ವರ್ಗದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button