ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಮನೆಯ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತ ಎನ್ನುವ ಆರೋಪದ ಮಧ್ಯೆಯೇ 2ನೇ ದಿನವೂ ಅವರ ಮನೆಯಲ್ಲಿ, ಸಂಸ್ಥೆಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ.
2ನೇ ದಿನದ ಅಂತ್ಯದಲ್ಲಿ ಬಂದಿರುವ ಮಾಹಿತಿ ಪ್ರಕಾರ ಪರಮೇಶ್ವರ ಅವರು ಘೋಷಿಸದೇ ಇರುವ ಆಸ್ತಿ ಸುಮಾರು 103 ಕೋಟಿ ರೂ. ಅವರ ಮತ್ತು ಅವರ ಆಪ್ತರ ಮನೆಯಲ್ಲಿ ಸಿಕ್ಕಿರುವ ನಗದು 4.60 ಕೋಟಿ ರೂ. ಜೊತೆಗೆ ಅವರ ಸಂಸ್ಥೆಯ ಸಿಬ್ಬಂದಿ ಹೆಸರಲ್ಲಿ ಅವರಿಗೆ ಗೊತ್ತಿಲ್ಲದೆ ಮಾಡಿರುವ ಹೂಡಿಕೆ ಸುಮಾರು 4.50 ಕೋಟಿ ರೂ.
ಆದಾಯ ತೆರಿಗೆ ಇಲಾಖೆ ಸಿಬ್ಬಂದಿ ಶುಕ್ರವಾರವೂ ತನಿಖೆ ಮುಂದುವರಿಸಿದೆ. ಪರಮೇಶ್ವರ ಮನೆಯ ಲಾಕರ್ ಗಳನ್ನು ತೆಗೆಸಿ ಅದರಲ್ಲಿದ್ದ ಆಭರಣ ಹಾಗೂ ನಗದನ್ನು ವಶಕ್ಕೆ ಪಡೆದು ಮೌಲ್ಯ ಲೆಕ್ಕ ಹಾಕಲಾಗುತ್ತಿದೆ. ಈವರೆಗೆ ಒಟ್ಟೂ 120 ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ.
ಪರಮೇಶ್ವರ ಅವರ ಶಿಕ್ಷಣ ಸಂಸ್ಥೆ 2002ರಿಂದ ತೆರಿಗೆಗಳನ್ನು ಕಟ್ಟಿಲ್ಲ. ತುಮಕೂರು ಮಹಾನಗರ ಪಾಲಿಕೆಗೂ 2 ಕೋಟಿ ರೂ.ಗಳಷ್ಟು ತೆರಿಗೆ ಬಾಖಿ ಉಳಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಪರಮೇಶ್ವರ ಅವರು ಚುನಾವಣೆ ಕಾಲಕ್ಕೆ ಕೇವಲ 36 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿದ್ದರು. ಆದರೆ ಅದು 150 ಕೋಟಿ ರೂ. ಹತ್ತಿರ ಇರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. ತಂದೆಯವರು ಕಟ್ಟಿದ ಶಿಕ್ಷಣ ಸಂಸ್ಥೆ ಬಿಟ್ಟು ತಮಗೆ ಯಾವುದೇ ಬಿಸಿನೆಸ್ ಇಲ್ಲ ಎಂದು ಅವರು ಹೇಳಿದ್ದರು. ಆದರೆ ಅನೇಕ ಕಡೆಗಳಲ್ಲಿ ಅವರು ಹೂಡಿಕೆ ಮಾಡಿರುವುದು ಸಹ ಪತ್ತೆಯಾಗಿದೆ.
ತುಮಕೂರು, ಬೆಂಗಳೂರುಗಳಲ್ಲಿ ತನಿಖೆ ಮುಂದುವರಿಸಲಾಗಿದ್ದು, ಹಲವಾರು ಆಪ್ತರ ಮನೆಗಳಲ್ಲೂ ಶೋಧ ನಡೆಸಲಾಗುತ್ತಿದೆ. ಪರಮೇಶ್ವರ ಅವರನ್ನು ಜೊತೆಯಲ್ಲೇ ಇರಿಸಿಕೊಂಡು ವಿಚಾರಣೆ ಮುಂದುವರಿಸಲಾಗಿದೆ. ಶನಿವಾರವೂ ವಿಚಾರಣೆಯನ್ನು ಮುಂದುವರಿಸುವ ಸಾಧ್ಯತೆ ಇದೆ.
ಕೋಟಿ ಕೋಟಿ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಪರಮೇಶ್ವರ ಅವರನ್ನು ಸಮರ್ಥಿಸಿ, ದಾಳಿ ರಾಜಕೀಯ ಪ್ರೇರಿತ ಎಂದು ಮಾತನಾಡುತ್ತಿದ್ದವರ ಧ್ವನಿ ಸ್ವಲ್ಪ ತಗ್ಗಿದೆ. ಶನಿವಾರ ಮುಂದುವರಿಯುವ ದಾಳಿ ವೇಳೆ ಇನ್ನೆಷ್ಟು ಆಸ್ತಿ ಪತ್ತೆಯಾಗಲಿದೆ ಎನ್ನವುದನ್ನು ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ