Belagavi NewsBelgaum NewsKannada NewsKarnataka NewsLatest

ಮಳೆ, ಗಾಳಿಯಿಂದ ಅಪಾರ ಹಾನಿ : ಪರಿಶೀಲಿಸಿದ ಶಶಿಕಲಾ ಜೊಲ್ಲೆ


ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ನಗರ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಸೋಮವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆ, ಗಾಳಿ ಪರಿಣಾಮ ಅಪಾರ ಆಸ್ತಿ ಹಾನಿಗೊಳಗಾಗಿದೆ. ಯಾವುದೇ ರೀತಿಯ ಜೀವಿತ ಹಾನಿಯಾದ ಕುರಿತು ವರದಿಯಾಗಿಲ್ಲದಿದ್ದರೂ ಓರ್ವ ವ್ಯಕ್ತಿಗೆ ಶೆಡ್‌ನ ಪತ್ರೆ ಕಾಲಿಗೆ ಅಪ್ಪಳಿಸಿದ ಪರಿಣಾಮ ಗಾಯಗಳಾಗಿದ್ದು ಎಮ್ಮೆಯೊಂದು ಗಂಭೀರವಾಗಿ ಗಾಯಗೊಂಡಿದೆ.
ಸೋಮವಾರ ಸಂಜೆ ಆಕಸ್ಮಿಕವಾಗಿ ಸಿಡಿಲು ಗುಡುಗು ಸಹಿತ ಮಳೆ ಅಬ್ಬರಿಸಲು ಆರಂಭಗೊಂಡಿತು. ಆದರೆ ತುಸುಹೊತ್ತಲ್ಲೆ ಗಾಳಿಯೂ ಸಹ ಬೀಸಲು ಆರಂಭಿಸಿತು. ನೋಡನೋಡುತ್ತಲೇ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮರಗಳು, ವಿದ್ಯುತ್ ಕಂಬಗಳು, ಟಿಸಿಗಳು ಧರೆಗುರುಳಿದವು. ಮನೆ ಮೇಲಿನ ಪತ್ರೆಗಳು, ಶೆಡ್‌ನ ಪತ್ರೆಗಳು ಹಾರಿ ಪಕ್ಕದ ಮನೆ ಮೇಲೆ ಅಪ್ಪಳಿಸಿದವು.
ಮಂಗಳವಾರ ಬೆಳಿಗ್ಗೆಯಿಂದ ರಸ್ತೆಗುರುಳಿದ ಮರಗಳನ್ನು ತೆಗೆಯುವ ಕಾರ್ಯ ಭರದಿಂದ ಸಾಗಿತ್ತು. ವಿದ್ಯುತ್ ಕಂಬಗಳ ದುರುಸ್ತಿ ಕಾರ್ಯವನ್ನೂ ಸಹ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ತ್ವರಿತಗತಿಯಲ್ಲಿ ನಡೆದಿತ್ತಾದರೂ ಸೋಮವಾರ ಸಂಜೆ ಕಡಿತಗೊಂಡಿರುವ ವಿದ್ಯುತ್ ಮಂಗಳವಾರ ಸಂಜೆವರೆಗೂ ಮುಂದುವರೆದಿತ್ತು.
ಶಾಲೆ, ಮನೆಗಳಿಗೆ ಭಾರಿ ಆಘಾತ: ಸ್ಥಳೀಯ ವಿದ್ಯಾಮಂದಿರ ಪ್ರೌಢಶಾಲೆಯ ಮೇಲಿನ ಬೃಹತ್ ಆಕಾರದ ಶೆಡ್ ಸುಮಾರು ನೂರು ಅಡಿ ಹಾರಿ ಪಕ್ಕದ ಮನೆಗಳ ಮೇಲೆ, ವಾಹನಗಳ ಮೇಲೆ ಅಪ್ಪಳಿಸಿದ ಪರಿಣಾಮ ಮನೆಗಳು ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿವೆ, ವಾಹನಗಳು ಜಖಂಗೊಂಡಿವೆ. ಶೆಡ್ ರಭಸಕ್ಕೆ ವಿದ್ಯುತ್ ಕಂಬವೂ ಸಹ ನೆಲಕ್ಕುರುಳಿತು. ಸ್ಥಳೀಯ ಸಿಟಿ ಮುನಿಸಿಪಲ್ ಕೌನ್ಸೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೂ ಮೇಲ್ಛಾವಣಿಯ ಪತ್ರೆಗಳು ಹಾರಿ ನೆಲಕ್ಕುರುಳಿವೆ. ಅಮಲಝರಿ ಗ್ರಾಮದಲ್ಲಿಯೂ ಸಹ ಅಪಾರ ಹಾನಿಯಾಗಿದ್ದು ಶೆಡ್ ಹಾರಿ ಎಮ್ಮೆಯೊಂದು ಗಂಭೀರವಾಗಿ ಗಾಯಗೊಂಡಿದೆ.
ಶಾಸಕಿ ಜೊಲ್ಲೆ ಪರಿಶೀಲನೆ: ಮಂಗಳವಾರ ಮುಂಜಾನೆ ಶಾಸಕಿ ಶಶಿಕಲಾ ಜೊಲ್ಲೆ ಸ್ಥಳಕ್ಕೆ ಧಾವಿಸಿ ಹಾನಿಗೊಳಗಾದ ಶಾಲೆಗಳು, ಮನೆಗಳಿಗೆ ಭೆಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಗೊಳಗಾದ ಆಸ್ತಿಗಳ ಕುರಿತು ಕೂಡಲೇ ವರದಿ ಸಲ್ಲಿಸಲು ತಾಲೂಕಾಡಳಿಗೆ ಆದೇಶಿಸಿದರು. ಹಾನಿಗೊಳಗಾದವರಿಗೆ ಪರಿಹಾರವನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ ಎಂ.ಎನ್. ಬಳಿಗಾರ, ನಗರಸಭೆ ಪೌರಾಯುಕ್ತ ಜಗದೀಶ ಹುಲಗೆಜ್ಜಿ, ತಾಲೂಕಾ ಪಂಚಾಯಿತಿ ಇಓ ಸುನೀಲ ಮದ್ದಿನ್, ಹೆಸ್ಕಾಂ ಎಂಜಿನೀಯರ್ ಅಕ್ಷಯ ಚೌಗುಲೆ, ನಗರಸಭೆ ಮಾಜಿ ಅಧ್ಯಕ್ಷ ಜಯವಂತ ಭಾಟಲೆ, ವಿಲಾಸ ಗಾಡಿವಡ್ಡರ, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ. ನಗರಸಭೆ ಸದಸ್ಯರು ಭೆಟಿ ನೀಡಿ ಪರಿಶೀಲನೆ ನಡೆಸಿದರು.

Related Articles

Back to top button