Kannada NewsLatest

ಜನರಿಗಾಗಿ ಎಲ್ಲ ಸಂಕಷ್ಟ, ಸಂಘರ್ಷಗಳನ್ನು ಸಹಿಸಿಕೊಳ್ಳಲು ಸಿದ್ಧ – ಲಕ್ಷ್ಮಿ ಹೆಬ್ಬಾಳಕರ್

ನಾನು ಶಾಸಕನಾದ ನಂತರವೂ ನನಗೆ ಇಷ್ಟೊಂದು ಸಂಕಷ್ಟ ಎದುರಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನಿರಾತಂಕವಾಗಿ ಜನರ ಕೆಲಸವನ್ನು ಮಾಡಿಕೊಂಡು ಹೋಗಬಹುದು ಎಂದುಕೊಂಡಿದ್ದೆ. ಆದರೆ ಜನರಿಗಾಗಿ ಕೆಲಸ ಮಾಡುವುದನ್ನೂ ಸಹಿಸಿಕೊಳ್ಳದಿದ್ದರೆ ನಾನೇನು ಮಾಡಲು ಸಾಧ್ಯ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಒಳ್ಳೆಯ ಕೆಲಸ ಮಾಡುವವರಿಗೆ ನೂರೆಂಟು ವಿಘ್ನಗಳು ಬರುವುದು ಸಹಜ. ಹಾಗೆಯೇ ಕ್ಷೇತ್ರದ ಜನರಿಗಾಗಿ ನಾನು ಪ್ರತಿ ನಿತ್ಯ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಕೆಲಸಗಳನ್ನು ಮಾಡುತ್ತಿದ್ದೇನೆ. ಹಾಗಾಗಿ ಇದನ್ನು ಸಹಿಸದವರಿಂದ ನಿತ್ಯ ಸಂಕಷ್ಟ, ಸಂಘರ್ಷ ಎದುರಾಗುತ್ತಿದೆ. ಆದರೆ ನನ್ನ ಕ್ಷೇತ್ರದ ಜನರಿಗಾಗಿ ನಾನು ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದೇನೆ, ಮುಂದೆಯೂ ಎಷ್ಟೇ ಕಷ್ಟ ಎದುರಾದರೂ ನಿಮಗಾಗಿ ನಾನು ಎದುರಿಸಲು ಸಿದ್ಧ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಕ್ಷೇತ್ರದ ಸುಳೇಭಾವಿ ಗ್ರಾಮದ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಿಯ ಸನ್ನಿಧಿಗೆ ತೆರಳಿ ಕೃಪಾಶಿರ್ವಾದವನ್ನು ಪಡೆದು, ಗ್ರಾಮದ ಸರ್ಕಾರಿ ಪ್ರೌಶಾಲೆಗೆ ಹೆಚ್ಚುವರಿಯಾಗಿ ಸುಮಾರು ಐವತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ನಾಲ್ಕು ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಚಾಲನೆಯನ್ನು‌ ನೀಡಿ ಅವರು ಮಾತನಾಡುತ್ತಿದ್ದರು.
 
ನಾನು ಶಾಸಕನಾದ ನಂತರವೂ ನನಗೆ ಇಷ್ಟೊಂದು ಸಂಕಷ್ಟ ಎದುರಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನಿರಾತಂಕವಾಗಿ ಜನರ ಕೆಲಸವನ್ನು ಮಾಡಿಕೊಂಡು ಹೋಗಬಹುದು ಎಂದುಕೊಂಡಿದ್ದೆ. ಆದರೆ ಜನರಿಗಾಗಿ ಕೆಲಸ ಮಾಡುವುದನ್ನೂ ಸಹಿಸಿಕೊಳ್ಳದಿದ್ದರೆ ನಾನೇನು ಮಾಡಲು ಸಾಧ್ಯ? ಒಳ್ಳೆಯ ಕೆಲಸ ಮಾಡುವುದನ್ನು ಸಹಿಸಿಕೊಳ್ಳದವರನ್ನು ಏನನ್ನಬೇಕು? ಎಲ್ಲ ಸಂಕಷ್ಟಗಳ ಮಧ್ಯೆಯೂ ನಾನು ಜಗ್ಗದೆ, ಕುಗ್ಗದೆ ಕೆೆಲಸ ಮಾಡುತ್ತಿದ್ದೇನೆ. ಇದನ್ನು ಯಾವುದೇ ಕಾರಣದಿಂದ ನಿಲ್ಲಿಸುವುದಿಲ್ಲ. ಕ್ಷೇತ್ರದ ಜನರ ದೊಡ್ಡ ಶಕ್ತಿ ನನ್ನ ಜೊತೆಗಿರುವಾಗ ನಾನೇಕೆ ಅಳುಕಬೇಕು ಎಂದು ಅವರು ಪ್ರಶ್ನಿಸಿದರು. 
ರಾಜಕೀಯ ಚುನಾವಣೆಯ ಸಂದರ್ಭದಲ್ಲಿರಬೇಕು ಎಂದು ಬಯಸುವವನು ನಾನು. ಚುನಾವಣೆಯ ನಂತರ ಅಭಿವೃದ್ಧಿಯಲ್ಲಿ ಪೈಪೋಟಿ ಮಾಡೋಣ. ಒಬ್ಬರಿಗಿಂತ ಒಬ್ಬರು ಹೆಚ್ಚು ಕೆಲಸಗಳನ್ನು ತರುವುದಕ್ಕೆ ಪ್ರಯತ್ನಿಸೋಣ. ಆದರೆ ಇದರಲ್ಲೂ ರಾಜಕೀಯ ನೋಡಿ ಬೇಜಾರಾಗುತ್ತಿದೆ. ಅಂತವರನ್ನು ಜನರು ಮತ್ತು ದೇವರೇ ನೋಡಿಕೊಳ್ಳುತ್ತಾನೆ. ನಾನು ಹೆಚ್ಚು ತಲೆಕೆಡಿಸಿಕೊಳ್ಳದೆ ಕೆಲಸವನ್ನು ಮುಂದುವರಿಸುತ್ತೇನೆ ಎಂದೂ ಹೆಬ್ಬಾಳಕರ್ ತಿಳಿಸಿದರು. 
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಶಾಲಾ ಸಿಬ್ಬಂದಿ ವರ್ಗದವರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
 
ಹೊನ್ನಿಹಾಳ ರಸ್ತೆಗೆ ಪೂಜೆ
ಇದಾದ ನಂತರ ಕ್ಷೇತ್ರದ ಹೊನ್ನಿಹಾಳ ಗ್ರಾಮದ ಒಳಾಂಗಣ ಕಾಂಕ್ರೀಟ್ ರಸ್ತೆಯ‌ ಕಾಮಗಾರಿಗಳಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಧಿಕೃತವಾಗಿ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಪಕ್ಷದ ಮುಖಂಡರು, ಗುತ್ತಿಗೆದಾರರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button