Kannada NewsKarnataka NewsLatest
ನೀವೆಲ್ಲ ಕಷ್ಟದಲ್ಲಿರುವ ಸಂದರ್ಭದಲ್ಲಿ ನಾನು ಮನೆಯಲ್ಲಿರಲು ಮನಸ್ಸು ಬರುತ್ತಿಲ್ಲ -ಲಕ್ಷ್ಮಿ ಹೆಬ್ಬಾಳಕರ್
ನಾನು ಹೊರಗೆ ಬರುವುದು ಎಷ್ಟು ಅಪಾಯಕಾರಿ ಎನ್ನುವ ಅರಿವು ನನಗಿದೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರವೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಅವರ ಕುಟುಂಬದ ಸದಸ್ಯರು ಹಾಗೂ ಕಾರ್ಯಕರ್ತರು ಜನಜಾಗ್ರತಿ ಅಭಿಯಾನ ಮತ್ತು ವಿವಿಧ ಸಾಮಗ್ರಿಗಳ ವಿತರಣೆ ನಡೆಸಿದರು.
ಬಾಳೆಕುಂದ್ರಿ ಕೆಎಚ್ ಮತ್ತು ಮಾವಿನಕಟ್ಟಿ ಗ್ರಾಮಗಳಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಜಾಗ್ರತಿ ಅಭಿಯಾನ ನಡೆಸಿ, ಔಷಧಗಳನ್ನು ಸಿಂಪಡಿಸಿದರು. ಮಾಸ್ಕ್ ಹಾಗೂ ಸೆನಿಟೈಸರ್ ಗಳನ್ನು ವಿತರಿಸಿದರು. ಜನರು ಮನೆಯಿಂದ ಹೊರಗೆ ಬಾರದೆ, ತಮ್ಮ ಹಾಗೂ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ವಿನಂತಿಸಿದರು.
ನನ್ನನ್ನು ಶಾಸಕಿಯಾಗಿ ಆಯ್ಕೆ ಮಾಡಿದ್ದೀರಿ. ನಾನು ಹೊರಗೆ ಬರುವುದು ಎಷ್ಟು ಅಪಾಯಕಾರಿ ಎನ್ನುವ ಅರಿವು ನನಗಿದೆ. ಆದರೆ ನೀವೆಲ್ಲ ಕಷ್ಟದಲ್ಲಿರುವ ಸಂದರ್ಭದಲ್ಲಿ ನಾನು ಮನೆಯಲ್ಲಿರಲು ಮನಸ್ಸು ಬರುತ್ತಿಲ್ಲ. ಹಾಗಾಗಿ ನಿಮ್ಮ ಕಷ್ಟದಲ್ಲಿ ಭಾಗಿಯಾಗಲು, ಸಾಧ್ಯವಾದಷ್ಟು ಸ್ಪಂದಿಸಲು ನಾನು ಪ್ರತಿ ನಿತ್ಯ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ ಎಂದು ಹೆಬ್ಬಾಳಕರ್ ತಿಳಿಸಿದರು.
ದೇಸೂರ, ನಂದಿಹಳ್ಳಿ, ಯಳ್ಳೂರ ಸುಳಗಾ, ರಾಜಹಂಸಗಡ ಮೊದಲಾದ ಗ್ರಾಮಗಳಲ್ಲಿ ಯುವಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಯುವರಾಜ ಕದಂ ಮೊದಲಾದವರು ಜಾಗ್ರತಿ ಅಭಿಯಾನ ನಡೆಸಿ, ಸಾಮಗ್ರಿಗಳನ್ನು ವಿತರಿಸಿದರು. ಲಾಕ್ ಡೌನ್ ಮುಗಿಯುವವರೆಗೂ ಯಾರೂ ಹೊರಗೆ ಬರಬೇಡಿ. ನಿಮ್ಮ ಕಷ್ಟಕ್ಕೆ ಸ್ಪಂದಿಸಲು ನಾವು ಸಿದ್ದವಿದ್ದೇವೆ ಎಂದು ಮೃಣಾಲ್ ಹೆಬ್ಬಾಳಕರ್ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ