*2 ಕೋಟಿ ವಿಮಾ ಹಣಕ್ಕಾಗಿ ಪತಿ ಹತ್ಯೆ: 9 ಆರೋಪಿಗಳ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಘಟಪ್ರಭಾ ಮತ್ತು ಯಮಕನಮರ್ಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಸಂಚಲನ ಮೂಡಿಸಿದ ಕೊಲೆ ಪ್ರಕರಣವೊಂದನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ, ಈ ಸಂಬಂಧ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮೃತ ಸಂದೀಪ ಕಲಗೌಡ ಮಂಜರಗಿ (46) ಅವರು ನಿವೃತ್ತ ಸೈನಿಕರಾಗಿದ್ದರು. ಅವರ ಹೆಸರಿನಲ್ಲಿ ಎಚ್‌ಡಿಎಫ್‌ಸಿ (HDFC) ಮತ್ತು ಎಸ್‌ಬಿಐ (SBI) ಬ್ಯಾಂಕ್‌ಗಳಲ್ಲಿ ವಿಮೆ ಮಾಡಿಸಲಾಗಿತ್ತು. ರಸ್ತೆ ಅಪಘಾತದಲ್ಲಿ ಮರಣ ಹೊಂದಿದರೆ ಸುಮಾರು 2 ಕೋಟಿ ರೂ. ವಿಮಾ ಹಣ ಬರುತ್ತದೆ ಎಂಬ ಧುರಾಸೆಯಿಂದ, ಮೃತನ ಪತ್ನಿ ಸುಮಾ ಸಂದೀಪ ಮಂಜರಗಿ ಇತರ-09 ಜನ ಆರೋಪಿತರ ಸಹಕಾರದೊಂದಿಗೆ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು.
ಮೃತ ಸಂದೀಪ ಅವರು ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ ಸಂದರ್ಭದಲ್ಲಿ, ಅವರನ್ನು ಘಟಪ್ರಭಾದ ಜೆ.ಜಿ.ಕೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದಾಗ ಪತ್ನಿ ಸುಮಾ ಮತ್ತು ಆರೋಪಿ ಪುಂಡಲೀಕ ವಿಠಲ ಡೊಂಬರ ಸೇರಿ, ಸಲೈನ್ ಬಾಟಲ್‌ನಲ್ಲಿ ವಿಷ ಬೆರೆಸಿ ಹಾಗೂ ನಿದ್ದೆ ಮಾತ್ರೆಗಳನ್ನು ಸೇವಿಸಲು ನೀಡಿ ಸಂದೀಪ ಅವರನ್ನು ಹತ್ಯೆ ಮಾಡಿದ್ದರು.
ನಂತರ, ಇದು ರಸ್ತೆ ಅಪಘಾತದಿಂದ ಆದ ಸಾವು ಎಂದು ಯಮಕನಮರ್ಡಿ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಮುಚ್ಚಿಹಾಕಲು ಮತ್ತು ಮರಣೋತ್ತರ ಪರೀಕ್ಷಾ ವರದಿಯಲ್ಲಿ (PM Report) ವಿಷದ ಅಂಶ ಕಂಡುಬರದಂತೆ ಮಾಡಲು, ಬೆಳಗಾವಿಯ ಆರ್‌ಎಫ್‌ಎಸ್‌ಎಲ್ (RFSL) ಪ್ರಯೋಗಾಲಯದ ಸಿಬ್ಬಂದಿ ಹಾಗೂ ವೈದ್ಯರು ಸೇರಿದಂತೆ ಹಲವರನ್ನು ಆರೋಪಿಗಳು ಬಳಸಿಕೊಂಡಿದ್ದರು.
ಆರ್‌ಎಫ್‌ಎಸ್‌ಎಲ್ ವರದಿಯಲ್ಲಿ ವಿಷದ ಅಂಶ ಬರದಂತೆ ಮಾಡಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಒಟ್ಟು 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮೃತದೇಹವನ್ನು ಹೂತಿದ್ದ ಸ್ಥಳದಿಂದ ಹೊರತೆಗೆದು (Exhumation) ಪುನಃ ಮರಣೋತ್ತರ ಪರೀಕ್ಷ ನಡೆಸಲಾಗಿದೆ.
ಆರೋಪಿಗಳ ಮಾಹಿತಿ ಮೇರೆಗೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ (ಕಲಂ 103(1), 238(ಬಿ), 3(5) ಬಿಎನ್‌ಎಸ್) ಪರಿವರ್ತಿಸಿ ತನಿಖೆ ಕೈಗೊಳ್ಳಲಾಗಿದೆ. ಅಪರಾಧ ಕೃತ್ಯಕ್ಕೆ ಬಳಸಿದ ವಿಷದ ಬಾಟಲಿಗಳು, ಸಿರಿಂಜ್‌ಗಳು, ಮೊಬೈಲ್‌ಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಪ್ರಕರಣ ಸಂಬಂಧ ಯೋಧನ ಪತ್ನಿ ಸುಮಾ, ಆಕೆಯ ಪ್ರಿಯಕರ ಪುಂಡಲೀಕ
ಕೃತ್ಯಕ್ಕೆ ಸಾಥ್ ಕೊಟ್ಟ ಅಪ್ಪಾಸಾಬ್ ನಾಯಿಕವಾಡಿ, ಚನ್ನಪ್ಪಾ ಅಡವಿಸ್ವಾಮಿಮಠ, ನಾಗರಾಜು, ಅಶೋಕ ಗುಜನಾಳ, ಬಸವರಾಜ್ ಬಸ್ಮೆ, ರಾಹುಲ್ ಜೋಗಿ ಅರೆಸ್ಟ್ ಮಾಡಲಾಗಿದೆ
ಇಲಾಖೆಯು ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ತನಿಖೆ ಮುಂದುವರೆದಿದ್ದು, ಸದರಿ ಪ್ರಕರಣದಲ್ಲಿ ಮಾರ್ಗದರ್ಶನ ನೀಡಿದ ಡಿಎಸ್‌ಪಿ ಗೋಕಾಕ ಮತ್ತು ತನಿಖೆ ಕೈಕೊಂಡ ಪಿಐ ಯಮಕನಮರ್ಡಿ ಮತ್ತು ಪಿಐ ಘಟಪ್ರಭಾ ರವರ ತನಿಖೆಯನ್ನು ಎಸ್‌ಪಿ ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.



