ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಜ್ಯೋತಿರ್ಲಿಂಗ, ಮಂದಿರ, ಮಸೀದಿ, ಚರ್ಚ್ ಶ್ರೇಷ್ಠ ಎನ್ನುವ ಜನ ಇದನ್ನೆಲ್ಲ ಹಿಡಿದಿಟ್ಟ ದೇಶ ಎಷ್ಟು ಶ್ರೇಷ್ಠ ಎನ್ನುವುದನ್ನು ಮರೆತಿದ್ದಾರೆ. ದೇಶವನ್ನು ನಾವು ತಾಯಿಯಂತೆ ಪೂಜಿಸಿದರೆ ಈ ಎಲ್ಲವನ್ನು ಪೂಜಿಸಿದಂತೆ ಎಂದು ಗೌರಿಗದ್ದೆಯ ಅವಧೂತ ವಿನಯ ಗುರೂಜಿ ಹೇಳಿದರು.
ರವಿವಾರ ತಡರಾತ್ರಿ ಇಲ್ಲಿಗೆ ಸಮೀಪದ ನಿಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಅಜ್ಜ-ಅಜ್ಜಿ ಜೊತೆ ತುಂಬು ಕುಟುಂಬದ ಜೀವನ ನಡೆಸುವ ಉತ್ತರ ಕರ್ನಾಟಕದ ಜನರಿಗೆ ಪ್ರವಚನ ಬೇಕಿಲ್ಲ. ಸನ್ಯಾಸಿಯಾದವರು ಭಕ್ತರನ್ನು ತನ್ನ ಮಕ್ಕಳಂತೆ ನೋಡಿಕೊಳ್ಳಬೇಕು ಅಂತಹ ಗುರು ಈ ಭಾಗದ ಜನರಿಗೆ ಸಿಕ್ಕಿದ್ದಾರೆ. ಉತ್ತರ ಕರ್ನಾಟಕದ ಭಾಗದ ಜನ ಅನಾಥರಲ್ಲ. ಇಲ್ಲಿನ ಮಠಗಳು- ಮಠಾಧೀಶರು ಜನರ ಅನಾಥ ಪ್ರಜ್ಞೆ ಹೋಗಲಾಡಿಸಿದ್ದಾರೆ ಎಂದರು.
ತಂದೆ-ತಾಯಿ ಕಾಮನೆಯಿಂದ ಜನ್ಮ ಕೊಟ್ಟರೆ, ಗುರು ಜ್ಞಾನದಿಂದ ಜನ್ಮ ಕೊಡುತ್ತಾನೆ. ಇಂದಿನ ಯುನಿವರ್ಸಿಟಿಗಳು ಕೇವಲ ದುಡ್ಡು ಗಳಿಸುವದನ್ನು ಕಲಿಸಿಕೊಟ್ಟಿವೆಯೇ ಹೊರತು ದುಡ್ಡಿನ ಉಪಯೋಗ ಕಲಿಸಿಕೊಟ್ಟಿಲ್ಲ. ದುಡ್ಡಿನ ಉಪಯೋಗ ಬಸವಣ್ಣವರು ಜಗತ್ತಿಗೆ ಸಾರಿದ್ದಾರೆ. ವೀರಶೈವ ಸಮುದಾಯ ದಾಸೋಹದ ಮೂಲಕ ಸಮಾಜದ ಹಿತ ಕಾಪಾಡುತ್ತಿದೆ. ಪ್ರೀತಿ-ಮಮಕಾರಗಳು ಮೋಕ್ಷಕ್ಕೆ ದಾರಿ ಮಾಡಿಕೊಡುತ್ತವೆ ಎಂದರು.
ಇಂದಿನ ಮನುಕುಲ ಪಾರ್ಟಿಗೆ ಹೋಗುವಷ್ಟು ಖುಷಿಯಿಂದ ಪ್ರವಚನಕ್ಕೆ ಬರುವದಿಲ್ಲ. ಪ್ರವಚನ ಬರುವವರು ಮನಸ್ಸು ಪರಿವರ್ತನೆಯಾಗಬೇಕು. ನಿಡಸೋಸಿ ಮಠದ ಪರಿಸರ ನಿಜವಾದ ಅನುಭವ ಮಂಟಪವನ್ನು ನೋಡಿದಂತಾಗಿದೆ. ಇಲ್ಲಿನ ಜನರ ಸಂಸ್ಕಾರ ನನಗೆ ಹೊಸತನದ ಪರಿಚಯ ಮಾಡಿಕೊಟ್ಟಿದೆ. ಚಿಕ್ಕಮಕ್ಕಳು ಪ್ರವಚನ ಕೇಳುವುದನ್ನು ನೋಡಿದೆ ನನಗೆ ಶಿವರಾತ್ರಿ ಬದಲು ಹೊಸ ವರ್ಷದ ನೆನಪಾಗುತ್ತಿದೆ. ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಯಲ್ಲಿರುವ ಸರಳತೆ, ಮಾನವೀಯ ಚಿಂತನೆಗಳು ಇಲ್ಲಿನ ಪರಿಸರವನ್ನು ಶುಚಿಗೊಳಿಸುವ ಕಾರ್ಯ ಮಾಡುತ್ತಿವೆ. ಶಿವರಾತ್ರಿಯಲ್ಲಿ ೧೧ ದಿನಗಳ ಕಾಲ ಪ್ರವಚನ ನಿಜವಾದ ಏಕಾದಶ ಆಚರಿಸುವಂತಾಗಿದೆ. ಆ ಶಿವನೇ ಹಿಮಾಲಯದಿಂದ ಪಂಚಮ ಶಿವಲಿಂಗೇಶ್ವರರ ರೂಪದಲ್ಲಿ ನಿಡಸೋಸಿಗೆ ಭಕ್ತರನ್ನು ಹುಡುಕಿಕೊಂಡು ಬಂದಿದ್ದಾನೆ ಎಂದರು.
ಮೊಬೈಲ್-ಇಂಟರನೆಟ್ ಭಾರತೀಯ ಪರಿಸರ ಹಾಗೂ ಸಂಸ್ಕೃತಿಯನ್ನು ಹಾಳು ಮಾಡುವುದರ ಜೊತೆಗೆ ಜನರ ಮೆದುಳಿನ ದೌರ್ಬಲ್ಯಕ್ಕೆ ಕಾರಣವಾಗುತ್ತಿವೆ. ಮೊಬೈಲ್ ತರಂಗಾಂತರಗಳಿಂದ ಬದುಕಿನ ವೇಗ ಹೆಚ್ಚಾಗಿದೆ. ಆದರೆ ಪರಿಸರದಲ್ಲಿ ಹಕ್ಕಿಗಳ ಸಂತತಿ ಮಾಯವಾಗಿದೆ. ಮೊಬೈಲ್ ಉಪಯೋಗ ಮೆದುಳಿನ ಬುದ್ಧಿಶಕ್ತಿ, ತಾಳ್ಮೆ, ಸಹನೆಗಳು ಕಳೆದುಕೊಳ್ಳುವಂತಾಗಿ ಶಾಂತಿ-ನೆಮ್ಮದಿಯ ಮರಣವಾಗಿದೆ ಎಂದರು.
ರಾಜಕೀಯಕ್ಕೆ ಅಳಿವಿದೆ ಆದರೆ, ಧರ್ಮಕ್ಕೆ ಅಳಿವಿಲ್ಲ, ದೇವರ ದರ್ಶನಕ್ಕಾಗಿ ಕಾಶಿಗೆ ಹೋಗುವ ಬದಲು ತಂದೆ-ತಾಯಿ ಸೇವೆ ಮಾಡಿ, ನಾಯಿಗಾಗಿ ಗುಡಿ ಕಟ್ಟಿಸುವ ಮಹಾತ್ಮರು ತಂದೆ-ತಾಯಿಯನ್ನು ವೃದ್ಧಾಶ್ರಮದಿಂದ ಕರೆತರಲಿ, ಅತ್ತೆ-ಸೊಸೆ ಸಂಬಂಧ ತಾಯಿ-ಮಗಳ ಬಾಂಧವ್ಯವಾಗಬೇಕು ಎಂದರು.
ಘೋಡಗೇರಿಯ ಮಲ್ಲಯ ಸ್ವಾಮೀಜಿ, ನಮ್ಮ ಇತಿಹಾಸ ಅರಿತಾಗ ನಮ್ಮ ಭವಿಷ್ಯದ ಬಗೆಗೆ ನಮಗೆ ಅರಿವಾಗುತ್ತದೆ. ದೇಶದ ಇತಿಹಾಸ ತಿಳಿದುಕೊಂಡರೆ ದೇಶದ ಭವಿಷ್ಯಕ್ಕೆ ನಮ್ಮಿಂದ ಯಾವ ಕಾರ್ಯಗಳಾಗಬೇಕು ಎಂಬ ಸ್ಪಷ್ಟತೆ ದೊರೆಯುತ್ತದೆ ಎಂದರು.
ದಿವ್ಯಸಾನಿಧ್ಯವಹಿಸಿದ್ದ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ, ಮನುಷ್ಯನ ಮನಸ್ಸು ಸಕಾರಾತ್ಮಕ ಚಿಂತನೆಗಳಿಂದ ಪರಿವರ್ತನೆಗೊಳ್ಳುತ್ತದೆ. ಚಿಂತನೆಗಳು ನಮ್ಮ ಮನಸ್ಸಿನಲ್ಲಿ ಬರಬೇಕಾದರೆ ನಮ್ಮ ಇತಿಹಾಸದ ಬದುಕಿನ ಅವಲೋಕನೆ ಮಾಡಿಕೊಂಡಾದ ಭವಿಷ್ಯದ ಬದುಕಿಗೆ ಸ್ಪಷ್ಟತೆ ಸಿಗುತ್ತದೆ ಎಂದರು.
ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ, ಸಾನಿಧ್ಯವಹಿಸಿದ್ದರು. ಶಿವಮೊಗ್ಗದ ಉದ್ಯಮಿ ಪರ್ವತಮಲ್ಪಪ್ಪ ವಿ.ಸಿ., ನಿತೀನ್ ಸೇರಿದಂತೆ ಇತರರು ಆಗಮಿಸಿದ್ದರು. ಬಳಿಕ ಅದೇ ವೇದಿಕೆಯಲ್ಲಿ ಸಾಣೆಹಳ್ಳಿ ಶಿವಸಂಚಾರ ತಂಡದಿಂದ ಚಂದ್ರಹಾಸ ನಾಟಕ ಜರುಗಿತು.
ಈ ಸಂದರ್ಭದಲ್ಲಿ ಸಂಗಮ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಹಿರಾಶುಗರ‍್ಸ ನಿರ್ದೇಶಕ ಪ್ರಭುದೇವ ಪಾಟೀಲ, ಉದ್ಯಮಿ ಬಿ.ಎಲ್. ಖೋತ, ಗಿರೀಶ ಪಾಟೀಲ, ಮಲ್ಲಪ್ಪಾ ಹುದ್ದಾರ, ಶಂಕರ ತನೋಡಿ, ಉಮೇಶ ಪಾಟೀಲ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.
ಸುನೀತಾ ಬಾಗೇವಾಡಿ ಸ್ವಾಗತಿಸಿದರು. ಶೋಭಾ ಮುತಗಿ ಪರಿಚಯಿಸಿ, ಶ್ವೇತಾ ಗೌಡಾಡಿ ನಿರೂಪಿಸಿದರು. ನೀತಿನ ದೇವರು ವಂದಿಸಿದರು.
ವಿಧಾನಸಭಾ ಚುನಾವಣೆ: ಬೆಳಗಾವಿಯಲ್ಲಿ ಸಿದ್ಧತೆ ಆರಂಭ
https://pragati.taskdun.com/assembly-elections-preparations-begin-in-belgaum/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ