ಹೈಪರ್ ಟ್ರಿಕೋಸಿಸ್; ಈ ಭಯಾನಕ ರೋಗದ ಬಗ್ಗೆ ಗೊತ್ತೆ ?

ಪ್ರಗತಿ ವಾಹಿನಿ  ವಿಶೇಷ:
ಮಧ್ಯಪ್ರದೇಶದ ನಾಂದ್ಲೇಟಾ ಗ್ರಾಮದ 17 ವರ್ಷದ ಯುವಕ ಲಲಿತ್ ಪಾಟಿದಾರನನ್ನು ನೋಡಲು ಅವರ ಕುಟುಂಬದವರೇ ಭಯಪಡುತ್ತಿದ್ದರು. ಯಾಕೆಂದರೆ ಲಲಿತ್‍ನ ಮುಖ ಮತ್ತು ದೇಹದ ಬಹುತೇಕ ಭಾಗಗಳಲ್ಲಿ ತೋಳಗಳಿಗೆ ಬೆಳೆದಂತೆ ಜೊಂಪೆ ಜೊಂಪೆಯಾಗಿ ಕೂದಲು ಬೆಳೆದಿದ್ದು, ಅತ್ಯಂತ ಭಯಾನಕವಾಗಿ ಕಾಣುತ್ತಾನೆ.

ಆ ಮೂಲಕ ಹೈಪರ್ಟ್ರಿಕೋಸಿಸ್ ಎಂಬ ಈ ರೋಗ ಈಗ ಭಾರತದಲ್ಲೂ ಚರ್ಚೆಯಲ್ಲಿದೆ. ಈ ರೋಗದ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೈಪರ್ ಟ್ರಿಕೋಸಿಸ್ ರೋಗವನ್ನು ತೋಳದ ಸಿಂಡ್ರೋಮ್ ಎಂದೂ ಕರೆಯುತ್ತಾರೆ, ಈ ವಿಚಿತ್ರ ರೋಗಕ್ಕೆ ತುತ್ತಾದ ವ್ಯಕ್ತಿಯ ದೇಹದಲ್ಲಿ ಅತಿಯಾದ ಕೂದಲು ಬೆಳೆಯುತ್ತದೆ.

ಇದು ಮಹಿಳೆಯರು ಮತ್ತು ಪುರುಷರು ಇಬ್ಬರಲ್ಲೂ ಕಂಡುಬರಬಹುದಾದ ರೋಗವಾಗಿದೆ. ಆದರೆ ಇದು ಅತ್ಯಂತ ಅಪರೂಪ. ಅಸಹಜ ಕೂದಲು ಬೆಳವಣಿಗೆ ಮುಖ ಮತ್ತು ದೇಹವನ್ನು ಆವರಿಸಬಹುದು ಅಥವಾ ಸಣ್ಣ ತೇಪೆಗಳಲ್ಲಿ ಸಂಭವಿಸಬಹುದು. ಹೈಪರ್ ಟ್ರಿಕೋಸಿಸ್ ಜನನದ ಸಮಯದಲ್ಲಿ ಕಾಣಿಸಿಕೊಳ್ಳಬಹುದು ಅಥವಾ ಕಾಲಾನಂತರದಲ್ಲಿ ಬೆಳೆಯಬಹುದು.

 

ಹೈಪರ್ ಟ್ರಿಕೋಸಿಸ್‍ನ ವಿಧಗಳು
ಜನ್ಮಜಾತ ಹೈಪರ್‍ಟ್ರಿಕೋಸಿಸ್ ಲನುಗಿನೋಸಾ: ಜನಿಸುವಾಗ ಮೈ ಮೇಲೆ ಮೃದುವಾದ ಕೂದಲಿದ್ದು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಆದರೆ ನಂತರದ ವಾರಗಳಲ್ಲಿ ಕಣ್ಮರೆಯಾಗುವ ಬದಲು ಮೃದುವಾದ ಸೂಕ್ಷ್ಮ ಕೂದಲು ಮಗುವಿನ ದೇಹದ ವಿವಿಧ ಸ್ಥಳಗಳಲ್ಲಿ ಬೆಳೆಯುತ್ತಲೇ ಇರುತ್ತದೆ.

ಜನ್ಮಜಾತ ಹೈಪರ್ ಟ್ರಿಕೋಸಿಸ್ ಟರ್ಮಿನಾಲಿಸ್: ಅಸಹಜ ಕೂದಲು ಬೆಳವಣಿಗೆಯು ಹುಟ್ಟಿನಿಂದಲೇ ಪ್ರಾರಂಭವಾಗುತ್ತದೆ ಮತ್ತು ವ್ಯಕ್ತಿಯ ಜೀವನದುದ್ದಕ್ಕೂ ಮುಂದುವರಿಯುತ್ತದೆ. ಕೂದಲು, ಸಾಮಾನ್ಯವಾಗಿ ಉದ್ದ ಮತ್ತು ದಪ್ಪವಾಗಿರುತ್ತದೆ, ವ್ಯಕ್ತಿಯ ಮುಖ ಮತ್ತು ದೇಹವನ್ನು ಆವರಿಸುತ್ತದೆ.

ನೆವಾಯ್ಡ್ ಹೈಪರ್ ಟ್ರಿಕೋಸಿಸ್: ಯಾವುದೇ ರೀತಿಯ ಅತಿಯಾದ ಕೂದಲು ಬೆಳವಣಿಗೆಯು ದೇಹದ ನಿರ್ಧಿಷ್ಟ ಭಾಗಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ, ಕೂದಲಿನ ಒಂದಕ್ಕಿಂತ ಹೆಚ್ಚು ಪ್ಯಾಚ್ ಇರುತ್ತದೆ.

ಹಿರ್ಸುಟಿಸಮ್ ಹೈಪರ್ ಟ್ರಿಕೋಸಿಸ್: ಇದು ಮಹಿಳೆಯರಿಗೆ ಸೀಮಿತವಾಗಿದೆ. ಮಹಿಳೆಯರು ಸಾಮಾನ್ಯವಾಗಿ ತಮ್ಮ ಮುಖ, ಎದೆ ಮತ್ತು ಬೆನ್ನಿನ ಭಾಗದಲ್ಲಿ ಕೂದಲು ಹೊಂದಿರುವುದಿಲ್ಲ. ಆದರೆ ಈ ರೋಗಕ್ಕೆ ತುತ್ತಾದ ಮಹಿಳೆಯರ ಮುಖ ಎದೆ ಮತ್ತು ಬೆನ್ನಿನ ಭಾಗದಲ್ಲಿ ಕಪ್ಪು, ದಪ್ಪ ಕೂದಲು ಬೆಳೆಯುತ್ತವೆ.

ಕಾರಣವೇನು ?

ಹೈಪರ್ ಟ್ರಿಕೋಸಿಸ್ ರೋಗಕ್ಕೆ ಬಹುತೇಕ ಸಂದರ್ಭಗಳಲ್ಲಿ ಆನುವಂಶೀಯತೆ ಕಾರಣ ಎನ್ನಲಾಗುತ್ತದೆ. ಆದರೆ ಕೆಲ ಪ್ರಕರಣಗಳಲ್ಲಿ ಕೆಲ ನಿರ್ಧಿಷ್ಟ ಔಷಧಗಳ ಅಡ್ಡ ಪರಿಣಾಮವೂ ಈ ರೋಗ ಉಲ್ಬಣಗೊಳ್ಳಲು ಕಾರಣ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.

ಇತಿಹಾಸ
1642ರಲ್ಲಿ ಕಂಡುಬಂದ ಕೆನರಿ ಐಲ್ಯಾಂಡ್‍ನ ಪೀಟರ್ ಗೋನ್ಸಾವೆಸ್ ಪ್ರಕರಣ ವಿಶ್ವದ ಮೊಟ್ಟ ಮೊದಲ, ದಾಖಲೆಗೆ ಲಭ್ಯವಿರುವ ತೋಳದ ಸಿಂಡ್ರೋಮ್ ರೋಗದ ಪ್ರಕರಣವಾಗಿದೆ.

ಆ ಬಳಿಕ ಕೆಲ ಯುರೋಪಿಯನ್ ಸರ್ಕಸ್‍ಗಳಲ್ಲಿ ಈ ರೋಗವಿರುವ ಮಹಿಳೆಯರನ್ನು ಪ್ರದರ್ಶಿಸುತ್ತಿದ್ದ ದಾಖಲೆಗಳಿವೆ. ಇನ್ನು 2019ರಲ್ಲಿ ಸ್ಪೇನ್‍ನಲ್ಲಿ ಗ್ಯಾಸ್ಟ್ರಿಕ್ ನಿಯಂತ್ರಣದ ಒಮೆಪ್ರಜೋಲ್ ಔಷಧದ ಚಿಕಿತ್ಸೆಯ ಬದಲು ಕೂದಲು ಉದುರುವುದನ್ನು ತಡೆಗಟ್ಟಲು ಬಳಸುವ ಮಿನೋಕ್ಸಿಡಿಲ್ ಔಷಧದ ಚಿಕಿತ್ಸೆ ನೀಡಿದ್ದರಿಂದ 17 ಮಕ್ಕಳು ಈ ರೋಗಕ್ಕೆ ತುತ್ತಾಗಿದ್ದಾರೆ. ಈ ಪ್ರಕರಣ ಹೊರತುಪಡಿಸಿದರೆ 1642ರಿಂದ ಈವರೆಗೆ ಕಳೆದ ಸುಮಾರು 300 ವರ್ಷಗಳಲ್ಲಿ 50-60 ಕೇಸ್‍ಗಳು ಮಾತ್ರ ಕಂಡು ಬಂದಿವೆ.

 

ಚಿಕಿತ್ಸೆ
ಹೈಪರ್ ಟ್ರಿಕೋಸಿಸ್ ಅಥವಾ ತೋಳದ ಸಿಂಡ್ರೋಮ್ ರೋಗವನ್ನು ಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆಗಳು ಲಭ್ಯವಿಲ್ಲ. ದೀರ್ಘಾವಧಿಯ ಚಿಕಿತ್ಸೆಗಳಲ್ಲಿ ಎಲೆಕ್ಟ್ರೋಲೈಸಿಸ್ ಮತ್ತು ಲೇಸರ್ ಶಸ್ತ್ರಚಿಕಿತ್ಸೆಗಳು ಕೆಲ ಮಟ್ಟಿಗೆ ಪರಿಣಾಮಕಾರಿಯಾಗುತ್ತದೆ.
ಈ ಚಿಕಿತ್ಸೆಗಳೊಂದಿಗೆ ಕೂದಲು ಬೆಳೆಯುವುದು ಶಾಶ್ವತವಾಗಿ ನಿಲ್ಲಬಹುದು. ಆದರೆ ಈ ಚಿಕಿತ್ಸೆ ಸಂಪೂರ್ಣಗೊಳ್ಳಲು ಸುಧೀರ್ಘ ಅವಧಿ ತೆಗೆದುಕೊಳ್ಳುತ್ತದೆ.

 

ವನ್ಯಜೀವಿಗಳ ಮೇಲಿನ ದಬ್ಬಾಳಿಕೆಗೆ ಭೂ ಮಾಫಿಯಾ ಕಾರಣ

https://pragati.taskdun.com/land-mafia-is-responsible-for-oppression-of-wildlife-a-special-article/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button