ನಾನೂ ಪತ್ರಕರ್ತನಾಗಿ ಕೆಲಸ ಮಾಡಿದ್ದೆ ; ಮಾಧ್ಯಮ ಕಾರ್ಯಾಗಾರದಲ್ಲಿ ಬಹಿರಂಗಪಡಿಸಿದ ಹುಕ್ಕೇರಿ ಸ್ವಾಮೀಜಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುದ್ದಿ ಎಂದರೆ ಸಮಾಜವನ್ನು ಶುದ್ಧೀಕರಿಸುವುದು ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜೀರಗೆ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಆಶೀರ್ವಚನ ನೀಡಿದ ಅವರು, ಶ್ರೀಗಳಾಗಿ ಆಶೀರ್ವಚನ ನೀಡಲು ಕಾರ್ಯಕ್ರಮಕ್ಕೆ ಆಗಮಿಸಿದ್ದು ಒಂದೆಡೆಯಾದರೆ ಸ್ವತಃ ನಾನೂ ಸಹ ಮೈಸೂರಿನಲ್ಲಿ ಓದುವಾಗ ಪತ್ರಿಕೆಯೊಂದರ ಉಪ ಸಂಪಾದಕನಾಗಿ, ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಹಾಗಾಗಿ ಮಾಧ್ಯಮದೊಂದಿಗೆ ಅವಿನಾಭಾವ ಸಂಬಂಧವಿದೆ ಎಂದರು.
ಸಮಾಜವನ್ನು ಶುದ್ಧೀಕರಿಸುವುದೇ ಸುದ್ದಿ, ವಾಸ್ತವವನ್ನು ಬರೆಯಲು ಪತ್ರಕರ್ತರು ಹೆದರಬೇಕಿಲ್ಲ. ಇಲ್ಲದ್ದನ್ನು ಹೇಳಿದರೆ ಮಾತ್ರ ಶಿಕ್ಷೆಯಾಗುತ್ತದೆ. ವಸ್ತುನಿಷ್ಠ ಪತ್ರಿಕೋದ್ಯಮ ಸಮಾಜದ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಇಂದಿನ ದಿನಮಾನದಲ್ಲಿ ಪತ್ರಿಕೋದ್ಯಮದ ಆದ್ಯತೆ ಬದಲಾಗುತ್ತಿದ್ದು ದೇಶಪ್ರೇಮದ ಭಾವನೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಹಾತ್ಮಾ ಗಾಂಧೀಜಿ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದವರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿಯವರು ಪತ್ರಿಕೋದ್ಯಮವನ್ನು ಅಸ್ತ್ರವಾಗಿ ಬಳಸಿಕೊಂಡರು. ಸಾಮಾಜಿಕ ಸಮಾನತೆಯನ್ನು ಪತ್ರಿಕೋದ್ಯಮದ ಮೂಲಕವೇ ತಂದರು ಎಂದು ಕಾರಜೋಳ ಹೇಳಿದರು.
ಕಾಂಗ್ರೆಸ್ ರಾಜಕೀಯ ಪಕ್ಷವಲ್ಲ; ದೇಶದ ಸ್ವಾತಂತ್ರ್ಯಕ್ಕಾಗಿ ಆರಂಭಿಸಲಾಗಿದ್ದ ಕಾಂಗ್ರೆಸ್ ಅನ್ನು ಸ್ವಾತಂತ್ರ್ಯದ ಬಳಿಕ ವಿಸರ್ಜಿಸಬೇಕು ಎಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಅದನ್ನು ತಮ್ಮ ಹರಿಜನ ಪತ್ರಿಕೆಯಲ್ಲಿ ಬರೆದ ಕೊನೆಯ ಸಂಪಾದಕೀಯ ಬರಹದಲ್ಲೂ ವ್ಯಕ್ತಪಡಿಸಿದ್ದರು ಎಂದು ಗೋವಿಂದ ಕಾರಜೋಳ ನೆನಪಿಸಿದರು.
ವಸ್ತುನಿಷ್ಠ ವರದಿಗಾರಿಕೆಯೇ ನಿಜವಾದ ಪತ್ರಿಕಾಧರ್ಮವಾಗಿದೆ. ಪೀತ ಪತ್ರಿಕೋದ್ಯಮ ಈಗ ಇಲ್ಲವಾಗಿದೆ. ಪ್ರಸಕ್ತ ಪತ್ರಿಕೋದ್ಯಮದ ಅನೇಕ ಆಧುನಿಕ ತಂತ್ರಜ್ಞಾನದ ಅನುಕೂಲತೆ ಲಭ್ಯವಿದೆ. ಪತ್ರಿಕಾಧರ್ಮ ಉಳಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು.
ಪತ್ರಕರ್ತರ ಯಾಂತ್ರೀಕೃತ ಜೀವನಶೈಲಿ ಹಾಗೂ ಆಹಾರ ಪದ್ಧತಿಯಿಂದ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತಿವೆ. ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಸಚಿವ ಕಾರಜೋಳ ಕಿವಿಮಾತು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂರು ವರ್ಷಗಳ ಮುನ್ನೋಟ ಕುರಿತ ಕಿರುಪುಸ್ತಿಕೆ ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರು, ಮಹಾತ್ಮಾ ಗಾಂಧೀಜಿಯ ಸತ್ಯಾನ್ವೇಷಣೆಯ ಮಾರ್ಗ ಪತ್ರಿಕೋದ್ಯಮವಾಗಿತ್ತು. ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಬೇಕು ಎಂಬುದು ಸಂಘದ ಕನಸಾಗಿತ್ತು. ಇದಕ್ಕೆ ಬಾಗಲಕೋಟೆಯ ಸುಭಾಷ್ ಹೊದ್ಲೂರ ಅವರ ಎರಡೂವರೆ ಲಕ್ಷ ನೀಡುವ ಮೂಲಕ ಅಭಿಮಾನವನ್ನು ವ್ಯಕ್ತಪಡಿಸಿದರು. ಅದೇ ರೀತಿ ಮಹಾತ್ಮಾ ಗಾಂಧೀಜಿಯವರ ಹೆಸರಿನಲ್ಲಿ ಪ್ರಶಸ್ತಿ ಆರಂಭಿಸಲು ಸಚಿವ ಗೋವಿಂದ ಕಾರಜೋಳ ಅವರು ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣ ಸಕ್ರಿಯವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಸುಳ್ಳು ಸುದ್ದಿ ಭರಾಟೆ ಹೆಚ್ಚಿದೆ. ಹಾಗಾಗಿ ಸತ್ಯ ಶೋಧಿಸಿ ಬರೆಯುವ ಪತ್ರಕರ್ತರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ವೃತ್ತಿ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಮುನ್ನೋಟವನ್ನು ರೂಪಿಸಲಾಗಿದೆ. ಎಂದು ಹೇಳಿದರು.
ಈ ಬಾರಿಯ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ವಿಜಯಪುರ ಜಿಲ್ಲೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶಿವಾನಂದ ತಗಡೂರ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಲೇಖಕಿ ಉಮಾ ಮಹೇಶ ವೈದ್ಯ ಅವರು ರಚಿಸಿದ ಮಾಧ್ಯಮದವರೇ ಈ ಕಾನೂನು ಅರಿಯಿರಿ ಪುಸ್ತಕವನ್ನು ಶಾಸಕ ಅಭಯ ಪಾಟೀಲ ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಒಂದು ವರ್ಷದೊಳಗೆ ಪತ್ರಿಕಾಭವನ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಅನಿಲ ಬೆನಕೆ ಮಾತನಾಡಿ, ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಕೊರೋನಾದಂತಹ ಸಂದರ್ಭದಲ್ಲೂ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದನ್ನು ಗಮನಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳು, ರಾಜ್ಯ ಘಟಕದ ಪದಾಧಿಕಾರಿಗಳು ಹಾಗೂ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಬದಲಾಗುತ್ತಿರುವ ಕಾನೂನು ಮತ್ತು ಮಾಧ್ಯಮ ಕುರಿತು ಕಾನೂನು ಸಲಹೆಗಾರ ಮಹೇಶ ವೈದ್ಯ ಉಪನ್ಯಾಸ ನೀಡಿದರು. ಮುಂಬೈನ ಸಂತೋಷ ಬೋರಾಡೆ ಅವರಿಂದ ಆರೋಗ್ಯಕ್ಕಾಗಿ ಸಂಗೀತ ಕಾರ್ಯಕ್ರಮ ನಡೆಯಿತು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಆಶಯ ಭಾಷಣ ಮಾಡಿದರು. ನವೀತಾ ಜೈನ್ ನಿರೂಪಿಸಿದರು. ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ ವಂದಿಸಿದರು. ಎಚ್. ಬಿ. ಮದನಗೌಡರ್, ಹಾಗೂ ಸಂಘದ ರಾಜ್ಯಮಟ್ಟದ ಪದಾಧಿಕಾರಿಗಳು ಮತ್ತು ಬೆಳಗಾವಿ ಜಿಲ್ಲಾ ಪದಾಧಿಕಾರಿಗಳು ಮತ್ತು ನೂರಾರು ಜನ ಪತ್ರಕರ್ತರು ಭಾಗವಹಿಸಿದ್ದರು.
ಈ ಸುದ್ದಿಯನ್ನೂ ಓದಿ –
ಪೀತ ಪತ್ರಿಕೋದ್ಯಮ ಇಂದಿಲ್ಲ – ಗೋವಿಂದ ಕಾರಜೋಳ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ