*BREAKING: ಬಿಜೆಪಿ ಕಾರ್ಯಕರ್ತೆಯ ಮೇಲೆ ಪೊಲೀಸರ ಅಟ್ಟಹಾಸ: ಬಂಧನದ ವೇಳೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ?*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟಿದೆ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ಪುಷ್ಠಿ ನೀಡುವಂತಹ ಮತ್ತೊಂದು ಘಟನೆ ನಡೆದಿದೆ. ರಾಜಕೀಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೇ ಮಹಿಳೆಯನ್ನು ವಿವಸ್ತ್ರವಾಗಿಸಿ ಥಳಿಸಿರುವ ಆರೋಪ ಕೇಳಿಬಂದಿದೆ. ಮಹಿಳಾ ಪೊಲೀಸರು, ಪುರುಷ ಪೊಲೀಸರ ಎದುರೇ ಪೊಲಿಸ್ ಸಿಬ್ಬಂದಿಯೇ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ.
ಪ್ರಕರಣ ಯಾವುದೇ ಇರಲಿ, ಆರಕ್ಷಕರಾಗಿರುವ ಪೊಲೀಸರೇ ರಾಕ್ಷಸರಂತೆ ವರ್ತಿಸಿದರಾ? ಎಂಬಂತಹ ವಿಡಿಯೋ ವೈರಲ್ ಆಗಿದೆ. ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಇಂತದ್ದೊಂದು ಘಟನೆ ನಡೆದಿದ್ದು, ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.
ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವಾಗಿ ಬಿಜೆಪಿ ಕಾರ್ಯಕರ್ತೆ ಹಾಗೂ ಕಾಂಗ್ರೆಸ್ ಕಾರ್ಪೊರೇಟರ್ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸುಜಾತಾ ಎಂಬ ಬಿಜೆಪಿ ಕಾರ್ಯಕರ್ತೆಯನ್ನು ಬಂಧಿಸಿ ಕರೆದೊಯ್ದ ಪೊಲೀಸರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಬಂಧನದ ವೇಳೆ ಬಿಜೆಪಿ ಕಾರ್ಯಕರ್ತೆ ಸುಜಾತಾ ಪೊಲೀಸರ ಮೇಲೆ ಹಲ್ಲೆ ನಡೆಸಿ, ಕಚ್ಚಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಲ್ಲೆ ನಡೆಸಿದ್ದಲ್ಲದೇ ಮಹಿಳೆಯನ್ನು ಎಳೆದಾಡಿ ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂಬ ಆರೋಪವಿದೆ. ಪೊಲೀಸ್ ವ್ಯಾನ್ ನಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯ್ ವೈರಲ್ ಆಗಿದೆ.
ಆದರೆ ಪೊಲೀಸರು ಹೇಳುವ ಪ್ರಕಾರ ಸುಜಾತಾ ವಿರುದ್ಧ ಹಲವು ಕೇಸ್ ಗಳು ದಾಖಲಾಗಿದ್ದವು. ಜನವರಿ ೫ ರಂದು ಪೊಲೀಸರು ಆಕೆಯನ್ನು ಬಂಧಿಸಲು ಹೋಗಿದ್ದಾಗ ಆಕೆ ನಾಲ್ವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾಳೆ. ಆದಾಗ್ಯೂ ಆಕೆಯನ್ನು ವಶಕ್ಕೆ ಪಡೆದಾದ ಪೊಲೀಸರನ್ನು ಕಚ್ಚಿ ಗಾಯಗೊಳಿಸಿದ್ದಲ್ಲದೇ ತಾನೇ ತನ್ನ ಬಟ್ಟೆಯನ್ನು ಹರಿದುಕೊಂಡು ವಿವಸ್ತ್ರವಾಗಿ ಕಿರುಚಿಕೊಂಡಿದ್ದಾಳೆ. ಪೊಲೀಸರು ಮಹಿಳೆಯನ್ನು ಎಷ್ಟೇ ತಡೆಯಲು ಯತ್ನಿಸಿದರೂ ಆಕೆ ಪೊಲೀಸರನ್ನು ತಳ್ಳಿ ಹಲ್ಲೆ ನಡೆಸಿದ್ದಾಳೆ. ಆಕೆಯ ಸಹೋದರನೇ ಇದನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾನೆ. ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.




