ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಯುವ ಸಾಧಕರಿಗೆ ಮಾರ್ಗದರ್ಶಕರಾಗಿ ಅವರ ಶ್ರೇಯಸ್ಸನ್ನು ಕಂಡು ಸಂತೋಷಪಡುವ ವ್ಯಕ್ತಿತ್ವವನ್ನು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳಲ್ಲಿ ಕಾಣಬಹುದು.
ಚಿಕ್ಕವಯಸ್ಸಿನಿಂದಲೂ ಕೂಡ ಅವರನ್ನು ನೋಡುತ್ತಾ ನೋಡುತ್ತಾ ಅವರ ಆದರ್ಶವನ್ನು ಮೈಗೂಡಿಸುತ್ತ ಬೆಳೆದವರು ನಾವೆಲ್ಲ. ಎಲ್ಲಾ ಸಮುದಾಯದ ಜೊತೆ ಎಲ್ಲಾ ಸಂಪ್ರದಾಯದೊಂದಿಗೆ ಬೆರೆತು ಕಾರ್ಯವನ್ನು ಮಾಡುವ ಶ್ರೀಗಳ ಕಾರ್ಯ ಮೆಚ್ಚುವಂತದ್ದು ಎಂದು ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ನೂತನ ಅಧಿಪತಿಗಳಾದ ಶ್ರೀ ಡಾ. ಅಲ್ಲಮಪ್ರಭು ಸ್ವಾಮಿಗಳು ಹೇಳಿದರು.
ನಗರದ ಲಕ್ಷ್ಮಿ ಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾಮಠದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಾಗನೂರು ನೂತನ ಶ್ರೀಗಳನ್ನು ಗೌರವಿಸಿ ಮಾತನಾಡಿದ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಮಹಾಪ್ರಸಾಧಿ ಡಾ. ಶಿವಬಸವ ಮಹಾಸ್ವಾಮಿಗಳ ಜ್ಞಾನ ಶಕ್ತಿಯನ್ನು, ಪ್ರಭು ಮಹಾಸ್ವಾಮಿಗಳ ಇಚ್ಛಾಶಕ್ತಿಯನ್ನು, ತೋಂಟದ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳ ಕ್ರಿಯಾಶಕ್ತಿಯನ್ನು ಮೈಗೂಡಿಸಿಕೊಂಡು ಬದುಕುತ್ತಿರುವವರು ಮತ್ತು ಜನರಿಗೆ ಬೆಳಕಾಗಿ ನಿಂತವರು ಸದ್ಯದ ನಾಗನೂರಿನ ಅಲ್ಲಮಪ್ರಭು ಮಹಾಸ್ವಾಮಿಗಳು. ನಾಗನೂರು ರುದ್ರಾಕ್ಷಿಮಠ ಎಂದರೆ ಅದು ಕನ್ನಡದ ಕೋಟೆ. ಈ ಕೋಟೆಯೊಳಗೆ ನಾವೆಲ್ಲರು ನೆಮ್ಮದಿಯಿಂದ ಇದ್ದೇವೆ ಅಂದರೆ ನಾಗನೂರು ರುದ್ರಾಕ್ಷಿಮಠದ ಪರಿಸರ ಎಂದು ಹೇಳಲು ಸಂತೋಷವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಅಲ್ಪಸಂಖ್ಯಾತರ ನಿಗಮದ ಅಧ್ಯಕ್ಷರ ಮುಕ್ತಾರ್ ಹುಸೇನ್ ಪಠಾಣ ಅವರು ಮಾತನಾಡಿ, ಹುಕ್ಕೇರಿ ಹಿರೇಮಠದಲ್ಲಿ ಇವತ್ತು ನಾಗನೂರು ರುದ್ರಾಕ್ಷಿಮಠದ ನೂತನ ಶ್ರೀಗಳ ಸನ್ಮಾನವನ್ನು ಏರ್ಪಡಿಸಿರುವುದು ನಮಗೆ ಅತೀವ ಸಂತೋಷ ತಂದಿದೆ. ಚಿಕ್ಕವಯಸ್ಸಿನಿಂದಲೂ ನಾವು ನೂತನ ಶ್ರೀಗಳನ್ನು ನೋಡುತ್ತ ಇದ್ದೇವೆ. ಎಲ್ಲರನ್ನೂ ಪ್ರೀತಿಸುವ ಮತ್ತು ಹಸಿದು ಬಂದವರಿಗೆ ಅನ್ನ ನೀಡುವ ಗುಣ ಇವರಲ್ಲಿ ಕಾಣಬಹುದಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶಿವಯೋಗಿ ವಸತಿ ಶಾಲೆಯ ಅಶೋಕ ಧರಿಗೌಡರ, ನಾನಾಗೌಡ ಬಿರಾದಾರ, ಚಂದ್ರಶೇಖರಯ್ಯ ಸಾಲಿಮಠ, ವಿರೂಪಾಕ್ಷಯ್ಯ ನೀರಲಗಿಮಠ, ಶ್ರೀಮತಿ ಪಟ್ಟಣಶೆಟ್ಟಿ ಇನ್ನೂ ಅನೇಕರು ಉಪಸ್ಥಿತರಿದ್ದರು. ಶ್ರೀಗಳನ್ನು ಸುವಿಚಾರ ಚಿಂತನ ಬಳಗ ವಿಶೇಷವಾಗಿ ಸನ್ಮಾನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ