Kannada NewsKarnataka News

ಸರ್ಕಾರದಿಂದ ವಿಳಂಬವಾದರೆ 15 ಕೋಟಿ ವೆಚ್ಚದಲ್ಲಿ ನಾನೇ ಶೆಡ್‌ ನಿರ್ಮಿಸಿ ಕೊಡುವೆ

ಸರ್ಕಾರದಿಂದ ವಿಳಂಬವಾದರೆ ನಾನೇ ಶೆಡ್‌ಗಳನ್ನು ನಿರ್ಮಿಸಿ ಕೊಡುವೆ

ಪ್ರಗತಿವಾಹಿನಿ ಸುದ್ದಿ, ಗೋಕಾಕ :

ವರುಣನ ಅರ್ಭಟಕ್ಕೆ ನಲುಗಿ ನದಿ ತೀರದ ಗ್ರಾಮಗಳ ಅಂದಾಜು ೫ ಸಾವಿರಕ್ಕೂ ಅಧಿಕ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇನ್ನೂ ಮನೆಗಳ ಸಂಖ್ಯೆ ಹೆಚ್ಚಾಗಬಹುದು. ಈ ಕೂಡಲೇ ಸಂತ್ರಸ್ಥರಿಗೆ ವಾಸಿಸಲು ಸೂರಿನ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಭಾನುವಾರ ಹೊಸಪೇಠ ಗಲ್ಲಿಯಲ್ಲಿರುವ ತಮ್ಮ ಕಾರ್ಯಾಲಯದಲ್ಲಿ ಸ್ವಾಭಿಮಾನಿ ಬಿ. ಶ್ರೀರಾಮುಲು ಬ್ರಿಗೇಡ್, ಕಿಚ್ಚ ಸುದೀಪ ಅಭಿಮಾನಿ ಬಳಗದವರು ನೆರೆ ಸಂತ್ರಸ್ಥರಿಗೆ ಊಟೋಪಚಾರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಒಂದು ವೇಳೆ ಸರ್ಕಾರದ ಪರಿಹಾರ ಕಾರ್ಯ ವಿಳಂಬವಾದರೆ ತಾತ್ಕಾಲಿಕವಾಗಿ ಸಂತ್ರಸ್ಥರಿಗೆ ೧೫ ಕೋಟಿ ರೂ. ವೆಚ್ಚದಲ್ಲಿ ೪೦೦ ಚದರ ಮೀಟರ್ ಅಳತೆಯ ೫ ಸಾವಿರ ಶೆಡ್‌ಗಳನ್ನು ತಮ್ಮ ಸ್ನೇಹಿತರ ಸಹಕಾರದಿಂದ ನಿರ್ಮಿಸಿಕೊಡಲಾಗುವುದು. ಸಂತ್ರಸ್ಥರು ಯಾವ ಕಾರಣಕ್ಕೂ ಹೆದರಬಾರದು ಎಂದು ಹೇಳಿದರು.


ಹಿಂದೆಂದೂ ಕಂಡರಿಯದ ಜಲ ಪ್ರಳಯ ನಮ್ಮ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಿಗೂ ಬಂದಿದ್ದು, ಇಷ್ಟೊಂದು ಹಾನಿಯಾಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಘಟಪ್ರಭಾ ನದಿಯಿಂದ ಹರಿದ ಕುಂಭದ್ರೋಣ ಮಳೆಯಿಂದಾಗಿ ಸಂತ್ರಸ್ಥರು ಮನೆಗಳನ್ನು ಕಳೆದುಕೊಂಡಿದ್ದಾರೆ. ಸಂತ್ರಸ್ಥರು ಹೆದರಬೇಡಿ. ನಿಮ್ಮೊಂದಿಗೆ ನಾವಿದ್ದೇವೆ. ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ಮಾಡಿದರೇ ಸ್ವತಃ ನಾನೇ ಹೇಗಾದರೂ ಮಾಡಿ ಹಣದ ವ್ಯವಸ್ಥೆ ಮಾಡುತ್ತೇನೆಂದು ಹೇಳಿದರು.
ಈಗಾಗಲೇ ಕ್ಷೇತ್ರದ ನದಿ ತೀರದ ೨೯ ಗ್ರಾಮಗಳು ಪ್ರವಾಹದಿಂದಾಗಿ ಜಲಾವೃತಗೊಂಡಿವೆ. ೨ ಸಾವಿರ ಕೋಟಿ ರೂ. ಅಂದಾಜು ನಷ್ಟವಾಗಿದೆ. ತೊಟ್ಟ ಅರಿವೆ ಮೇಲೆ ಸಂತ್ರಸ್ಥರು ಗಂಜಿ ಕೇಂದ್ರಗಳಲ್ಲಿ ವಾಸವಿದ್ದಾರೆ. ಇದನ್ನು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೊಂದಿಗೆ ದೂರವಾಣಿ ಮೂಲಕ ಸಮಗ್ರ ಮಾಹಿತಿ ನೀಡಿದ್ದೇನೆ.

ಅವರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂತ್ರಸ್ಥರಿಗೆ ಸೂರು ಸೇರಿದಂತೆ ಎಲ್ಲ ವ್ಯವಸ್ಥೆ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಸರ್ಕಾರ ಎಂದ ಮೇಲೆ ಪರಿಹಾರ ನೀಡುವ ಕಾರ್ಯ ವಿಳಂಬವಾಗಬಹುದು. ನಾನೇ ಸ್ವತಃ ಮುಂದೆ ನಿಂತು ಸಂತ್ರಸ್ಥರ ಬೇಕು ಬೇಡಗಳಿಗೆ ಹೆಗಲು ಕೊಟ್ಟು ದುಡಿಯುತ್ತೇನೆ. ಈಗಾಗಲೇ ಗಂಜಿ ಕೇಂದ್ರಗಳಲ್ಲಿ ಸಂತ್ರಸ್ಥರಿಗೆ ಉಪಹಾರ, ಊಟ ಹಾಗೂ ವಸತಿ ಸೌಲಭ್ಯವನ್ನು ಮಾಡಲಾಗಿದೆ.

ನಮ್ಮ ಅಧಿಕಾರಿಗಳು, ಟೀಂ ಎನ್‌ಎಸ್‌ಎಫ್, ಜನಪ್ರತಿನಿಧಿಗಳು ಸೇರಿದಂತೆ ಹಲವರು ಸಂತ್ರಸ್ಥರನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ನೆರೆ ಪೀಡಿತರಿಗೆ ಊಟ, ಹೊದಿಕೆ, ಬಟ್ಟೆ, ನೀರು ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಲು ಆಗಮಿಸುತ್ತಿದ್ದಾರೆ. ಇಂತಹ ಕಾರ್ಯ ಅಭಿನಂದನಾರ್ಹವಾಗಿದೆ. ಪ್ರತಿಯೊಬ್ಬರಿಗೂ ನಾನು ಚಿರಋಣಿಯಾಗಿರುವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕೋಲಾರದ ಸ್ವಾಭಿಮಾನಿ ಬಿ. ಶ್ರೀರಾಮುಲು ಬ್ರಿಗೇಡ್, ಬೆಳಗಾವಿಯ ಕಿಚ್ಚ ಸುದೀಪ ಅಭಿಮಾನಿ ಬಳಗ, ನೆಲಮಂಗಲದ ನಾಗರಾಜ್ ತಂಡಗಳು ತಪಸಿ ಕ್ರಾಸ್, ತಳಕಟ್ನಾಳ, ತಿಗಡಿ, ಬೆಟಗೇರಿ ಗಂಜಿ ಕೇಂದ್ರಗಳಲ್ಲಿ ಊಟೋಪಚಾರ ವ್ಯವಸ್ಥೆ ಮಾಡುತ್ತಿವೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ನಮ್ಮ ಸಂತ್ರಸ್ಥರಿಗೆ ಸಾಂತ್ವನ ಹೇಳಿ ನೆರವು ನೀಡುತ್ತಿರುವ ವಿವಿಧ ಸಾಮಾಜಿಕ ಸಂಘ-ಸಂಸ್ಥೆಗಳ ಕಾಳಜಿಯನ್ನು ಶ್ಲಾಘಿಸಿದರು.

ಆದಿಚುಂಚನಗಿರಿ ಮಠದಿಂದ ನೆರವು :

ಇದೇ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಟ್ರಸ್ಟಿನವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ, ಸಂತ್ರಸ್ಥರ ನೆರವಿಗೆ ನಾವು ಸಿದ್ಧರಿದ್ದೇವೆ. ನಮಗೆ ಯಾವುದೇ ಜವಾಬ್ದಾರಿ ವಹಿಸಿದರೂ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ. ನಾವು ನಿಮ್ಮೊಂದಿಗಿದ್ದೇವೆ ಎಂದು ಮಠದ ಸಿಇಓ ರಾಮಲಿಂಗೇಗೌಡ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ತಿಳಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ(ಮೆಳವಂಕಿ), ಮಹಾದೇವ ಪತ್ತಾರ, ಸಿದ್ದಪ್ಪ ಹಂಜಿ, ರಾಜೇಸಾಬ ಅಂಡಗಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೇವಿನ ಕೊರತೆ ನೀಗಿಸಲು ಸೂಚನೆ

ನಿರಾಶ್ರಿತರ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಾದರೂ ಖರೀದಿಸಿ ಮೇವಿನ ಕೊರತೆಯನ್ನು ನೀಗಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮೀಪದ ಪಟಗುಂದಿ ಗಂಜಿ ಕೇಂದ್ರಕ್ಕೆ ಶನಿವಾರ ರಾತ್ರಿ ಭೇಟಿ ನೀಡಿದ ಅವರು, ಸರ್ಕಾರ ಪ್ರತಿ ಟನ್ ಹಸಿ ಮೇವಿಗೆ ಸಾರಿಗೆ ವೆಚ್ಚ ಸೇರಿ ೨೩೦೦ ರೂ. ನಿಗದಿ ಮಾಡಿದೆ. ಸರ್ಕಾರದ ಬೆಲೆ ಕಡಿಮೆಯಾದ ಹಿನ್ನೆಲೆಯಲ್ಲಿ ರೈತರು ಮೇವು ನೀಡಲು ಮುಂದಾಗುತ್ತಿಲ್ಲ. ೨೮೦೦ ರೂ.ಗಳವರೆಗೆಯಾದರೂ ಮೇವನ್ನು ಖರೀದಿಸಿ ನಿರಾಶ್ರಿತ ಕುಟುಂಬಗಳ ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಹ ಬಾಧೆ ಆವರಿಸಿದ್ದರ ಹಿನ್ನೆಲೆಯಲ್ಲಿ ನಮ್ಮ ಕ್ಷೇತ್ರದ ನದಿ ತೀರದ ೨೯ ಗ್ರಾಮಗಳು ಪೂರ್ಣ ಪ್ರಮಾಣದಲ್ಲಿ ನೀರಿನಲ್ಲಿ ಮುಳುಗಿ ಹೋಗಿವೆ. ನಿರಾಶ್ರಿತ ಕುಟುಂಬಗಳನ್ನು ಈಗಾಗಲೇ ಕಾಪಾಡಿದ್ದು, ಅವರನ್ನು ಸುರಕ್ಷಿತ ಕೇಂದ್ರಗಳಲ್ಲಿ ವಾಸಿಸಲು ಗಂಜಿ ಕೇಂದ್ರಗಳ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಎಲ್ಲ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ಥರ ಕಣ್ಣೀರನ್ನು ಒರೆಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸಾಕಷ್ಟು ಧೈರ್ಯ ತುಂಬಿದ್ದೇನೆ. ಜೊತೆಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದೇನೆಂದು ಹೇಳಿದರು.

ವೈದ್ಯಾಧಿಕಾರಿಗಳ ಸಭೆ :

ಬರುವ ಮಂಗಳವಾರದಂದು ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿರುವ ಸರ್ಕಾರಿ ವೈದ್ಯಾಧಿಕಾರಿಗಳ ಸಭೆಯನ್ನು ನಡೆಸಲು ಉದ್ಧೇಶಿಸಲಾಗಿದೆ. ಈಗಾಗಲೇ ಪ್ರತಿ ಗಂಜಿ ಕೇಂದ್ರಗಳಲ್ಲಿ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ನಿರಾಶ್ರಿತರ ಕುಟುಂಬಗಳ ಆರೋಗ್ಯದ ಸ್ಥಿತಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೇ ಜಲಾವೃತಗೊಂಡಿರುವ ನದಿ ತೀರದ ಗ್ರಾಮಗಳಲ್ಲಿ ನೀರಿನ ಮಟ್ಟ ಇಳಿದ ನಂತರ ರೋಗಗಳು ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆಯ ಅರ್ಭಟಕ್ಕೆ ಶಾಲಾ ಕೊಠಡಿಗಳು ಸಹ ಕುಸಿತಗೊಂಡಿದ್ದು,   ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗಂಜಿ ಕೇಂದ್ರಗಳಲ್ಲಿರುವ ನಿರಾಶ್ರಿತ ಕುಟುಂಬಗಳನ್ನು ಭೇಟಿ ಮಾಡಿ ಧೈರ್ಯ ತುಂಬಿದರು.

ಸೀರೆ ವಿತರಣೆ :

ಮೂಡಲಗಿಯ ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿ ಬಳಗದಿಂದ ಪಟಗುಂದಿ ಗ್ರಾಮದಲ್ಲಿರುವ ಗಂಜಿ ಕೇಂದ್ರದ ನಿರಾಶ್ರಿತ ಕುಟುಂಬಗಳಿಗೆ ಸೀರೆ ವಿತರಿಸಿದರು.
ಹನಮಂತ ತೇರದಾಳ, ಮೂಡಲಗಿ ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ತಾಪಂ ಸದಸ್ಯರಾದ ಹನಮಂತ ಡೊಂಬರ, ಶಿವಬಸು ಜುಂಜರವಾಡ, ಗ್ರಾಪಂ ಮಾಜಿ ಅಧ್ಯಕ್ಷರಾದ ಬಸವರಾಜ ಕಸ್ತೂರಿ, ಹನಮಂತ ನಾಯಿಕ, ಸಹಕಾರಿ ಮುಖಂಡ ಟಿ.ಬಿ. ಕೆಂಚರಡ್ಡಿ, ಲಕ್ಷ್ಮಣ ಹುಚರಡ್ಡಿ, ಚನಗೌಡ ಪಾಟೀಲ, ಮಹಾದೇವ ಬಿಜಗುಪ್ಪಿ, ಪಾರೇಶ ಹುಕ್ಕೇರಿ, ಜಡೆಪ್ಪ ಮಂಗಿ, ಸಚೀನ ಸೋನವಾಲ್ಕರ, ಪರಸಪ್ಪ ಉಪ್ಪಾರ, ಲಕ್ಕಪ್ಪ ಹುಚರಡ್ಡಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ಕಮಲದಿನ್ನಿ, ಜೋಕಾನಟ್ಟಿ ಹಾಗೂ ಗುಜನಟ್ಟಿ ಗ್ರಾಮಗಳ ಗಂಜಿ ಕೇಂದ್ರಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭೇಟಿ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button