Kannada NewsKarnataka NewsPolitics

*ಬೆಂಗಾವಲು ವಾಹನ ಬಳಸಲ್ಲ, ಮೇಟ್ರೋದಲ್ಲೇ ಪ್ರಯಾಣಿಸುವೆ: ಆರ್ ಅಶೋಕ*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಅಷ್ಟ ಸೂತ್ರಗಳ ಪಾಲನೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮುಂದಾಗಿದ್ದಾರೆ. ತಮ್ಮ ಬೆಂಗಾವಲು ವಾಹನಗಳನ್ನು ಕಡಿತಗೊಳಿಸುವ ಮೂಲಕ ಮಿತವ್ಯಯದ ಮಾದರಿಯನ್ನು ತೋರಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್. ಅಶೋಕ್, ಪ್ರಧಾನಿ ಮೋದಿಯವರ ಕರೆಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆ. ಈ ನಿಟ್ಟಿನಲ್ಲಿ ನನ್ನ ಬೆಂಗಾವಲು ವಾಹನಗಳ ಬಳಕೆಯನ್ನು ಶೇ. 30 ರಿಂದ 40ರಷ್ಟು ಕಡಿತಗೊಳಿಸಲು ನಿರ್ಧರಿಸಿದ್ದೇನೆ. ಮದುವೆಗಳಂತಹ ಸಮಾರಂಭಗಳಿಗೆ ಹೋದಾಗ ಎಲ್ಲಾ ವಾಹನಗಳನ್ನು ಬಳಸುವುದಿಲ್ಲ. ಅಷ್ಟೇ ಅಲ್ಲದೆ, ವಾರದಲ್ಲಿ ಒಂದೆರಡು ದಿನ ಮೆಟ್ರೋ ರೈಲಿನಲ್ಲಿ ಸಂಚರಿಸಲು ತೀರ್ಮಾನಿಸಿದ್ದೇನೆ, ಎಂದು ತಿಳಿಸಿದರು. 

ತಾವು ಸಾರಿಗೆ ಸಚಿವರಾಗಿದ್ದ ಕಾಲದಲ್ಲಿ ಜಾರಿಗೆ ತಂದಿದ್ದ ಬಸ್ ಡೇ ಯೋಜನೆಯನ್ನು ನೆನಪಿಸಿದ ಅಶೋಕ್, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೂ ಈ ಮಾದರಿಯನ್ನು ಅನುಸರಿಸುವಂತೆ ಆಗ್ರಹಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಾರಕ್ಕೊಮ್ಮೆ ಕಡ್ಡಾಯವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಂತೆ ನಿಯಮ ರೂಪಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ. ಯುದ್ಧ ನಿಲ್ಲುವ ಲಕ್ಷಣಗಳಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಚಿಲ್ಲರೆ ರಾಜಕೀಯ ಬಿಟ್ಟು ದೇಶದ ಹಿತದೃಷ್ಟಿಯಿಂದ ಮಿತವ್ಯಯಕ್ಕೆ ಸಹಕರಿಸಬೇಕು, ಎಂದು ಅವರು ಚಾಟಿ ಬೀಸಿದ್ದಾರೆ.

ಯುದ್ಧದ ಪರಿಣಾಮವಾಗಿ ಹೊರ್ಮುಜ್ ಜಲಸಂಧಿ ಮುಚ್ಚಿರುವುದು ಜಾಗತಿಕ ಹಡಗು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಸೂಚನೆಯನ್ನು ಸಾಂಕೇತಿಕವಾಗಿ ಅಲ್ಲದೆ, ಸಮಸ್ಯೆ ಬಗೆಹರಿಯುವವರೆಗೂ ಪಾಲಿಸುವುದಾಗಿ ಅಶೋಕ್ ಭರವಸೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button