*120 ವೇದ ವಟುಗಳಿಗೆ ಶಿವಯೋಗದ ಮಾರ್ಗದರ್ಶನ ಮಾಡಿದ ಹುಕ್ಕೇರಿ ಶ್ರೀ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇದು ಅಧಿಕಮಾಸ ಅಧಿಕ ಮಾಸ ಎಂದರೆ ಪ್ಲಸ್ ಮಾಸ. ನಾವು ಒಳ್ಳೆಯ ಕಾರ್ಯವನ್ನು ಮಾಡಿ ಪೂಜೆ, ಜಪ, ತಪ, ದಾನ, ಧರ್ಮ ಇವುಗಳನ್ನು ಮಾಡಿದರೆ ಅದರಿಂದ ಪುಣ್ಯ ಪ್ರಾಪ್ತವಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಒಂದರಷ್ಟು ಮಾಡಿದರೆ ಎರಡಷ್ಟು ಲಾಭ ಸಿಗುತ್ತದೆ. ಹಾಗೆ ನಾವು ಕೆಟ್ಟದೇನಾದರೂ ಮಾಡಿದರೂ ಕೂಡ ನಮಗೆ ತಿರುಗಿ ಮತ್ತೆ ಎರಡಷ್ಟು ಕೆಟ್ಟದಾಗುತ್ತದೆ ಅದನ್ನು ಆಲೋಚಿಸಿ ಅಧಿಕ ಮಾಸದಲ್ಲಿ ನಿತ್ಯ ಪ್ರಾರ್ಥನೆ, ಜಪ,ತಪ ಪ್ರಾರ್ಥನೆ, ದಾನ, ಧರ್ಮ ಮಾಡಿ ಯಾರನ್ನೂ ನೋಯಿಸಬೇಡಿ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶುಕ್ರವಾರ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಗುರುಕುಲದ ವಿದ್ಯಾರ್ಥಿಗಳಿಗೆ ಶಿವಯೋಗವನ್ನು ತಿಳಿಸಿಕೊಡುತ್ತ ಮಾತನಾಡಿದ ಅವರು, ವೀರಶೈವ ಲಿಂಗಾಯತ ಧರ್ಮದಲ್ಲಿ ಲಿಂಗ ಪೂಜೆ ಪ್ರಧಾನವಾಗಿರುವಂತದ್ದು, ಹಣ ಇದ್ದವ ಹಣವಂತ, ಗುಣ ಇದ್ದವ ಗುಣವಂತ, ವಿದ್ಯೆ ಇದ್ದವ ವಿದ್ಯಾವಂತ ಹಾಗೆ ಲಿಂಗ ಇದ್ದವನ್ನು ಮಾತ್ರ ಲಿಂಗವಂತ ಕೇವಲ ಹೆಸರಿಗೆ ಲಿಂಗವಂತ ಎನ್ನುವುದು ಯೋಗ್ಯವಲ್ಲ. ಎಲ್ಲಾ ವೀರಶೈವ ಲಿಂಗಾಯತರು ತಮ್ಮ ಎದೆಯ ಮೇಲೆ ಲಿಂಗವನ್ನು ಧರಿಸಿಕೊಂಡು ನಿತ್ಯ ಇಷ್ಟ ಲಿಂಗವನ್ನು ಪೂಜಿಸಿದರೆ ಮಾತ್ರ ಅವರು ವೀರಶೈವ ಲಿಂಗಾಯತರು ಎಂದು ಹೇಳಬಹುದು. ಅದಕ್ಕಾಗಿ ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.
ಆದ್ದರಿಂದ ತಾವೆಲ್ಲರೂ ಕೂಡ ತಮ್ಮ ತಮ್ಮ ಧರ್ಮಗಳನ್ನು ಆಚರಿಸಿ ಅಧಿಕ ಮಾಸದಲ್ಲಿ ಹೆಚ್ಚು ಫಲವನ್ನು ಪಡೆಯಿರಿ ಎಂದು ಕಿವಿಮಾತು ಹೇಳಿದರು.
ಈ ವೇಳೆ 120 ವೇದ ವಟುಗಳಿಗೆ ಶಿವಯೋಗದ ಮಾರ್ಗದರ್ಶನವನ್ನು ಹುಕ್ಕೇರಿ ಶ್ರೀಗಳು ನೀಡಿದರು.
ಹುಕ್ಕೇರಿ ಹಿರೇಮಠದ ಗುರುಕುಲದ ಮುಖ್ಯಸ್ಥ ವಿದ್ವಾನ ಸಂಪತಕುಮಾರ ಶಾಸ್ತ್ರೀಗಳು ಮಾತನಾಡಿ, ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಹುಕ್ಕೇರಿ ಹಾಗೂ ಬೆಳಗಾವಿ ಶಾಖೆಯಲ್ಲಿ ಗುರುಕುಲದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುತ್ತಾರೆ ಇದು ನಮಗೆ ಮಾರ್ಗದರ್ಶನವಾಗಿದೆ ಎಂದರು.
ವೇದಮೂರ್ತಿಗಳಾದ ಉದಯಕುಮಾರ ಶಾಸ್ತ್ರೀಮಠ ಕೋರಿಮಠ, ನಿಶಾಂತಸ್ವಾಮಿ ಹಿರೇಮಠ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ