ಪ್ರಗತಿವಾಹಿನಿ ಸುದ್ದಿ, ರಾಮನಗರ (ಬೆಂಗಳೂರು) : ನನಗೂ ಪಕ್ಷದಲ್ಲಿ ಬೆಂಬಲಿಗರಿದ್ದಾರೆ. ಅವರು ಸಂದರ್ಭ ಬಂದಾಗ ನನ್ನ ಬೆಂಬಲಕ್ಕೆ ಬರುತ್ತಾರೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಬಲಾಬಲ ಪ್ರದರ್ಶನಕ್ಕೆ ಇದು ಸಂದರ್ಭವೂ ಅಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ರಾಮನಗರದಲ್ಲಿನ ಆದಿಚುಂಚನಗಿರಿ ಶಾಖಾ ಮಠಕ್ಕೆ ಬುಧವಾರ ಭೇಟಿ ನೀಡಿದ ಅವರು, ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.
ನನ್ನ ಹೇಳಿಕೆ ಇಷ್ಟೊಂದು ದೊಡ್ಡ ವಿವಾದವಾಗುತ್ತದೆ ಎಂದು ತಿಳಿದಿರಲಿಲ್ಲ. ವಿರೋಧ ಪಕ್ಷದವರು ಇಷ್ಟೊಂದು ರಂಪಾಟ ಮಾಡುವುದು ಸರಿಯಲ್ಲ ಎಂದೂ ಅವರು ಹೇಳಿದರು.
ನಾನು ಪಕ್ಷದೊಳಗಿದ್ದು ಮಾತನಾಡಲು ನನಗೆ ಇತಿಮಿತಿಗಳಿವೆ. ಹಾಗಾಗಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಸಧ್ಯಕ್ಕೆ ಉತ್ತರಿಸುವುದಿಲ್ಲ. ನನ್ನ ಹೇಳಿಕೆ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಂದಾಗಿ ನನಗೆ ನೋವಾಗಿದೆ. ಮಾತನಾಡಲು ನನ್ನ ಬಳಿಯೂ ಸಾಕಷ್ಟು ವಿಷಯಗಳಿವೆ. ಯಾರೋ ನಾಲ್ಕು ಮಂದಿ ಮಾತನಾಡಿದರೆ ಮಾತನಾಡಿಕೊಳ್ಳಲಿ ಬಿಡಿ ಎಂದರು.
ನನ್ನನ್ನು ಪಕ್ಷದಿಂದ ಉಚ್ಛಾಟಿಸುವ ಸಂಬಂಧ ಸಹಿ ಸಂಗ್ರಹದ ಬಗ್ಗೆ ನನಗೆ ಮಾಹಿತಿ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಹೈ ಕಮಾಂಡ್ ಇದೆ. ಕೆಲವರು ನನ್ನ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದಾರೆ. ಅವರ ಹಿಂದೆ ಯಾರು ಮಾತನಾಡಿಸುತ್ತಿದ್ದಾರೆ ಎಂಬುದು ತಿಳಿದಿದೆ. ಬೇಕಾದವರು ದೆಹಲಿಗೆ ಹೋಗಿಬರಲಿ. ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಯೋಗೀಶ್ವರ ಹೇಳಿದರು.
ಸಿದ್ದರಾಮಯ್ಯ, ಕೃಷ್ಣ ಭೈರೆಗೌಡ, ಡಿಕೆ ಬ್ರದರ್ಸ್ ನನ್ನ ಹೇಳಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿನ ಅವರು, ನಮ್ಮ ಪಕ್ಷದ ಬಗೆಗಿನ ನನ್ನ ಹೇಳಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಇದೆಲ್ಲ ಯಾಕೇ ಬೇಕು? ಮಾತನಾಡಲು ಬೇಕಾದಷ್ಟಿದೆ. ಕೋವಿಡ್ ಬಗ್ಗೆ ಮಾತನಾಡಲಿ ಎಂದರು.
ನನ್ನನ್ನು ಹಣಿಯಲು ಈ ಹಿಂದೆ ಎಚ್‌ಡಿಕೆ ಸಹ ಮೆಗಾಸಿಟಿ ತನಿಖೆ ಮಾಡಿಸಿದ್ದರು. ನ್ಯಾಯಾಲಯವು ಪ್ರಕರಣ ಖುಲಾಸೆ ಮಾಡಿದೆ. ಈಗ ಮತ್ತೆ ಅದನ್ನು ಕೆದಕುತ್ತಿದ್ದಾರೆ. ಯಾರು ಎಷ್ಟು ಬೇಕಿದ್ದರೂ ತನಿಖೆ ಮಾಡಿಸಲಿ. ತಪ್ಪಿದ್ದರೆ ಶಿಕ್ಷೆ ಅನುಭವಿಸುತ್ತೇನೆ. ನಾನೇನು ಊರು ಬಿಟ್ಟು ಹೋಗುವುದಿಲ್ಲ ಎಂದರು.
ಮೈಸೂರಿಗೆ ಹೋಗಿದ್ದಾಗ ಸುತ್ತೂರು ಮಠಕ್ಕೆ ಹೋಗಿದ್ದೆ. ಈಗ ಇಲ್ಲಿ, ಸ್ವಾಮೀಜಿ ಆರ್ಶಿವಾದ ಪಡೆಯಲು ಬಂದಿದ್ದೆ. ನಾನು ಆಗಾಗ ಸ್ವಾಮೀಜಿಗಳನ್ನು ಭೇಟಿಯಾಗುತ್ತಲೇ ಇರುತ್ತೇನೆ. ಇನ್ನೂ ಕೆಲವು ಸ್ವಾಮೀಜಿಗಳನ್ನು ಭೇಟಿ ಮಾಡಲಿದ್ದೇನೆ ಎಂದು ಹೇಳಿದರು.
ವಾರದಲ್ಲಿ ಸರಕಾರಕ್ಕೆ ಟಾಸ್ಕ್ ಫೋರ್ಸ್ ವರದಿ – ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ