ಹೈಕಮಾಂಡ್ ಆಶಿರ್ವಾದ ಇದ್ದಿದ್ರಿಂದ ಬದುಕಿದ್ದೇನೆ, ಇಲ್ಲದಿದ್ರೆ ನನ್ನನ್ನು ಇಷ್ಟೊತ್ತಿಗೆ ಮುಗಿಸ್ತಿದ್ರು – ರಮೇಶ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಹೈಕಮಾಂಡ್ ಆಶಿರ್ವಾದ ಇರೋದ್ರಿಂದಲೇ ನಾನು ಬದುಕಿದ್ದೇನೆ. ಇಲ್ಲದಿದ್ದರೆ ಇಷ್ಟೊತ್ತಿಗೆ ಷಢ್ಯಂತ್ರ ಮಾಡಿ ನನ್ನನ್ನು ಮುಗಿಸುತ್ತಿದ್ದರು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಹೈಕಮಾಂಡ್ ಭೇಟಿಗೆಂದು ನವದೆಹಲಿಗೆ ತೆರಳಿದ್ದ ಅವರು ಬುಧವಾರ ಬೆಳಗ್ಗೆ ಬೆಳಗಾವಿಗೆ ವಾಪಸ್ಸಾದರು. ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಸಹೋದರ, ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ 2ನೇ ಪ್ರಾಶಸ್ತ್ಯದ ಮತ ಹಾಕುವಂತೆ ಪ್ರಚಾರ ಮಾಡಲು ಹೈಕಮಾಂಡ್ ಒಪ್ಪಿಗೆ ಪಡೆಯುವುದಕ್ಕಾಗಿ ಅವರು ದೆಹಲಿಗೆ ತೆರಳಿದ್ದರು.
ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಗುರಿ ಬಿಜೆಪಿ ಅಭ್ಯರ್ಥಿ ಮಹಂತೇಶ ಕವಟಗಿಮಠ ಅವರನ್ನು ಗೆಲ್ಲಿಸುವುದಾಗಿದೆ ಮತ್ತು ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದಾಗಿದೆ ಎಂದರು.
2ನೇ ಪ್ರಾಶಸ್ತ್ಯದ ಮತದ ಕುರಿತು ಹೈಕಮಾಂಡ್ ಪ್ರತಿಕ್ರಿಯೆ ಏನಿತ್ತು ಎನ್ನುವ ಕುರಿತು ಮತ್ತೆ ಪ್ರಶ್ನಿಸಿದಾಗ, ಹೈಕಮಾಂಡ್ ಆಶಿರ್ವಾದ ಇದ್ದಿದ್ದರಿಂದಲೇ ನಾನು ಇಲ್ಲಿಯವರೆಗೂ ಬದುಕಿದ್ದೇನೆ. ಇಲ್ಲವಾದಲ್ಲಿ ಇಷ್ಟೊತ್ತಿಗೆ ಷಢ್ಯಂತ್ರದಿಂದ ನನ್ನನ್ನು ಮುಗಿಸುತ್ತಿದ್ದರು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಹೇಳಿಕೆಗಳ ಕುರಿತು ಪ್ರಶ್ನಿಸಿದಾಗ, ಅದಕ್ಕೆಲ್ಲ ಚುನಾವಣೆ ಫಲಿಂತಾಶ ಪ್ರಕಟವಾದ ದಿನ ಉತ್ತರಿಸುತ್ತೇನೆ. 14ನೇ ತಾರೀಖು ಒಂದು ಗಂಟೆ ಪತ್ರಿಕಾಗೋಷ್ಠಿ ನಡೆಸಿ ಎಲ್ಲದಕ್ಕೂ ಉತ್ರಿಸುತ್ತೇನೆ. ಈಗ ಏನನ್ನೂ ಹೇಳುವುದಿಲ್ಲ ಎಂದರು.
ರಮೇಶ ಜಾರಕಿಹೊಳಿ ಬಿಜೆಪಿಗೆ ಬ್ಲ್ಯಾಕ್ ಮೇಲೆ ಮಾಡುತ್ತಿದ್ದಾರೆ. ನಾನಾಗಿದ್ದರೆ ಅಂತವರನ್ನು ಒಂದು ಗಂಟೆ ಕೂಡ ಪಕ್ಷದಲ್ಲಿ ಉಳಿಸಿಕೊಳ್ಳುತ್ತಿರಲಿಲ್ಲ ಎಂದಿದ್ದರು. ಸಾಹುಕಾರ್ ಸಾಹುಕಾರ್ ಎನ್ನುತ್ತೀರಿ, ಅವರೆಂತಹ ದೊಡ್ಡ ಸಾಹುಕರ್ ಎಂದೂ ಪ್ರಶ್ನಿಸಿದ್ದರು. ಈ ಯಾವ ಹೇಳಿಕೆಗಳಿಗೂ ನಾನು ಇಂದು ಉತ್ತರಿಸುವುದಿಲ್ಲ. ಸದ್ಯ ನಮ್ಮ ಗಮನ ಏನಿದ್ದರೂ ಚುನಾವಣೆ. ಅದನ್ನು ಮುಗಿಸಿಕೊಂಡು ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಧಾರವಾಡದಲ್ಲಿ ಸೀಲ್ ಡೌನ್; ಸ್ಪಷ್ಟೀಕರಣ ನೀಡಿದ ಡಿಸಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ