ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಡಿಯುವ ನೀರು ಹಾಗೂ ಕೆರೆ ತುಂಬಲು ಯಾವುದೇ ಕಾನೂನು ತೋಡಕಿಲ್ಲ. ಸರಕಾರದ ಇಚ್ಛಾಶಕ್ತಿ ಬೇಕು. ಅಲ್ಲದೆ ಕಾಳಿ, ಮಲಪ್ರಭಾ ನದಿ ಕರ್ನಾಟಕ ರಾಜ್ಯದಲ್ಲಿಯೇ ಇರುವುದರಿಂದ ಯಾವುದೇ ಅಂತರರಾಜ್ಯ ಸಮಸ್ಯೆ ಬರುವುದಿಲ್ಲ ಎಂದು ಉತ್ತರ ಕರ್ನಾಟಕ ಸಮಗ್ರ ಹೋರಾಟ ಸಮಿತಿ ಅಧ್ಯಕ್ಷ ಸಂಗಮೇಶ ನಿರಾಣಿ ತಿಳಿಸಿದರು.
ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗಾಗಿ ಕಾಳಿ ನದಿ ನೀರು ಬಳಕೆ ಮಾಡಲು ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದ ಸವಿ ನೆನಪಿಗಾಗಿ ಈ ಭಾಗದ ನೀರಿನ ಕೊರತೆ ನಿಗಿಸಲು ಕಾಳಿ ನದಿ ನೀರಿನ ಬಳಕೆಯ ರೂವಾರಿಯಾಗಿರುವ ಅವರಿಗೆ ಹುಕ್ಕೇರಿ ಹಿರೇಮಠದಿಂದ ಗೌರವ ಪ್ರಧಾನ ಸ್ವೀಕರಿಸಿ ಮಾತನಾಡಿದರು.
ಉತ್ತರ ಕರ್ನಾಟಕದ ಐದು ಜಿಲ್ಲೆಯ ಜನರಿಗೆ ಕಾಳಿ ನದಿ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡಲು ಪ್ರಾರಂಭಿಸಿದ ಹೋರಾಟದಿಂದ ಸರಕಾರಕ್ಕೆ ವರದಿ ಸಲ್ಲಿಸಿದ್ದೇವು. ಆ ಸಂದರ್ಭದಲ್ಲಿ ಸರಕಾರದ ಎಲ್ಲ ಸಚಿವರು, ಸಂಸದರ ಸಹಕಾರದಿಂದ ರಾಜ್ಯ ಸರಕಾರ ಕಾಳಿ ನದಿ ನೀರು ಬಳಕೆ ಮಾಡಲು ಬಜೆಟ್ ನಲ್ಲಿ ಘೋಷಣೆ ಮಾಡಿದ್ದು ಹೆಮ್ಮೆಯ ಸಂಗತಿ ಎಂದರು.
ಉತ್ತರ ಕರ್ನಾಟಕದ ಒಳನಾಡು ಪ್ರದೇಶದಲ್ಲಿ ತಪ್ಪಲು ನಾಡಿನಲ್ಲಿರುವವರಿಗೆ ನೀರು ಸಿಗುತ್ತದೆ. ಆದರೆ ನರಗುಂದ, ನವಲಗುಂದದಲ್ಲಿ ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿಗೆ ಪರಿತಪಿಸುವ ಕಷ್ಟವನ್ನು ನಾವು ಕಣ್ಣಾರೆ ನೋಡಿದ್ದೇವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂಬ ನಿರ್ಣಯವನ್ನು ಸಹೋದರ, ಸಚಿವ ಮುರುಗೇಶ ನಿರಾಣಿ ಅವರು ಸಂಕಲ್ಪ ಮಾಡಿ ಬಿಳಗಿ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಕ್ಷೇತ್ರ ಮಾಡಿದರು ಎಂದರು.
ಅಲ್ಲದೆ, ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸಲು ಕಾಳಿ ನದಿ ನೀರನ್ನು ಬಳಕೆ ಮಾಡುವ ಉದ್ದೇಶದಿಂದ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಾಳಿ ನದಿ ನೀರಿನ ಹಂಚಿಕೆಯ ಬಗ್ಗೆ ಯಾವ ರೀತಿ ರೂಪರೇಷೆ ಮಾಡುವುದು ಎಂದು ಚಿಂತನೆ ನಡೆಸಿದ್ದೇವು. ಬಳಿಕ 10 ವರ್ಷಗಳಿಂದ ನೀರಾವರಿ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದ ನೀರಾವರಿ ಇಲಾಖೆಯ ಅಧಿಕಾರಿಗೆ ಸಂಪರ್ಕ ಮಾಡಿ ಕಾಳಿ ನದಿ ನೀರು ಹಂಚಿಕೆಯ ಬಗ್ಗೆ ವಿವಾದ ಏನೂ ಇಲ್ಲ. ಇದನ್ನು ಹಂಚಿಕೆ ಮಾಡಬಹುದು ಎಂದು ತಿಳಿಸಿದರು ಎಂದು ಹೇಳಿದರು.
ಕಾಳಿ ನದಿ ನೀರಿನಿಂದ ಬೆಳಗಾವಿ ಜಿಲ್ಲೆಗೆ ಹೆಚ್ಚಿಗೆ ಅನಕೂಲವಾಗುತ್ತದೆ. ಈ ಭಾಗದ ಮಠಾಧೀಶರ ನೇತೃತ್ವದಲ್ಲಿ ಸಭೆ ನಡೆಸಬೇಕೆಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯ ಹಿರೇಮಠದಲ್ಲಿಯೇ 11 ಜನ ಶ್ರೀಗಳ ಆಶೀರ್ವಾದದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಕಾಳಿ ನದಿ ಬಗ್ಗೆ ಘೋಷಣೆ ಮಾಡಿದ್ದು ಸಂತಸದ ಸಂಗತಿ ಎಂದರು.
ಉತ್ತರ ಕರ್ನಾಟಕದಲ್ಲಿ ಹರಿಯುವ ಕಷ್ಣಾ ನದಿಯ ಬಗ್ಗೆ ಯಾರೂ ಕುಂಬ ಮೇಳ ಮಾಡಲಿಲ್ಲ. ಕಾವೇರಿ ನದಿಯ ಬಗ್ಗೆ ಹಾಡು, ಕುಂಬಮೇಳ ಮಾಡುತ್ತಾರೆ. ನಮ್ಮ ಭಾಗದವರು ಕೃಷ್ಣಾ ನದಿಯ ನಗ್ಗೆ ಅಭಿಮಾನ ತೋರಿಸುವ ಅವಶ್ಯಕತೆ ಇದೆ ಎಂದು ಪ್ರತಿಕ್ರಿಯಿಸಿದರು.
ನೀರಾವರಿ ವಿಚಾರದಲ್ಲಿ ಕಳೆದ 45 ವರ್ಷಗಳಿಂದ ಉತ್ತರ ಕರ್ನಾಟಕದ ಬಗ್ಗೆ ಸರಕಾರಗಳು ನಿರ್ಲಕ್ಷ್ಯ ಮಾಡಿದ್ದವು. ಆದರೆ ಈಗ ಉತ್ತರ ಕರ್ನಾಟಕದವರೆ ಮುಖ್ಯಮಂತ್ರಿ, ನೀರಾವರಿ ಸಚಿವರಾಗಿರುವುದು ಈ ಭಾಗದ ನೀರಾವರಿ ಯೋಜನೆಗೆ ಜೀವ ಕಳೆ ಬಂದಿದೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಕುಡಿಯುವ ನೀರಿಗಾಗಿ ಹೋರಾಟ ನಡೆಸಿದ ಸಂಗಮೇಶ ನಿರಾಣಿ ಅವರು ಶ್ರಮ ಸಾರ್ಥಕವಾಗಿದೆ. ಕೇವಲ ಬಜೆಟ್‌ನಲ್ಲಿ ಘೋಷಣೆ ಮಾಡಿದರೆ ಸಾಲು ನೀರಾವರಿ ಅನುಷ್ಠಾನವಾಗುವವರೆಗೂ ಹೋರಾಟ ನಿರಂತರವಾಗಿರಬೇಕು ಎಂದು ಸಲಹೆ ನೀಡಿದರು.
ಈಶ್ವರ ಕತ್ತಿ ಮಾತನಾಡಿ, ಕಾಳಿ ನದಿ ಜೋಡಣೆ ಮಾಡುವುದರ ಸಲುವಾಗಿ ಕಳೆದ ಮೂರು ವರ್ಷದಿಂದ ಹೋರಾಟ ಮಾಡಿಕೊಂಡು ಬರಲಾಗಿತ್ತು. ಅಲ್ಲದೆ, ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದು ಸಂತಸದ ಸಂಗತಿ ಎಂದರು.
ಕಾಳಿ ನದಿ ಜೋಡಣೆ ಮಾಡಲು ಬೆಳಗಾವಿಯಲ್ಲಿಯೇ ವಿವಿಧ ಮಠಾಧೀಶರ ಸಭೆ ಆಯೋಜನೆ ಮಾಡಲು ನಿರ್ಧರಿಸಿ ಹುಕ್ಕೇರಿ ಹಿರೇಮಠದ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಿ ಕಾಳಿ ನದಿ ಜೋಡಣೆಯ ಹೋರಾಟದ ಬಗ್ಗೆ ರೂಪರೇಷೆ ಸಿದ್ದಪಡಿಸಲಾಯಿತು ಎಂದು ತಿಳಿಸಿದರು.
ಕಾಳಿ ನದಿ ನೀರಿನ ಬಗ್ಗೆ ಎಲ್ಲಿಯೂ ತಂಟೆ ತಕರಾರು ಇಲ್ಲ. ಸಮುದ್ರ ಸೇರುವ 35 ಟಿಎಂಸಿ ನೀರನ್ನು ಮಲಪ್ರಭಾ, ಘಟಪ್ರಭಾ ನದಿಗೆ ಜೋಡಣೆ ಮಾಡುವುದರ ಮೂಲಕ ಕಾಳಿ ನದಿಯಿಂದ ಐದು ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿದ ಶ್ರೇಯ ಸಂಗಮೇಶ ನಿರಾಣಿ ಅವರಿಗೆ ಸಲ್ಲುತ್ತದೆ ಎಂದರು.
ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ, ರಾಜೇಂದ್ರ ದೇಸಾಯಿ, ಡಾ. ನಿಂಗನಗೌಡ ಪಾಟೀಲ, ವರ್ಧಮಾನ ಯಲಗುದ್ರಿ, ಮಹೇಶ ಚೆನ್ನಂಗಿ, ಬಸವರಾಜ ದಲಾಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ