ಹಿಂದಿನ ಚುನಾವಣೆಯಷ್ಟು ಟೆನ್ಶನ್ ನನಗೆ ಈ ಬಾರಿ ಇಲ್ಲ, ನಾನು ಮಾಡಿದ ಕೆಲಸ ನನ್ನ ಕೈ ಹಿಡಿಯಲಿದೆ – ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ


ಕೊರೋನಾ, ಪ್ರವಾಹದ ಸಂದರ್ಭದಲ್ಲಿ ಜನರ ಸಂಕಷ್ಟವನ್ನು ಹತ್ತಿರದಿಂದ ಕಂಡು, ತಾವು ನೆರವಾದ ಕ್ಷಣವನ್ನು ನೆನಪಿಸಿಕೊಂಡು ಭಾವುಕರಾದ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಿಂದಿನ ಚುನಾವಣೆಯ ಟೆನ್ಶನ್ ನನಗೆ ಈ ಬಾರಿ ಇಲ್ಲ. ಕಳೆದ 5 ವರ್ಷ ಜನರ ಮಧ್ಯೆ ನಿಂತು ಮಾಡಿದ ಕೆಲಸ ನನ್ನ ಕೈ ಹಿಡಿಯಲಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿರಂತರ ಪ್ರಚಾರ ಕಾರ್ಯದ ಮಧ್ಯೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲಿನಿಂದಲೂ ಕ್ಷೇತ್ರಾದ್ಯಂತ ಒಳ್ಳೆಯ ರೆಸ್ಪಾನ್ಸ್ ಇದೆ. 5 ವರ್ಷಜನರ ಮಧ್ಯೆ ನಿಂತಿದ್ದೇನೆ, ಅದು ಫಲ ಕೊಡುತ್ತದೆ ಎಂದರು.
ಕ್ಷೇತ್ರದ ಯಾವುದೇ ಭಾಗಕ್ಕೆ ಹೋದರೂ ನಾನು ಮಾಡಿಸಿದ ಒಂದಿಲ್ಲೊಂದು ಅಭಿವೃದ್ಧಿ ಕೆಲಸಗಳು ಕಾಣುತ್ತವೆ. ಪ್ರತಿ ಊರಲ್ಲಿ, ಪ್ರತಿಯೊಬ್ಬರು ನೆನೆಸಿಕೊಳ್ಳುತ್ತಾರೆ, ಅಕ್ಕ ಅದು ನೀವು ಮಾಡಿಸಿಕೊಟ್ಟಿದ್ದು, ಅಕ್ಕ ಇದು ನೀವು ಮಾಡಿಸಿಕೊಟ್ಟಿದ್ದು ಎಂದು ಜನ ನೆನಪಿಸುತ್ತಾರೆ. ಅಕ್ಕ ನಿಮ್ಮಿಂದಾಗಿ ನಮ್ಮೂರಿಗೆ ರಸ್ತೆಯಾಯಿತು. ಎಷ್ಟೊವರ್ಷದಿಂದ ಓಡಾಡಲೂ ಪರದಾಟ ನಡೆಸುತ್ತಿದ್ದೆವು. ನಮ್ಮೂರಲ್ಲಿ ಚರಂಡಿ ಇಲ್ಲದೆ ರಸ್ತೆ ಮೇಲೆಯೇ ಹೊಲಸು ನೀರು ಹರಿಯುತ್ತಿತ್ತು. ನೀವು ಮಾಡಿಸಿಕೊಟ್ಟಿದ್ದರಿಂದ ನೆಮ್ಮದಿಯಿಂದ ಓಡಾಡುವಂತಾಗಿದೆ ಎಂದು ಜನರು ಸ್ಮರಿಸುತ್ತಾರೆ.
ಕೊರೋನಾ, ಪ್ರವಾಹದಂತಹ ಸಂದರ್ಭದಲ್ಲಿ ಜನರ ಜೊತೆ ನಿಂತಿದ್ದೇನೆ. ನಮ್ಮ ಇಡೀ ಕುಟುಂಬಕ್ಕೆ ಕೊರೋನಾ ಬಂದಿತು. ಆದರೆ ನಮ್ಮ ತೊಂದರೆಯನ್ನು ಜನರಿಗೆ ತೋರ್ಪಡಿಸದೆ ನಮ್ಮ ಇಡೀ ತಂಡವನ್ನು ಜನರ ಸೇವೆಯಲ್ಲಿ ತೊಡಗಿಸಿದ್ದೆವು. ಉಚಿತ ಅಂಬುಲೆನ್ಸ್ ಮೂಲಕ ಹಳ್ಳಿ ಹಳ್ಳಿಯಲ್ಲಿ ರೋಗಿಗಳಿಗೆ ನೆರವಾಗಿದ್ದೇನೆ. ಆಹಾರದ ಕಿಟ್, ಔಷಧದ ಕಿಟ್ ಹಂಚುವ ಮೂಲಕ ಅವರ ಕಷ್ಟದಲ್ಲಿ ಕುಟುಂಬದ ಸದಸ್ಯೆಯಾಗಿ ನಿಂತಿದ್ದೇನೆ. ನಾನು ಆಸ್ಪತ್ರೆಯ ಬೆಡ್ ಮೇಲಿದ್ದ ಸಂದರ್ಭದಲ್ಲೂ ಜನರ ಫೋನ್ ಸ್ವೀಕರಿಸುತ್ತ ಕೊರೋನಾ ಸೋಂಕಿತರಿಗೆ ಬೆಡ್ ವ್ಯವಸ್ಥೆ ಸೇರಿದಂತೆ ಅವರು ಕೇಳಿದ್ದೆಲ್ಲ ವ್ಯವಸ್ಥೆ ಮಾಡಿಸಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ನೆನಪಿಸಿದರು.
ಪ್ರವಾಹ ಸಂದರ್ಭದಲ್ಲಿ ನಾನೇ ಸ್ವತಃ ಹಳ್ಳಿ ಹಳ್ಳಿಗೆ ಹೋಗಿ ಜನರ ಕಣ್ಣೀರು ಒರೆಸುವ ಕೆಲಸ ಮಾಡಿದ್ದೇನೆ. ಪ್ರತಿ ಮನೆಯ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ. ಎಂತಹ ಸಂದರ್ಭದಲ್ಲೂ ಪಲಾಯನ ಮಾಡದೆ ನಿಂತು ಕೆಲಸ ಮಾಡಿದ್ದೇನೆ. ನಾನೊಬ್ಬನೇ ಅಲ್ಲ, ನನ್ನ ಸಹೋದರ, ಮಗ, ನಮ್ಮ ಇಂಡೀ ತಂಡ ಊಟ, ನಿದ್ದೆ ಬಿಟ್ಟು ಜನರೊಂದಿಗೆ ನಿಂತಿದೆ. ರಾತ್ರಿಯಾದರೂ ಸಮಸ್ಯೆ ಪರಿಹರಿಸದೆ ನನಗೆ ಮನೆಗೆ ಬರಲು ಮನಸ್ಸಾಗುತ್ತಿರಲಿಲ್ಲ. ತಮ್ಮ ಕಷ್ಟಕಾಲದಲ್ಲಿ ನಾನು ಮಾಡಿದ ಸೇವೆಗೆ ಜನರೇ ಸಾಕ್ಷಿಯಾಗಿದ್ದಾರೆ. ಇದನ್ನೆಲ್ಲ ನೋಡಿದ ಜನರು ಈಗ ಮನೆ ಮಗಳ ಕೈ ಬಿಡಲು ಸಾಧ್ಯವೇ ಇಲ್ಲ. ಯಾರೋ ಈಗ ಚುನಾವಣೆಯ ಸಂದರ್ಭದಲ್ಲಿ ಬಂದು ಏನೇ ಸುಳ್ಳು ಹೇಳಿದರೂ, ಏನೇ ಸುಳ್ಳು ಭರವಸೆ ನೀಡಿದರೂ ಅಂತವರ ಮಾತಿಗೆ ಜನರು ಮರುಳಾಗುವುದಿಲ್ಲ. ತಮ್ಮ ಕಷ್ಟ ಕಾಲದಲ್ಲಿ ಕೈ ಹಿಡಿದವರು ಯಾರು ಎಂಬುದು ಗೊತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಭಾವುಕರಾಗಿ ನುಡಿದರು.

ಎಂಇಎಸ್ ಅಭ್ಯರ್ಥಿ ಈ ಬಾರಿ ನಿಮಗೆ ಪೈಪೋಟಿ ನೀಡುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಎಂಇಎಸ್ ಅಭ್ಯರ್ಥಿ ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಅದೇನೂ ವ್ಯತ್ಯಸವಾಗಿಲ್ಲ. 2018ರ ಚುನಾವಣೆಯಲ್ಲಿ ನನ್ನ ಜೊತೆ ಇದ್ದ ಮರಾಠಾ ಸಮಾಜದ ಜನರು ಈಗಲೂ ನನ್ನ ಜೊತೆಗೇ ಇದ್ದಾರೆ. ಮರಾಠಾ ಸಮಾಜಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದ್ದೇನೆ. ಸಮಾಜಕ್ಕೆ ಗೌರವ ಬರುವ ಹಾಗೆ ಸಮಾಜದ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಯಾರೊಬ್ಬರೂ ಬಿಟ್ಟು ಹೋಗಿಲ್ಲ, ಬದಲಾಗಿ ನನ್ನ ಅಭಿವೃದ್ಧಿ ಕೆಲಸ ನೋಡಿ ಬಹಳಷ್ಟು ಜನರು ಹಿಂದೆ ಅಂತರ ಕಾದುಕೊಂಡಿದ್ದವರೂ ಈಗ ನನ್ನ ಜೊತೆಗೆ ಸೇರಿದ್ದಾರೆ. ಸ್ವಾರ್ಥಕ್ಕೋಸ್ಕರ 4 ತಿಂಗಳು ಬಂದು ರಾಜಕಾರಣ ಮಾಡುವವರ ಬಗ್ಗೆ ಜನರಿಗೆ ಗೊತ್ತಿದೆ. ಹಾಗಾಗಿ ಹಿಂದಿಗಿಂತ ನನ್ನ ಬಲ ಈ ಬಾರಿ ಸಾಕಷ್ಟು ವೃದ್ಧಿಯಾಗಿದೆ ಎಂದು ಹೇಳಿದರು.
ಯಾರನ್ನೂ ನಾನು ವಿರೋಧಿಗಳು ಎಂದು ಪರಿಗಣಿಸುವುದಿಲ್ಲ. ಅವರು ಅವರ ಕೆಲಸ ಮಾಡುತ್ತಿದ್ದಾರೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಬೇರೆ ಪಕ್ಷದವರಾಗಲಿ, ಚುನಾವಣೆಗೆ ಸ್ಪರ್ಧಿಸಿರುವ ಯಾರೇ ಆಗಲಿ ನನ್ನ ವಿರೋಧಿಗಳು ಎಂದುಕೊಳ್ಳುವುದಿಲ್ಲ. ಅನೇಕರು ರಾಜಕೀಯ ಕಾರಣಕ್ಕೆ ನನ್ನನ್ನು ವಿರೋಧಿಸುತ್ತಿರಬಹುದು. ಆದರೆ, ಲಕ್ಷ್ಮೀ ಹೆಬ್ಬಾಳಕರ್ ನಮ್ಮ ಕ್ಷೇತ್ರದಲ್ಲಿ ಹಿಂದೆಂದೂ ಆಗದಷ್ಟು ಕೆಲಸ ಮಾಡಿಸಿದ್ದಾರೆ ಎಂದು ಅವರ ಮನಸ್ಸಾಕ್ಷಿಗೆ ಗೊತ್ತಿದೆ. ಹಾಗಾಗಿ ಪಕ್ಷಾತೀತವಾಗಿ ಈಬಾರಿ ನನ್ನ ಬೆನ್ನಿಗೆ ಜನರು ನಿಂತಿದ್ದಾರೆ. ದಿನದಿಂದ ದಿನಕ್ಕೆ ಬಹಳಷ್ಟು ಜನರು ನನ್ನ ಬೆಂಬಲಕ್ಕೆ ಬರುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಮೇಲೆ ಸರಕಾರ ರಚಿಸಲಿದೆ. ಜನರು ಬೆಲೆ ಏರಿಕೆ, ಭ್ರಷ್ಟಾಚಾರ, ಡಿ ಮೊನಿಟೈಸೇಶನ್, ಕೊರೋನಾ, ಪ್ರವಾಹ, ಪಿಎಸ್ ಐ ಸ್ಕ್ಯಾಮ್, ಶಿಕ್ಷಕರ ನೇಮಕಾತಿ ಸ್ಕ್ಯಾಮ್, ಎಂಜಿನಿಯರ್ಸ್ ನೇಮಕಾತಿ ಸ್ಕ್ಯಾಂ ಎಲ್ಲದರಿಂದ ರೋಸಿ ಹೋಗಿದ್ದಾರೆ. ನಮ್ಮ ಕ್ಷೇತ್ರದಲ್ಲೇ ಸಂತೋಷ ಪಾಟೀಲ ಎನ್ನುವ ಯುವಕ ಭ್ರಷ್ಟಾಚಾರಕ್ಕ ನಲುಗಿ ಆತ್ಮಹತ್ಯೆ ಮಾಡಿಕೊಂಡ. ಎಲ್ಲವೂ ಕ್ಷೇತ್ರದ ಜನರಿಗೆ ಗೊತ್ತಿದೆ. ಹಾಗಾಗಿ ಜನರು ಬಹಳ ಬುದ್ದಿವಂತರಿದ್ದಾರೆ. ಹಾಗಾಗಿ ಖಂಡಿತ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಬಹುಮತವನ್ನು ಕೊಟ್ಟೇ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ