ಕಾಂಗ್ರೆಸ್ ಸರಕಾರದಲ್ಲಿ ಅಶೋಕ ಪೂಜಾರಿಗೆ ಒಳ್ಳೆ ಸ್ಥಾನ ಕೊಡಿಸುತ್ತೇನೆ – ಲಕ್ಷ್ಮೀ ಹೆಬ್ಬಾಳಕರ್ ಭರವಸೆ
ದೇಶದ ಭದ್ರತೆ, ಸಮಗ್ರತೆಗಾಗಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ/ ಬೈಲಹೊಂಗಲ : : ದೇಶದ ಭದ್ರತೆ, ಸಮಗ್ರತೆಗಾಗಿ ಮತ್ತು ಸರ್ವ ಜನಾಂಗಗಳನ್ನು ಒಂದೇ ದೃಷ್ಟಿಯಿಂದ ನೋಡುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷವಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕಿ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಗೋಕಾಕ ಹಾಗೂ ಬೈಲಹೊಂಗಲದಲ್ಲಿ ಸೋಮವಾರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ತತ್ವ ಸಿದ್ದಾಂತಗಳಿದ್ದು, ಸರ್ವ ಜನಾಂಗಗಳನ್ನು ಒಂದೇ ದೃಷ್ಟಿಯಿಂದ ನೋಡುತ್ತ ಬಂದಿದೆ. ಕಾಂಗ್ರೆಸ್ ಪಕ್ಷದ ಇತಿಹಾಸವೇ ಈ ದೇಶದ ಇತಿಹಾಸವಾಗಿದೆ. ಹಾಗಾಗಿಯೇ ಇಂದು ರಾಜ್ಯಾದ್ಯಂತ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಪಕ್ಷದ ಅಭ್ಯರ್ಥಿಗಳಿಗೆ ಮತ ಕೊಡುವ ಮೂಲಕ ಹೆಚ್ಚಿನ ಶಕ್ತಿ ತುಂಬಬೇಕು ಎಂದು ವಿನಂತಿಸಿದರು.
ಗೋಕಾಕ ಕ್ಷೇತ್ರದ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಮಹಾಂತೇಶ ಕಡಾಡಿಯವರನ್ನು ಹಾಗೂ ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಮಹಾಂತೇಶ ಕೌಜಲಗಿಯವರನ್ನು ಅತ್ಯಧಿಕ ಬಹುಮತದಿಂದ ಆಯ್ಕೆ ಮಾಡಿ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿನಂತಿಸಿದರು.
ಒಳ್ಳೆ ಸ್ಥಾನ ಕೊಡಿಸುತ್ತೇನೆ
ಗೋಕಾಕದಲ್ಲಿ ಅಶೋಕ ಪೂಜಾರಿ ಅವರು ಕಳೆದ 30 ವರ್ಷದಲ್ಲಿ ಯಾವುದೇ ಆತಂಕಕ್ಕೆ ಒಳಗಾಗದೆ, ಆಮಿಶಕ್ಕೆ ಕೈ ಚಾಚದೆ ಕೆಲಸ ಮಾಡಿದ್ದಾರೆ. ಸಾಕಷ್ಟು ಬಾರಿ ವಿರೋಧಿಗಳು ಅವರ ಹೆಸರು ಕೆಡಿಸಲು ಪ್ರಯತ್ನಿಸಿದ್ದಾರೆ. ನಾವೆಲ್ಲ ನಿಮ್ಮ ಜೊತೆಗಿದ್ದೇವೆ. ನಿಮ್ಮ ಜೊತೆಗೆ ನಮ್ಮ ಪಕ್ಷ ನಿಲ್ಲಲಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಸತೀಸ್ ಜಾರಕಿಹೊಳಿ, ನಿಮ್ಮ ತಂಗಿ ಲಕ್ಷ್ಮೀ ಹೆಬ್ಬಾಳಕರ್ ಎಲ್ಲರೂ ನಿಮ್ ಜೊತೆಗಿದ್ದೇವೆ. ಮುಂದೆ ನಮ್ಮ ಸರಕಾರ ಬಂದೇ ಬರುತ್ತದೆ. ಆಗ ನಾನು ನಿಮ್ಮ ಪರವಾಗಿ ನಿಂತು ಕೈ ಕಾಲು ಮುಗಿದಾದರೂ ನಿಮಗೊಂದು ಒಳ್ಳೆ ಸ್ಥಾನ ಕೊಡಿಸುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದರು.
ರಾಜ್ಯದಲ್ಲಿ, ದೇಶದಲ್ಲಿ ಯಾರು ಕೂಡ ಸಂತೋಷದಲ್ಲಿಲ್ಲ. ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಚುನಾವಣೆ ಬಂದಿದೆ. ಮತದಾನದ ಹಕ್ಕನ್ನು ಚಲಾಯಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಅವರು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಆಯಾ ಕ್ಷೇತ್ರಗಳ ಅಭ್ಯರ್ಥಿಗಳು, ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ