ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾಜಮುಖಿ ಕಾರ್ಯವನ್ನು ಮಾಡುವುದರೊಂದಿಗೆ ಎಲ್ಲರ ಮನ ಗೆದ್ದಿದ್ದಾರೆ. ಇವತ್ತು ಅವರ ಕೀರ್ತಿ ಎಲ್ಲಾ ದೇಶಗಳಲ್ಲಿ ಹಬ್ಬುತ್ತಿರುವುದು ಅಭಿಮಾನದ ಸಂಗತಿ ಎಂದು ಭಾರತ ಸರಕಾರದ ರಾಜ್ಯ ರೇಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ಪ್ರಶಂಸಿಸಿದ್ದಾರೆ.
ಅಕ್ಟೋಬರ್ 19ಕ್ಕೆ ಆಸ್ಟ್ರೇಲಿಯಾ ಸಿಡ್ನಿಯಲ್ಲಿ ಜರುಗುವ ವೀರಶೈವ ಸಮಾಜದ ಕಾರ್ಯಕ್ರಮದ ನೇತೃತ್ವ ಶ್ರೀಗಳೇ ವಹಿಸುತ್ತಿದ್ದಾರೆ. ಅಕ್ಟೋಬರ್ 21ಕ್ಕೆ ಆಸ್ಟ್ರೇಲಿಯಾ ಪಾರ್ಲಿಮೆಂಟಿನಲ್ಲಿ ಕೂಡ ಶ್ರೀಗಳನ್ನು ಗೌರವಿಸುತ್ತಿರುವುದು ಅಭಿಮಾನದ ಸಂಗತಿ. ಇಡೀ ಭಾರತೀಯರು ನಾವೆಲ್ಲ ಹೆಮ್ಮೆಪಡುವಂತಹ ವಿಚಾರ ಎಂದು ಅವರು ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಪಾಲ್ಗೊಂಡು ಹೇಳಿದರು.
ಆಸ್ಟ್ರೇಲಿಯಾದ ಪರವಾಗಿ ಬಂದ ಅರವಿಂದ್ ಪಾಟೀಲ್ ಆಸ್ಟ್ರೇಲಿಯಾ ಕಾರ್ಯಕ್ರಮಕ್ಕೆ ಶ್ರೀಗಳನ್ನು ವೇದಿಕೆಯಲ್ಲೇ ಆಮಂತ್ರಿಸಿದರು. ಕಾರ್ಯಕ್ರಮದಲ್ಲಿ ಹುಕ್ಕೇರೀಶ ವೆಬ್ ಸೇಟ್ ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.
2020ನೇಯ ಹುಕ್ಕೇರಿ ಗುರುಶಾಂತೇಶ್ವರ ದಿನದರ್ಶಿಕೆಯನ್ನು ಬಿಡುಗಡೆ ಮಾಡಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ, ಆಹಾರ ಮತ್ತು ಸರಬರಾಜು ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಹುಕ್ಕೇರಿ ಹಿರೇಮಠಕ್ಕೆ ಬಂದು ಆಶೀರ್ವಾದವನ್ನು ಪಡೆದರೆ ಎಲ್ಲದರಲ್ಲಿಯೂ ಕೂಡ ಕೀರ್ತಿ ಸಿಗುತ್ತದೆ ಅನ್ನುವುದಕ್ಕೆ ನಿದರ್ಶನ ಶ್ರೀಮಠ. ನಾನು ಶಾಸಕಿ ಆಗುವುದಕ್ಕಿಂತ ಮುಂಚೆ ಇಲ್ಲಿ ಬಂದು ಆಶೀರ್ವಾದ ಪಡೆದು ಇವತ್ತು ಶಾಸಕಿಯಾಗಿ, ಸಚಿವೆಯಾಗಿ ಈಗ ನಿಮ್ಮ ಮುಂದೆ ನಿಂತಿದ್ದೇನೆ. ಈ ಭಾಗಕ್ಕೆ ಹೆಚ್ಚು ಕಾರ್ಯವನ್ನು ಮಾಡುತ್ತೇನೆ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಅಧಿಕಾರವನ್ನು ಸಮಾಜಮುಖಿಯಾಗಿ ಬೆಳೆಯಿಸಿಕೊಂಡು ಹೆಚ್ಚು ಕಾರ್ಯವನ್ನು ಮಾಡಲಿ ಎಂದರು. ಮಾಜಿ ಸಚಿವ ಶಶಿಕಾಂತ ನಾಯಿಕ ಉಪಸ್ಥಿತರಿದ್ದರು. ವೇದಿಕೆ ಮೇಲೆ ರಾಯಭಾಗದ ಮಠದ ಪರವಾಗಿ ಅರುಣ್ ಐಹೊಳೆ ಅವರು ಸಚಿವರುಗಳನ್ನು ಸನ್ಮಾನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ