*ಗ್ಯಾರಂಟಿ ರದ್ಧು ಮಾಡಲು ಹೇಳಿಲ್ಲ, ಪರಿಷ್ಕರಿಸಲು ಹೇಳಿದ್ದೇನೆ: ಸತೀಶ್ ಜಾರಕಿಹೊಳಿ* *ಪರಿಷ್ಕರಣೆ ಪ್ರಸ್ತಾಪವಿಲ್ಲ ಎಂದ ನಾಲ್ವರು ಸಚಿವರು*
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುವಂತೆ ಹೈಕಮಾಂಡ್ ನಾಯಕರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ನಿನ್ನೆ ವರಿಷ್ಠರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ, ಜನರ ಅಭಿಪ್ರಾಯ ಪಡೆದು ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡಬೇಕಾದ ಅಗತ್ಯವಿದೆ ಎಂದಿದ್ದಾರೆ.
ಗ್ಯಾರಂಟಿ ರದ್ದು ಮಾಡಿ ಎಂದು ನಾನು ಹೇಳಿಲ್ಲ, ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ವರಿಷ್ಠರು ಕೇಳಿದಾಗ, ಗ್ಯಾರಂಟಿ ಯೋಜನೆಗಳ ಬಗ್ಗೆ ಜನರ ಅಭಿಪ್ರಾಯ ಹೇಳಿದ್ದೇನೆ. ಶ್ರೀಮಂತರು ಪಡೆಯುತ್ತಿರುವ ಲಾಭ ತಪ್ಪಿಸಿ, ಬಡವರಿಗೆ ಕೊಡಿ ಎಂದು ಹೇಳಿದ್ದೇನೆ. ಪರಿಷ್ಕರಣೆ ಎನ್ನುವುದು ಸಾಮಾನ್ಯ ನಿಯಮ. ಯಾವುದೇ ಸರಕಾರವಿದ್ದರೂ ಯೋಜನೆಗಳನ್ನು ಪರಿಷ್ಕರಿಸುವುದು ವಾಡಿಕೆ. ಹಾಗೆಯೇ ಪರಿಷ್ಕರಣೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಗೃಹಲಕ್ಷ್ಮೀ, ಉಚಿತ ಬಸ್, ಉಚಿತ ವಿದ್ಯುತ್ ಯೋಜನೆಗಳ ಲಾಭವನ್ನು ಶ್ರೀಮಂತರೂ ಪಡೆಯುತ್ತಿದ್ದಾರೆ. ಹಾಗಾಗಿ ಅದನ್ನು ಪರಿಷ್ಕರಿಸಿ ಇನ್ನಷ್ಟು ಬಡವರಿಗೆ ಯೋಜನೆ ವಿಸ್ತರಿಸಬಹುದು ಎನ್ನುವುದು ನನ್ನ ಅಭಿಪ್ರಾಯ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆಗೆ ನಾಲ್ವರು ಸಚಿವರು ಪ್ರತಿಕ್ರಿಯಿಸಿದ್ದು, ಗ್ಯಾರಂಟಿ ಯೋಜನೆಯಲ್ಲಿ ಬದಲಾವಣೆ ಇಲ್ಲ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಗ್ಯಾರಂಟಿ ಯೋಜನೆ ಪರಿಷ್ಕರಣೆ ಅಥವಾ ಬದಲಾವಣೆ ಇಲ್ಲ. ಈಗ ಇರುವಂತೆ ಮುಂದುವರಿಯಲಿದೆ. ಮುಖ್ಯಮಂತ್ರಿಗಳೂ ಇದನ್ನು ಸ್ಪಷ್ಟಪಡಿಸಿದ್ದಾರೆ. ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಕೂಡ ಪ್ರತಿಕ್ರಿಯಿಸಿದ್ದು, ಸಚಿವ ಸತೀಶ್ ಜಾರಕಿಹೊಳಿ ಏನು ಮಾತನಾಡಿದ್ದಾರೆ ಗೊತ್ತಿಲ್ಲ. ಪಂಚ ಗ್ಯಾರಂಟಿ ಯೋಜನೆಗಳು ಈಗಿನಂತೆಯೇ ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ. ಚುನಾವಣೆ ಪೂರ್ವ ಘೋಷಿಸಿದ ಈ ಯೋಜನೆಗಳಲ್ಲಿ ಬದಲಾವಣೆ ಇಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ ಹೇಳಿಕೆ ವಯಕ್ತಿಕ. ಗ್ಯಾರಂಟಿ ಯೋಜನೆಗಳಲ್ಲಿ ಪರಿಷ್ಕರಣೆ ಇಲ್ಲವೇ ಇಲ್ಲ ಎಂದು ತಿಳಿಸಿದ್ದಾರೆ.
ಗೃಹ ಸಚಿವರ ಡಾ.ಜಿ.ಪರಮೇಶ್ವರ, ಪರಿಷ್ಕರಣೆ ಮಾಡಬೇಕೆಂದು ಹಲವರು ಅಭಿಪ್ರಾಯ ಇದೆ. ಆದರೆ ಸರಕಾರ ಆ ದಿಸೆಯಲ್ಲಿ ಯೋಚಿಸಿಲ್ಲ. ಈ ವರ್ಷದ ಬಜೆಟ್ ನಲ್ಲಿ ಅಗತ್ಯ ಅನುದಾನ ಮೀಸಲಿಡಲಾಗಿದೆ. ಹಾಗಾಗಿ ಸಧ್ಯ ಪರಿಷ್ಕರಣೆ ಇಲ್ಲ. ಮುಂದಿನ ದಿನಗಳಲ್ಲಿ ನೋಡೋಣ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ