ಪ್ರಗತಿವಾಹಿನಿ ಸುದ್ದಿ, ಅಥಣಿ – ಬುಧವಾರ ಜಿಲ್ಲಾ ಪಂಚಾಯತ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ಅಥಣಿ ತಾಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಬ್ಬರು ಜಿಲ್ಲಾ ಪಂಚಾಯಿತಿ ಸದಸ್ಯೆಯರ ಪತಿಯಂದಿರು ಅಧಿಕಾರ ಚಲಾಯಿಸಿದ್ದಾರೆ.
ಮೋಳೆ ಜಿಲ್ಲಾ ಪಂಚಾಯತ ಸದಸ್ಯರಾದ ಪುಟ್ಟರಾಜಮ್ಮ ತುಗಶೆಟ್ಟಿ ಗೈರು ಹಾಜರಿದ್ದರು.
ಈ ಅವಕಾಶವನ್ನು ಬಳಸಿಕೊಂಡ ಅವರ ಪತಿ ಶ್ರೀಶೈಲ ತುಗಶೆಟ್ಟಿ ಅಧಿಕಾರ ಚಲಾಯಿಸಿದ್ದಾರೆ.
ಅದೇ ರೀತಿ ಸದಸ್ಯೆ ಶಕುಂತಲಾ ದಿವಾನಮಾಳ ಅವರ ಪರವಾಗಿ ಪತಿ ಶಿವಾನಂದ ದಿವಾನಮಾಳ ವೇದಿಕೆಯಲ್ಲಿ ಕುಳಿತಿದ್ದರು.
ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ, ತಾವೊಬ್ಬ ಜನಪ್ರತಿನಿಧಿ ಅಲ್ಲದೇ ಇದ್ದರೂ ಕೂಡ ಹೆಂಡತಿ ಚಲಾಯಿಸಬೇಕಾದ ಅಧಿಕಾರವನ್ನು ಪತಿ ಚಲಾಯಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಪಂಚಾಯತ ಅಧ್ಯಕ್ಷರ ಸಮ್ಮುಖದಲ್ಲೇ ನಡೆಯುತ್ತಿದ್ದರೂ ಕೂಡಾ ಸರಕಾರಿ ಸಭೆಯಲ್ಲಿ ಅಧ್ಯಕ್ಷರ ಆಸನದ ಪಕ್ಕ ಕುಳಿತು ಅಗೌರವ ತೋರಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಸರಕಾರಿ ಸಭೆಯಲ್ಲಿ ಭಾಗವಹಿಸಲು ಖಾಸಗಿ ಅದರಲ್ಲೂ ಮೇಲಾಗಿ ಯಾವುದೇ ಪಕ್ಷದ ರಾಜಕೀಯ ಮುಖಂಡರಿಗೆ ಕಾನೂನಿನಲ್ಲಿ ಅವಕಾಶವಿಲ್ಲ.
ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಐಹೊಳೆ ತಾಲೂಕಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ ಸೇರಿದಂತೆ ಹಿರಿಯ ಅಧಿಕಾರಿಗಳು ರಾಜಕೀಯ ಮುಖಂಡ ಶ್ರೀಶೈಲ್ ತುಗಶೆಟ್ಟಿ ಮತ್ತು ಶಿವಾನಂದ ಅವರ ವರ್ತನೆಯಿಂದ ಮುಜುಗರಕ್ಕೊಳಗಾಗಿ ಮೂಕವಿಸ್ಮಿತರಾದರು.
ಒಬ್ಬ ರಾಜಕೀಯ ಮುಖಂಡ ಜನಪ್ರತಿನಿಧಿ ಅಲ್ಲದವರು ಈ ರೀತಿಯ ವರ್ತನೆ ಆಡಳಿತದ ಮೇಲೆ ಪರಿಣಾಮ ಬೀಳುತ್ತದೆ ಹಾಗೂ ಸರ್ಕಾರಿ ಸಭೆಗಳು ಬೆಲೆಯಿಲ್ಲದಂತಾಗುತ್ತವೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ