ನಿಜಾಮುದ್ದೀನ್ ತಬ್ಲೀಘಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರೆ ತಕ್ಷಣ ಮಾಹಿತಿ ನೀಡಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಿಂದ ಯಾರಾದರೂ ನಿಜಾಮುದ್ದೀನ್ ತಬ್ಲೀಘಿ ಧಾರ್ಮಿಕ ಸಭೆ ಸೇರಿದಂತೆ ಅನ್ಯ ರಾಜ್ಯ ಹಾಗೂ ರಾಷ್ಟ್ರಗಳಿಗೆ ಹೋಗಿ ಬಂದಿದ್ದರೆ ಅಂತವರು ತಾವಾಗಿಯೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆ ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಈಗಾಗಲೇ ಕೊರೊನಾ ವೈರಸ್ ಬೆಳಗಾವಿ ಜಿಲ್ಲೆಗೂ ಲಗ್ಗೆ ಇಟ್ಟಿದೆ. ಮೂರು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ದೆಹಲಿಯ ನಿಜಾಮುದ್ದೀನ್ ಮಸೀದ್‌ನಲ್ಲಿ ನಡೆದ ತಬ್ಲೀಘಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿರುವ ಜಿಲ್ಲೆಯ ಮೂವರಲ್ಲಿಯೂ ಕೋವಿಡ್-೧೯ ಸೊಂಕು ಕಾಣಿಸಿಕೊಂಡಿದ್ದರಿಂದ ಜನರು ಇನ್ನೂ ಹೆಚ್ಚು ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ ಯಾರಾದರೂ ಹೊರ ರಾಜ್ಯ ಅಥವಾ ಹೊರ ದೇಶದಿಂದ ಬಂದಿದ್ದರೆ ಮಾಹಿತಿ ನೀಡಬೇಕು ಎಂದಿದ್ದಾರೆ.
ಏಪ್ರೀಲ್-೧೪ರ ತನಕ ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದು, ಯಾರೂ ಮನೆಯಿಂದ ಆಚೆ ಬರಬಾರದು. ಪ್ರತಿಯೊಬ್ಬರು ಮನೆಯಲ್ಲಿಯೇ ಇರಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶ ಪಾಲಿಸಬೇಕಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಕೊರೊನಾ ಸೊಂಕಿನಿಂದ ಸೃಷ್ಟಿಯಾಗಿರುವ ಅಂಧಕಾರದಿಂದ ದೇಶವನ್ನು ಬೆಳಕಿನೆಡೆಗೆ ಒಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭಿಯಾನ ಪ್ರಕಟಿಸಿದ್ದು, ಭಾನುವಾರ ರಾತ್ರಿ ೯ ಗಂಟೆಗೆ ನಡೆಯುವ ದೀಪ ಬೆಳಗುವ ಅಭಿಯಾನವನ್ನು ಯಶಸ್ವಿಗೊಳಿಸಿ ಕೊರೊನಾ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸುವಂತೆ ಜಾರಕಿಹೊಳಿ ಅವರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಏಪ್ರೀಲ್ ೫ರಂದು ಮನೆ-ಮನೆಗಳಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕೊರೊನಾ ಕತ್ತಲಿನಿಂದ ಬೆಳಕಿನೆಡೆಗೆ ಹೆಜ್ಜೆ ಇಡುವಂತೆ ಪ್ರಧಾನಿಗಳು ಸಂಕಲ್ಪ ಮಾಡಿದ್ದಾರೆ. ಅವರ ಆಶಯದಂತೆ ನಾವೆಲ್ಲರೂ ಮನೆ -ಕ್ವಾರಂಟೈನ್ ಗಳಲ್ಲಿ ಏಕಾಂತ ಅನುಭವಿಸುತ್ತಿರುವ ಮನಗಳಿಗೆ ಭರವಸೆಯ ಆಶಾಕಿರಣ ಮೂಡಿಸಿ ಕೊರೊನಾ ಮಣಿಸಲು ಸಾಮೂಹಿಕ ದೃಢ ಸಂಕಲ್ಪ ಮಾಡಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಭಾನುವಾರ ರಾತ್ರಿ ೯ ಗಂಟೆಗೆ ಮೊಂಬತ್ತಿಯಾಗಲಿ, ದೀಪವಾಗಲಿ ಅಥವಾ ಟಾರ್ಚ್ ಆಗಲಿ ಒಂಬತ್ತು ನಿಮಿಷಗಳ ಕಾಲ ಬೆಳಗಬೇಕು. ಮನೆಯೊಳಗೆ ಇದ್ದುಕೊಂಡು ಸಾಮಾಜಿಕ ಅಂತರ ಪಾಲಿಸಬೇಕು. ಯಾವುದೇ ಕಾರಣಕ್ಕೂ ಗುಂಪುಗೂಡಬಾರದು ಎಂದು ಅವರು ವಿನಂತಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ