ನಾನು ಹೆಣ್ಣುಮಗಳಾಗಿ ಅನುದಾನ ತಂದಿದ್ದೇನೆ, ಇವರಿಗೆ ನಾಚಿಕೆ ಆಗಲ್ವಾ? -ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಅಥಣಿ -ಕಾಂಗ್ರೆಸ್ ಪ್ರಭಾವಿ ನಾಯಕಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಮೊದಲು ಗೋಕಾಕ ಕ್ಷೇತ್ರಕ್ಕೆ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ನೇಮಿಸಿದ್ದ ಕಾಂಗ್ರೆಸ್ ನಂತರ ಬದಲಾವಣೆ ಮಾಡಿ ಅಥಣಿ ಕ್ಷೇತ್ರಕ್ಕೆ ನೇಮಿಸಿತು.
ಈ ಹಿಂದೆ ಅನೇಕ ಉಪಚುನಾವಣೆಗಳಲ್ಲಿ ಪ್ರಚಾರ ಮಾಡಿ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿರುವ ಹೆಬ್ಬಾಳಕರ್, ಅಥಣಿಗೆ ನನ್ನ ಅವಶ್ಯಕತೆ ಹೆಚ್ಚಿರಬಹುದು. ಹಾಗಾಗಿ ಇಲ್ಲಿಯ ಉಸ್ತುವಾರಿ ನೋಡಿಕೊಳ್ಳಲು ನನಗೆ ಹೇಳಿದ್ದಾರೆ. ಪಕ್ಷ ಹೇಳಿದ ಕೆಲಸವನ್ನು ನಾನು ನಿಷ್ಠೆಯಿಂದ ಮಾಡುತ್ತೇನೆ ಎಂದಿದ್ದಾರೆ.
ಕುಮಟಳ್ಳಿ ವಿರುದ್ಧ ಗುಡುಗು
ಅಥಣಿ ತಾಲೂಕಿನ ಕಕಮರಿಯಲ್ಲಿ ಪ್ರಚಾರ ಭಾಷಣ ಮಾಡಿದ ಹೆಬ್ಬಾಳಕರ್, ಅನರ್ಹ ಶಾಸಕ ಮಹೇಶ ಕುಮಟಳ್ಳಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ, ಇನ್ನೇನೂ ಅಲ್ಲ. ಅನುದಾನ ಕೊಟ್ಟಿಲ್ಲ ಎಂದು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾಗಿ ಹೇಳಿದ್ದಾರಲ್ಲ, ಇವರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ.
ನಾನು ಹಣ್ಣುಮಗಳಾಗಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದೇನೆ. ಅವರಿಗೆ ಗಂಡಸರಾಗಿ ತರೋಕಾಗಲ್ವ ಎಂದು ಹೆಬ್ಬಾಳಕರ್ ಪ್ರಶ್ನಿಸಿದ್ದಾರೆ. ಎಲ್ಲಿ ಕಾಲು ಹಿಡಿಯಬೇಕೋ ಅಲ್ಲಿ ಕಾಲು ಹಿಡಿಯಬೇಕು. ಎಲ್ಲಿ ಕಾಲು ಎಲೆಯಬೇಕೋ ಅಲ್ಲಿ ಎಲೆಯಬೇಕು. ಕ್ಷೇತ್ರಕ್ಕಾಗಿ, ಜನರಿಗಾಗಿ ಯಾವೆಲ್ಲ ತಂತ್ರ ಮಾಡಬೇಕೋ ಮಾಡಬೇಕು. ಕೇವಲ ಆರೋಪ ಮಾಡುತ್ತ ಕೂತರೆ, ಅಳುತ್ತ ಕೂತರೆ ಅನುದಾನ ಬಂದು ಬೀಳುವುದಿಲ್ಲ ಎಂದು ಅವರು ಹೇಳಿದರು.
ಅತಿ ವಿನಯಂ ಚೋರ ಲಕ್ಷಣಂ
ಅವರು ಊಟ ಮಾಡುತ್ತಿದ್ದಾರೆ ಎಂದು ನಾವು ಉಪವಾಸವಿರುವುದಲ್ಲ, ನಾವೂ ಅವರಂತೆ ದುಡಿದು ತಿನ್ನಬೇಕು. ಅದು ಸ್ವಾಭಿಮಾನ. ಅತಿ ವಿನಯಂ ಚೋರ ಲಕ್ಷಣಂ ಎನ್ನುವಂತೆ ಬರೇ ವಿನಯರಂತೆ ಇರುವುದು ಜನಪ್ರತಿನಿಧಿ ಲಕ್ಷಣವಲ್ಲ. ಕೊಟ್ಟ ಕುದುರೆ ಏರಲಾಗದವರು ಇವರೆಲ್ಲ ಎಂದು ಜರಿದಿದ್ದಾರೆ.
ಮಹೇಶ ಕುಮಟಳ್ಳಿ ಒಳ್ಳೆಯ ಸುಸಂಸ್ಕೃತರು ಎಂದು ತಿಳಿದು ನಾನೂ ಟಿಕೆಟ್ ಕೊಡಿಸಲು ಸಹಾಯ ಮಾಡಿದ್ದೆ. ಆದರೆ ಈಗ ಪಲಾಯನ ಮಾಡಿದ್ದಾರೆ. ದ್ರೋಹ ಮಾಡಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಇಂತವರಿಗೆ ತಕ್ಕ ಪಾಠ ಕಲಿಸಬೇಕು.
ಯಡಿಯೂರಪ್ಪ ಬೆಳಗಾವಿ ಜಿಲ್ಲೆಯಲ್ಲಿ ಐವರನ್ನು ಮಂತ್ರಿ ಮಾಡುವುದಾಗಿ ಹೇಳಿದ್ದಾರೆ. 18 ಜನರನ್ನು ಬೇಕಾದರೂ ಮಾಡಿಕೊಳ್ಳಲಿ. ಆದರೆ ಮಳ್ಳನಂತೆ ಆಕ್ಟಿಂಗ್ ಮಾಡಿದ ಕುಮಟಳ್ಳಿಯಂತವರಿಗೆ ಮಾತ್ರ ಜನ ಪಾಠ ಕಲಿಸಲೇಬೇಕು ಎಂದು ಹೆಬ್ಬಾಳಕರ್ ಕರೆ ನೀಡಿದರು.
ರಾಜಕಾರಣ ಬದಲಾಗಬೇಕು
ನಾನು ಸುಮ್ಮನೇ ಹೇಳಿ ಹೋಗುವವಳಲ್ಲ. ಮಾಡಿ ತೋರಿಸುವವಳು. ಬೆಳಗಾವಿ ಜಿಲ್ಲೆಯ ರಾಜಕಾರಣ ಬದಲಾವಣೆ ಮಾಡಿ ತೋರಿಸುತ್ತೇನೆ. ಅಭಿವೃದ್ಧಿಯಾಗಬೇಕು. ಜಿಲ್ಲೆಗೆ ಇಂಡಸ್ಟ್ರಿಗಳು ಬರಬೇಕು. ಯುವಕರಿಗೆ ನೌಕರಿ ಸಿಗಬೇಕು. ಯಾರೂ ವಿಚಾರ ಮಾಡುತ್ತಿಲ್ಲ. ತಮ್ಮದಷ್ಟನ್ನೇ ನೋಡಿಕೊಳ್ಳುತ್ತಿದ್ದಾರೆ.
ನಾನು ಜಮಖಂಡಿಗೆ ಹೋಗಿ ಆನಂದನನ್ನು ಗೆಲ್ಲಿಸಲು ಸಹಾಯ ಮಾಡಿದ್ದೇನೆ. ಗುಂಡ್ಲು ಪೇಠೆಗೆ ಹೋಗಿ ಗೀತಾ ಮಹಾದೇವ ಪ್ರಸಾದ ಗೆಲ್ಲಲು ಸಹಾಯ ಮಾಡಿದ್ದೇನೆ. ಕುಂದಗೋಳಕ್ಕೆ ಹೋಗಿ ಕುಸುಮಾ ಶಿವಳ್ಳಿ ಗೆಲ್ಲಿಸಿದ್ದೇನೆ. ಈಗ ನಾಲ್ಕನೆಯದಾಗಿ ಇಲ್ಲಿಗೆ ಬಂದಿದ್ದೇನೆ. ಗಜಾನನ ಮಂಗಸೂಳಿ ಅವರನ್ನು ಗೆಲ್ಲಿಸಬೇಕು ಎಂದು ಹೆಬ್ಬಾಳಕರ್ ಹೇಳಿದರು.
ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಊರಿನ ಮಾರ್ಗವಾಗಿ ಹೋಗುತ್ತಿದ್ದಾರೆ ಎಂದು ತಿಳಿದ ಜನ ಇವರ ಕಾರನ್ನು ನಿಲ್ಲಿಸಿ, ಭಾಷಣ ಮಾಡಿಹೋಗುವಂತೆ ವಿನಂತಿಸಿದರು. ಹಾಗಾಗಿ ಜನರ ಒತ್ತಾಯದ ಮೇರೆಗೆ ಕಾರಿನಿಂದ ಇಳಿದು ಮಾತನಾಡಿದರು.
ಲಕ್ಷ್ಮಿ ಹೆಬ್ಬಾಳಕರ್ ಅವರ ಈ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಯಾವೊಬ್ಬ ಸಂತ್ರಸ್ತರೂ ವಂಚಿತರಾಗಲು ಅವಕಾಶ ಕೊಡಲ್ಲ – ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ