ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪಂಚಮಸಾಲಿ ಮೀಸಲಾತಿ ವಿಷಯದಲ್ಲಿ ಸರಕಾರ ನಾಳೆ ಆಟ ಆಡಿದರೆ ನನ್ನ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಕೇಂದ್ರ ಮಾಜಿ ಸಚಿವ, ಹಾಲಿ ಶಾಸಕ, ಪಂಚಮಸಾಲಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿ ಆಯೋಜಿಸಿದ್ದ ಚರ್ಚೆಯಲ್ಲಿ ಪಾಲ್ಗೊಂಡ ಅವರು, ನಾನು ನನ್ನ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಎಲ್ಲ ತ್ಯಾಗಕ್ಕೂ ಸಿದ್ದನಾಗಿದ್ದೇನೆ. ಯಾವುದಕ್ಕೂ ಹೆದರುವವನಲ್ಲ. ನನಗೆ ಮಂತ್ರಿಸ್ಥಾನದ ಆಮಿಷ ನೀಡಿ ಮೀಸಲಾತಿ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡುವ ಯತ್ನವೂ ನಡೆದಿತ್ತು ಎಂದೂ ಅವರು ತಿಳಿಸಿದರು.
ಮೀಸಲಾತಿ ನೀಡುವುದಕ್ಕೆ ಹೈಕಮಾಂಡ್ ಕ್ಲಿಯರ್ ಮಾಡಿದೆ, ಸಂಘ ಪರಿವಾರ ಕ್ಲಿಯರ್ ಮಾಡಿದೆ. ಹಾಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ನಾಳೆ ಕ್ಲಿಯರ್ ಮಾಡ್ತಾರೆ ಎನ್ನುವ ವಿಶ್ವಾಸವಿದೆ. ಎಲ್ಲ ಸಚಿವರೂ ಬೆಂಬಲ ಸೂಚಿಸುತ್ತಾರೆ ಎನ್ನುವ ವಿಶ್ವಾಸವಿದೆ. ಕೇವಲ ಆಶ್ವಾಸನೆ ಕೇಳಲು ನಾವು ಸಿದ್ಧವಿಲ್ಲ. ಆಶ್ವಾಸನೆ ಕೇಳುವ ಕಾಲ ಮುಗಿದಿದೆ. ಮೀಸಲಾತಿ ಘೋಷಣೆಯಾಗಬೇಕು ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ವಿಷಯದಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಅಧಿಕಾರ ಕೊಟ್ಟಿದೆ. ಇದನ್ನು ಕೇಂದ್ರಕ್ಕೆ ಕಳಿಸಬೇಕಾದ ಅಗತ್ಯವಿಲ್ಲ. ಕೇಂದ್ರದ ಕಡೆ ಕೈ ತೋರಿಸುವ ಅಗತ್ಯವಿಲ್ಲ. ನಾಳೆ ಬೊಮ್ಮಾಯಿಯವರು ನಾಟಕ ಮಾಡಿದರೆ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಯತ್ನಾಳ ಗಂಭೀರವಾಗಿ ಎಚ್ಚರಿಸಿದರು.
ಈ ಚರ್ಚಾ ಕಾರ್ಯಕ್ರಮದಲ್ಲಿ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸಹ ಪಾಲ್ಗೊಂಡಿದ್ದರು.
ಕೆಲಸ ಆಗಿದೆ, ಡಿ. 22ರಂದು ಪಂಚಮಸಾಲಿಗಳಿಂದ ವಿಜಯೋತ್ಸವ – ಬಸನಗೌಡ ಪಾಟೀಲ ಯತ್ನಾಳ ಘೋಷಣೆ
https://pragati.taskdun.com/work-is-done-on-dec-22nd-victory-from-panchmasali-announcement-of-basanagowda-patil-yatna/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ