ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತೇನೆ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾನು ಹಿಡಿದ ಛಲವನ್ನು ಎಂದೂ ಬಿಡುವುದಿಲ್ಲ. ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಪಣ ತೊಟ್ಟಿದ್ದೇನೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾಸ್ತಮರ್ಡಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಸಂಜೆ ಸುಸಜ್ಜಿತ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಚುನಾವಣೆಯ ಪೂರ್ವದಲ್ಲಿ ಕೊಟ್ಟಂತಹ ಭವ್ಯ ಸಮುದಾಯ ಭವನ ನಿರ್ಮಾಣದ ಭರವಸೆ ಸಾಕಾರಗೊಂಡಿದೆ. ನಿಮ್ಮೆಲ್ಲರ ಆಶೀರ್ವಾದ, ಬಸವಣ್ಣನ ಹಾಗೂ, ಗ್ರಾಮದ ಸರ್ವ ದೇವಾನು ದೇವತೆಗಳ ಅನುಗ್ರಹದಿಂದ ಸಮುದಾಯ ಭವನ ನಿರ್ಮಾಣದ ಪೂಜೆ ನೆರವೇರಿಸಿದ್ದೇನೆ ಎಂದು ಅವರು ಹೇಳಿದರು.

ನೀವೆಲ್ಲರೂ ಸೇರಿ ಅದ್ದೂರಿ ಮೆರವಣಿಗೆಯ ಮೂಲಕ ಬರಮಾಡಿಕೊಂಡಿದ್ದೀರಿ, ನಿಮ್ಮ ಪ್ರೀತಿಗೆ ಬೆಲೆ ಕಟ್ಟಲಾಗದು. ನಿಮ್ಮೆಲ್ಲರ ಪ್ರೀತಿಯನ್ನು ಕೊನೆಯ ಉಸಿರು ಇರುವವರೆಗೂ ಉಳಿಸಿಕೊಂಡು ಹೋಗುವಂತೆ ಕೆಲಸ ಮಾಡ್ತಿನಿ.
ಬಡವ- ಶ್ರೀಮಂತರೆನ್ನದೇ ಎಲ್ಲರನ್ನು ಜೊತೆಗೆ ಕರೆದುಕೊಂಡು ಕೆಲಸ ಮಾಡುತ್ತ ಬಂದಿದ್ದೇನೆ. ಶಾಸಕಿ ಮಾಡಿನೋಡಿ, ಕೆಲಸ ಮಾಡ್ತಿನಿ ಅಂತಾ ಹೇಳಿದ್ದೆ, ಮೊದಲ ಅವಧಿಯಲ್ಲಿ ವಿರೋಧ ಪಕ್ಷದಲ್ಲಿ ಇದ್ರೂ ಕೂಡ ಸುಮಾರು 18,00 ಕೋಟಿ ರೂ,ಗಳ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.

ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ, ನನ್ನ ಮೇಲೆ ವಿಶ್ವಾಸ ಇಡಿ, ನಿಮ್ಮೂರಿನ ಮಗಳು ಮಂತ್ರಿಯಾಗ್ತಾಳೆ, ಒಳ್ಳೆಯ ಕೆಲಸ ಮಾಡ್ತಾಳೆ ಎಂದು ಚುನಾವಣೆ ವೇಳೆ ಹೇಳಿದ್ದೆ, ಅದರಂತೆ ಎಲ್ಲರೂ ವಿಶ್ವಾಸವನ್ನಿಟ್ಟು ನನಗೆ ಆಶೀರ್ವಾದ ಮಾಡಿದ್ದೀರಿ. ಗೃಹಲಕ್ಷೀ ಯೋಜನೆಯ ಮೂಲಕ ನಿಮ್ಮ ಮನೆಯ ಮಗಳಾಗಿ ಗೃಹಲಕ್ಷಿಯನ್ನು ನಿಮ್ಮ ಮನೆಗೆ ಕರೆತರುವ ಕೆಲಸವನ್ನು ಮಾಡುತ್ತಿದ್ದೇನೆ. ನೀವೆಲ್ಲ ಸೇರಿ ನನ್ನ ಮಂತ್ರಿ ಮಾಡಿದ್ದಿರಿ, ಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಲಿದ್ದೇನೆ. ಈಗಾಗಲೇ ನೂರಾರು ಗುಡಿ-ಗೋಪುರಗಳು ನಿರ್ಮಾಣಗೊಂಡಿವೆ. ಜೊತೆಗೆ ಕ್ಷೇತ್ರದಲ್ಲಿ ಇನ್ನೂ ಅನೇಕ ಮಂದಿರಗಳು ತಲೆ ಎತ್ತಲಿವೆ. ಹಿಡಿದಂತ ಛಲವನ್ನು ನಾನು ಯಾವತ್ತೂ ಬಿಟ್ಟಿಲ್ಲ, ಮೊನ್ನೆಯಷ್ಟೇ ಬಹುಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿಗೆ ಅನುಮೊದನೆ ದೊರೆತ್ತಿದ್ದು, ರೈತರ, ಜಾನುವಾರುಗಳ ಹಿತ ದೃಷ್ಟಿಯಿಂದ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯಲ್ಲಪ್ಪ ತೋರ್ಲಿ, ಪ್ರಕಾಶ ಪಾಟೀಲ, ಚನ್ನಗೌಡ ಪಾಟೀಲ, ಚಂದ್ರು ಜಂಗಲಿ, ಬಾಳುಸ್ವಾಮಿ ಕುರಂಗಿ, ಮಂಜುನಾಥ ಕೋಲಕಾರ, ರಾಘವೇಂದ್ರ ಮಾವಿನಕಟ್ಟಿ, ಮಂಜುನಾಥ ಪಾರಿಶ್ವಾಡ್, ವಿಕ್ರಂ ಜಂಗಲಿ, ಬಸವರಾಜ ಕೋಲಕಾರ, ರುದ್ರಯ್ಯ ಹಂಚಿನ್, ಶ್ರೀಶೈಲ್ ಪಾಟೀಲ, ವಿಜಯ ಪಾಟೀಲ, ಸಂತೋಷ ಮಡ್ಡೆಪ್ಪಗೋಳ, ಎಸ್. ಬಿ. ಶಿವನಾಯ್ಕರ್, ಬಸವರಾಜ ತೋರ್ಲಿ, ಶಿವನಗೌಡ ಪಾಟೀಲ, ಈರಪ್ಪ ಮಾಥಾರಿ, ಮಹಾನಂದಾ ಬಸಲಿಂಗ ಮರಕಟ್ಟಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ