ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕನಾದರೆ ನಮ್ಮ ಮಕ್ಕಳು ನಮ್ಮ ಮನೆಯ ಸಂಸ್ಕೃತಿಯ ನಾಯಕರಾಗಲಿ – ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬಸವಣ್ಣನವರನ್ನು ನಮ್ಮ ಸರಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಬಸವಣ್ಣ ನಮ್ಮ ನಾಡಿನ ಸಾಂಸ್ಕೃತಿಕ ನಾಯಕನಾದರೆ ನಮ್ಮ ಮಕ್ಕಳನ್ನು ನಮ್ಮ ಮನೆಯ ಸಂಸ್ಕೃತಿಯ ನಾಯಕರನ್ನಾಗಿ ನಾವು ಬೆಳೆಸೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದ್ದಾರೆ.
ಭಾನುವಾರ ಸಂಜೆ ಬೆಳಗಾವಿಯ ಸಾಂಬ್ರಾ ಬಸವೇಶ್ವರ ದೇವಸ್ಥಾನದಲ್ಲಿ ಅಡವೀಶ್ವರ ದೇವರ ನೇತೃತ್ವದಲ್ಲಿ ಶ್ರಾವಣ ಮಾಸದ ನಿಮಿತ್ಯ ನಡೆಯುತ್ತಿರುವ ಮಹಾತ್ಮರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವುರ ಮಾತನಾಡಿದರು.
ನಾವು ಬಸವಣ್ಣನ ಅನುಯಾಯಿಗಳು. ಅವರ ದಾರಿಯಲ್ಲಿ ನಡೆಯುತ್ತೇವೆ ಎಂದು ತೋರಿಸುವುದಕ್ಕೆ ನಾವು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ದಯವೇ ಧರ್ಮದ ಮೂಲವಯ್ಯ, ಕಳಬೇಡ, ಕೊಲಬೇಡ, ಅಸಹ್ಯ ನುಡಿಯಬೇಡ, ಅನ್ಯರ ಹಳಿಯಬೇಡ ಎಂದು ಬಸವಣ್ಣ ಹೇಳಿದ್ದಾರೆ. ಅವರ ನುಡಿಗಳನ್ನು ಸ್ವಂತ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆದರೆ ದಿನಬೆಳಗಾದರೆ ಅತ್ಯಾಚಾರ, ಅನಾಚಾರ, ಕೊಲೆ, ಸುಲಿಗೆ ಸುದ್ದಿ ಕೇಳಬೇಕಾಗಿದೆ. ನಮ್ಮ ಸಂಸ್ಕೃತಿ ಏನು, ನಮ್ಮ ಸಂಬಂಧಗಳೇನು ಎನ್ನುವುದನ್ನು ಮರೆತಂತೆ ವರ್ತಿಸುತ್ತಿದ್ದೇವೆ. ಬಸವಣ್ಣನ ನೀತಿಯನ್ನು ನಮ್ಮ ಮಕ್ಕಳಿಗೆ ಕಲಿಸಿಕೊಡುವ ಜವಾಬ್ದಾರಿ ನಮ್ಮದು. ನಮ್ಮ ಸಂಸ್ಕೃತಿಯನ್ನು ಉಳಿಸಿ, ಜಗತ್ತಿಗೆ ಸಾರಲು ಮಕ್ಕಳಿಗೆ ಕಲಿಸಬೇಕಾಗಿದೆ. ಬಸವಣ್ಣ ನಮ್ಮ ನಾಡಿನ ಸಾಂಸ್ಕೃತಿಕ ನಾಯಕವನಾದರೆ, ನಮ್ಮ ಮಕ್ಕಳು ನಮ್ಮ ಮನೆಯ ಸಂಸ್ಕೃತಿಯ ನಾಯಕರಾಗಬೇಕು. ಹಾಗೆ ನಾವು ಬೆಳೆಸಬೇಕು ಎಂದು ಹೆಬ್ಬಾಳಕರ್ ತಿಳಿಸಿದರು.
ನಮ್ಮ ಸಂಸ್ಕೃತಿಯನ್ನು ನಾವು ಮರೆತು ಬಿಡುತ್ತೇವೇನೋ ಎನ್ನುವ ಆತಂಕ ಒಂದು ಸಂದರ್ಭದಲ್ಲಿ ಇತ್ತು. ಆದರೆ ನಾವು ಮರೆತಿಲ್ಲ, ಅದಕ್ಕೆ ಕಾರಣ ನಮ್ಮ ಸಂಸ್ಕೃತಿ ಅಷ್ಟು ಗಟ್ಟಿಯಾಗಿ ಬೇರೂರಿದೆ. ನಮ್ಮ ಸಂಸ್ಕೃತಿಯ ಬಗ್ಗೆ ನಮಗೆ ಕಾಳಜಿ ಇದೆ ಎಂದು ಸಚಿವರು ತಿಳಿಸಿದರು.
ನಾನು ಹಳ್ಳಿಯಲ್ಲಿ ಹುಟ್ಟಿ, ಸರಕಾರಿ ಬಸ್ ನಲ್ಲಿ ಓಡಾಡಿ, ಈ ಮಟ್ಟಕ್ಕೆ ಬೆಳೆಯಲು ನಮ್ಮ ಗ್ರಾಮೀಣ ಕ್ಷೇತ್ರದ ಜನರ ಸಹಕಾರವೇ ಕಾರಣಎಂದು ಸ್ಮರಿಸಿದ ಸಚಿವರು, ಜನರ ತಿರಸ್ಕಾರ, ಪುರಸ್ಕಾರ ಎಲ್ಲವನ್ನೂ ನಾನು ಸಹಿಸಿಕೊಂಡು ಭಕ್ತಿ ಭಾವನೆಯಿಂದ ಕೆಲಸ ಮಾಡುತ್ತಿದ್ದೇನೆ, ಸಾಂಬ್ರಾ ಗ್ರಾಮದ ಜಾತ್ರೆಯ ನಿಮಿತ್ತ 5 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರಿನ ಖ್ಯಾತ ಪ್ರವಚನಕಾರರಾದ ಪೂಜ್ಯ ಶ್ರೀ ನಿರಂಜನ ದೇವರು, ಬಸವೇಶ್ವರ ಪ್ರವಚನ ಸೇವಾ ಕಮೀಟಿ ಸದಸ್ಯರು, ನಾಗೇಶ್ ದೇಸಾಯಿ, ಸುರೇಶ್ ದೇಸಾಯಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ