Belagavi NewsBelgaum NewsKannada NewsKarnataka NewsLatest

*ಹುಕ್ಕೇರಿ ಶ್ರೀಗಳಿಗೆ ವಿಶ್ವ ಬಸವಾಂಬೆ ಪ್ರಶಸ್ತಿ ಪ್ರಧಾನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಕೇಂದ್ರ ಹಾಗೂ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಕ್ಷರ ದಾಸೋಹ ಯೋಜನೆಯಲ್ಲಿ ಚಿಕ್ಕೋಡಿ,‌ ನಿಪ್ಪಾಣಿ , ಹುಕ್ಕೇರಿ ತಾಲೂಕಿನಲ್ಲಿ 65 ಸಾವಿರ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯನ್ನು ಯಶಸ್ವಿಗೊಳಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ. ಅನ್ನಪೂರ್ಣೇಶ್ವರಿ ಇವರಿಗೆ ಆರಾಧ್ಯ ದೇವತೆ. ಅನ್ನಪೂರ್ಣೇಶ್ವರಿಯ ಪುತ್ರನೇ ಎನ್ನಿಸಿರುವ ಚಂದ್ರಶೇಖರ ಶ್ರೀಗಳಿಗೆ ವಿಶ್ವ ಬಸವಾಂಬೆ ಪ್ರಶಸ್ತಿ ನೀಡಿ ಆಶೀರ್ವದಿಸುತ್ತಿರುವುದು ನಮಗೆ ಅತೀವ ಸಂತಸ ತಂದಿದೆ ಎಂದು ಶ್ರೀ‌ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ಕಲಬುರಗಿ ಜಿಲ್ಲೆಯ ಶಾಖಾಪುರ ವಿಶ್ವಾರಾಧ್ಯ ತಪೋವನದಿಂದ ಕೊಡಲ್ಪಡುವ ವಿಶ್ವ ಬಸವಾಂಬೆ ಪ್ರಶಸ್ತಿ ಪ್ರಧಾನ ಮಾಡಿ ಆಶೀರ್ವಚನ ನೀಡಿದರು. ಅನ್ನಪೂರ್ಣೇಶ್ವರಿಯ ಪುತ್ರ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾಗಿ ಕರ್ನಾಟಕದಲ್ಲಿ ಅಕ್ಷರ ದಾಸೋಹ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಷ್ಟೆ ಅಲ್ಲದೆ, ಹುಕ್ಕೇರಿ ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದಾರೆ. ಇಡೀ ವಿಶ್ವವನ್ನೇ ಕಾಡಿದ್ದ‌ ಮಹಾಮಾರಿ ಕೊರೊನಾ ಸಂಕಷ್ಟದಲ್ಲಿ ಗಡಿ ಭಾಗದ ಬೆಳಗಾವಿಯ ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತಕ್ಕೆ ಉಚಿತವಾಗಿ ಆ್ಯಂಬುಲೆನ್ಸ್ ನೀಡಿದ್ದು ಶ್ಲಾಘನೀಯ ಎಂದರು.


ಪ್ರಶಸ್ತಿ ಫಲಕ, ಶಾಲು ಮತ್ತು ಚಿನ್ನದ ಉಂಗುರವನ್ನು ನೀಡಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ವಿಶ್ವಾರಾಧ್ಯರ ಮತ್ತು ಬಸವಾಂಬೆಯವರ 73ನೇ ಜಾತ್ರಾ ಮಹೋತ್ಸವದ ಅಂಗವಾಗಿ ಸುಮಾರು 10 ಸಾವಿರ ಭಕ್ತರ ನಡುವೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಪ್ರಶಸ್ತಿಯನ್ನು ಶ್ರೀಮಠದಿಂದ ನೀಡಿದ ಶಾಖಾಪುರ ವಿಶ್ವಾರಾಧ್ಯ ತಪೋವನದ ಶ್ರೀ ಡಾ.ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಶ್ರೀಗಳು ದೇವಿಯ ಆರಾಧಕರು. ಲಿಂಗ ಪೂಜಾ ನಿಷ್ಠರು. ಇವತ್ತು ವಿಶ್ವಾರಾಧ್ಯರು ಎಂದರೆ ಈ ಭಾಗದಲ್ಲಿ ನಡೆದಾಡುವ ದೇವರು. ಅವರ ಆಜ್ಞೆಯಂತೆ ನಡೆದುಕೊಂಡವರೆ ಬಸವಾಂಬೆ ಅವರು. ಬಸವಾಂಬೆ ಎಂದರೆ ಈ ಭಾಗದಲ್ಲಿ ಅತೀ ಶೃದ್ದೆಯುಳ್ಳ ದೇವತೆ. ಇವರ ಹೆಸರಿನಿಂದ ಶ್ರೀಗಳಿಗೆ ಪ್ರಶಸ್ತಿ ನೀಡುತ್ತಿರುವುದು ನಮಗೆ ಅತೀವ ಸಂತೋಷ ತಂದಿದೆ ಎಂದರು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು, ಇವತ್ತು ಅನೇಕ ಭಾಗದಲ್ಲಿ ನಮಗೆ ಪ್ರಶಸ್ತಿ ಲಭಿಸಿವೆ. ಆದರೆ ವಿಶ್ವ ಬಸವಾಂಬೆ ಪ್ರಶಸ್ತಿ ನಮ್ಮ ಕಾರ್ಯಕ್ಕೆ ಅಮ್ಮ ನೀಡುವ ಕೈ ತುತ್ತು ಆಗಿದೆ ಎಂದು ಭಾವನಾತ್ಮಕವಾಗಿ ನುಡಿದರು. ಪ್ರಶಸ್ತಿ ಪ್ರದಾನದ ವಿವರವನ್ನು ಪಾಳಾ ಶ್ರೀ ಡಾ. ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಶ್ರೀಗಳು ಎಂದರೆ ನಮ್ಮ ಶಿವಾಚಾರ್ಯರಲ್ಲಿಯೇ ಕ್ರಿಯಾಶೀಲ ಶಿವಾಚಾರ್ಯರು. ಗಡಿ ಭಾಗದಲ್ಲಿ ಕನ್ನಡದ ಉಳಿವಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಸಾವಿರಾರು ಮಕ್ಕಳಿಗೆ ವೇಧ ಅಧ್ಯಯನ, ಸುಮಾರು 500ಕ್ಕೂ ಹೆಣ್ಣು ಮಕ್ಕಳಿಗೆ ವೇಧ ಕಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕರ್ನಾಟಕ ರಾಜ್ಯೋತ್ಸವದಲ್ಲಿ ಹೋಳಿಗೆ ಊಟ ನೀಡಿರುವ ಶ್ರೀಗಳು ಕಾವಿ ಕುಲಕ್ಕೆ ಮಾದರಿ ಎಂದರು.


ಈ ಸಂದರ್ಭದಲ್ಲಿ ಕಲಬುರಗಿ ಭಾಗದ ವಿವಿಧ ಮಠಾಧೀಶರು, ಗಣ್ಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button