*ಹುಬ್ಬಳ್ಳಿ-ವಿಜಯಪುರ ನೂತನ ಮೆಮು ರೈಲು ಸಂಚಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಸಿರು ನಿಶಾನೆ*

ಪ್ರಗತಿವಾಹಿನಿ ಸುದ್ದಿ: ಹುಬ್ಬಳ್ಳಿ: ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ಒತ್ತಾಸೆ ಮೇರೆಗೆ ನೈರುತ್ಯ ರೈಲ್ವೆ ವಲಯವು ಉತ್ತರ ಕರ್ನಾಟಕ ಭಾಗಕ್ಕೆ ವಿವಿಧ ರೈಲುಗಳ ಸಂಚಾರ ಆರಂಭಿಸಿ ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದೆ.
ಸೋಮವಾರ ಸಂಜೆ ಹುಬ್ಬಳ್ಳಿ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದಿಂದ ಹುಬ್ಬಳ್ಳಿ- ವಿಜಯಪುರ ನೂತನ ನಿಯಮಿತ ರೈಲಿಗೆ MEMU ರೈಲು (Mainline Electric Multiple Unit)ಸಂಖ್ಯೆ: 6650ಕ್ಕೆ ಹಸಿರು ನಿಶಾನೆ ತೋರಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದರು.
ವಿಶೇಷ ರೈಲು ನಿಯಮಿತ ಸೇವೆಗೆ:
ಉತ್ತರ ಕರ್ನಾಟಕ ಭಾಗದವರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿ ನೈಋತ್ಯ ರೈಲ್ವೆ ಇದೀಗ ಪ್ರಮುಖ ವಿಶೇಷ ರೈಲುಗಳನ್ನು ‘ನಿಯಮಿತ ಸೇವೆ’ಗಳನ್ನಾಗಿ (Regular Train Services) ಪರಿವರ್ತಿಸಿದೆ. ಇದು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸಂಪರ್ಕಕ್ಕೆ ಹೊಸ ವೇಗ ನೀಡಲಿದೆ.
ಹುಬ್ಬಳ್ಳಿ-ವಿಜಯಪುರ ರೈಲುಗಳ ನಿಯಮಿತ ಸಂಚಾರ: ರೈಲು ಸಂಖ್ಯೆ 56919/20 ಹಾಗೂ 66501/02 ರೈಲುಗಳು ಇನ್ನು ಮುಂದೆ ನಿಯಮಿತವಾಗಿ ಸಂಚರಿಸಲಿದ್ದು, ಹುಬ್ಬಳ್ಳಿ, ಗದಗ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಹೃಷಿಕೇಶಕ್ಕೆ ನೇರ ರೈಲು ಸಂಪರ್ಕ: ಹುಬ್ಬಳ್ಳಿಯಿಂದ ಯೋಗ ನಗರಿ ಹೃಷಿಕೇಶಕ್ಕೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ ರೈಲು ಇದೀಗ ನಿಯಮಿತ ಸೇವೆಯಾಗಿದೆ. ರೈಲು ಸಂಖ್ಯೆ 17363/64 ಹುಬ್ಬಳ್ಳಿ- ಯೋಗ ನಗರಿ ಹೃಷಿಕೇಶ ವಾರಕ್ಕೊಮ್ಮೆ ಸಂಚರಿಸುವ ರೈಲು ಈಗ ನಿಯಮಿತ ಸೇವೆಯಾಗಿದ್ದು, ಉತ್ತರ ಭಾರತಕ್ಕೆ ತೆರಳುವ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ವರ್ಷವಿಡಿ ಪ್ರಯಾಣ ಸೌಲಭ್ಯ ಸುಲಭ ಸಾಧ್ಯವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ಭಾರತೀಯ ರೈಲ್ವೆ ವ್ಯವಸ್ಥೆ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಿದೆ. ಅಲ್ಲದೆ, ನೂತನ ರೈಲು ಸೇವೆ ಮೂಲಕ ಜನಸಾಮಾನ್ಯರ ಪ್ರಯಾಣವನ್ನು ಸುಗಮ, ಸುರಕ್ಷಿತ ಮತ್ತು ತ್ವರಿತಗೊಳಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷ ರೈಲುಗಳ ನಿಯಮಿತ ಸೇವೆಯಿಂದಾಗಿ ಪ್ರಯಾಣಿಕರಿಗೆ ಆರ್ಥಿಕವಾಗಿ ದೊಡ್ಡ ಲಾಭವಾಗಲಿದೆ. ಸಾಮಾನ್ಯ ದರ್ಜೆ ಪ್ರಯಾಣಿಕರಿಗೆ ಸೂಪರ್ ಫಾಸ್ಟ್ ಹೆಚ್ಚುವರಿ ಶುಲ್ಕವಿರುವುದಿಲ್ಲ. ಮೀಸಲು ದರ್ಜೆಯ ಟಿಕೆಟ್ ದರದಲ್ಲಿ ಶೇ.30ರಷ್ಟು ಕಡಿತವಾಗಲಿದ್ದು, ಕೈಗೆಟಕುವ ದರದಲ್ಲಿ ರೈಲ್ವೆ ಪ್ರಯಾಣ ಲಭ್ಯವಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ (SWR) ರೈಲ್ವೆ ಜನರಲ್ ಮ್ಯಾನೇಜರ್ ಪಿ.ಅನಂತು ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.




